Advertisement

ವನಿತಾ ಟಿ20 ತ್ರಿಕೋನ ಸರಣಿ: ಭಾರತದ ಸೋಲಿನ ಆರಂಭ

07:30 AM Mar 23, 2018 | Team Udayavani |

ಮುಂಬಯಿ: ಭಾರತೀಯ ವನಿತೆಯರ ಸೋಲಿನ ಕೊಂಡಿ ಟಿ20 ತ್ರಿಕೋನ ಸರಣಿಗೂ ವಿಸ್ತರಿಸಿದೆ. ಗುರುವಾರ ನಡೆದ ಆರಂಭಿಕ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಆಸ್ಟ್ರೇಲಿಯದ ಕೈಯಲ್ಲಿ 6 ವಿಕೆಟ್‌ಗಳ ಆಘಾತ ಅನುಭವಿಸಿದೆ. “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 5 ವಿಕೆಟಿಗೆ 152 ರನ್‌ ಬಾರಿಸಿದರೆ, ಇದನ್ನು ಆಸ್ಟ್ರೇಲಿಯ 18.1 ಓವರ್‌ಗಳಲ್ಲೇ ಹಿಂದಿಕ್ಕಿತು; ಕೇವಲ 4 ವಿಕೆಟಿಗೆ 156 ರನ್‌ ಬಾರಿಸಿ ವಿಜಯಿಯಾಯಿತು.

Advertisement

ಮಿಂಚಿದ ಮಂಧನಾ 
ಭಾರತದ ಸರದಿಯಲ್ಲಿ ಮಿಂಚಿದವರೆಂದರೆ ಸ್ಥಳೀಯ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ. 14ನೇ ಓವರ್‌ ತನಕ ಕ್ರೀಸಿನಲ್ಲಿ ಉಳಿದ ಅವರು 41 ಎಸೆತಗಳಿಂದ ಪಂದ್ಯದಲ್ಲೇ ಸರ್ವಾಧಿಕ 67 ರನ್‌ ಬಾರಿಸಿದರು. ಈ ಆಕ್ರಮಣಕಾರಿ ಬೀಸುಗೆಯ ವೇಳೆ 11 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಯಲ್ಪಟ್ಟಿತು. ಮಿಥಾಲಿ ರಾಜ್‌ ಜತೆ ಮೊದಲ ವಿಕೆಟಿಗೆ 9.3 ಓವರ್‌ಗಳಿಂದ 72 ರನ್‌ ಪೇರಿಸುವಲ್ಲಿ ಮಂಧನಾ ನೆರವಾದರು. ಆದರೆ ಮಿಥಾಲಿ ಆಟ ನಿಧಾನ ಗತಿಯಿಂದ ಕೂಡಿತ್ತು. 18 ರನ್ನಿಗೆ ಅವರು 27 ಎಸೆತ ತೆಗೆದುಕೊಂಡರು.

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 13 ರನ್‌ ಮಾಡಿದರೆ, ಮುಂಬಯಿಯವರೇ ಆದ ಜೆಮಿಮಾ ರೋಡ್ರಿಗಸ್‌ ಕೇವಲ ಒಂದು ರನ್‌ ಮಾಡಿ ನಿರ್ಗಮಿಸಿದರು. ವೇದಾ ಕೃಷ್ಣಮೂರ್ತಿ ಗಳಿಕೆ ಅಜೇಯ 15 ರನ್‌. ಆದರೆ 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಅನುಜಾ ಪಾಟೀಲ್‌ ಆಟ ಅಬ್ಬರದಿಂದ ಕೂಡಿತ್ತು. ಅವರು 21 ಎಸೆತಗಳಿಂದ 35 ರನ್‌ ಬಾರಿಸಿದರು (6 ಬೌಂಡರಿ, 1 ಸಿಕ್ಸರ್‌).

ಆಸ್ಟ್ರೇಲಿಯದ ಸ್ಟ್ರೈಕ್‌ ಬೌಲರ್‌ಗಳಾದ ಮೆಗಾನ್‌ ಶಟ್‌ ಮತ್ತು ಆ್ಯಶ್ಲಿ ಗಾಡ್ನìರ್‌ ಅತ್ಯಂತ ಬಿಗುವಿನ ದಾಳಿ ಸಂಘ ಟಿಸಿದರು. ಇಬ್ಬರೂ ಒಂದೊಂದು ಮೇಡನ್‌ ಓವರ್‌ ಎಸೆದು ಆತಿಥೇಯ ಮೇಲೆ ನಿಯಂತ್ರಣ ಹೇರಿದರು.

ಮೂನಿ-ವಿಲ್ಲಾನಿ ಹೋರಾಟ
ಚೇಸಿಂಗ್‌ ವೇಳೆ ಜೂಲನ್‌ ಗೋಸ್ವಾಮಿ ಘಾತಕ ಸ್ಪೆಲ್‌ ಒಂದನ್ನು ನಡೆಸಿ ಆಸೆ ಚಿಗುರಿಸಿದರು. ಅಲಿಸ್ಸಾ ಹೀಲಿ (4) ಮತ್ತು ಗಾಡ್ನìರ್‌ (15) ವಿಕೆಟ್‌ 29 ರನ್‌ ಆಗುವಷ್ಟರಲ್ಲಿ ಉರುಳಿತು. ಆದರೆ ಆಸೀಸ್‌ ಚೇತರಿಸಿಕೊಂಡು ಮುನ್ನುಗ್ಗಿತು.  ಬೆತ್‌ ಮೂನಿ-ಎಲಿಸ್‌ ವಿಲ್ಲಾನಿ 3ನೇ ವಿಕೆಟಿಗೆ 79 ರನ್‌ ಪೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಓಪನರ್‌ ಮೂನಿ ಅತ್ಯಧಿಕ 45 ರನ್‌, ವಿಲ್ಲಾನಿ 39, ನಾಯಕಿ ಲ್ಯಾನಿಂಗ್‌ 35 ರನ್‌ ಹೊಡೆದರು.

Advertisement

ಭಾರತ ತನ್ನ ಮುಂದಿನ ಪಂದ್ಯವನ್ನು ಮಾ. 25ರಂದು ಇಂಗ್ಲೆಂಡ್‌ ವಿರುದ್ಧ ಆಡಲಿದೆ. ಶುಕ್ರವಾರ ಆಸ್ಟ್ರೇಲಿಯ-ಇಂಗ್ಲೆಂಡ್‌ ಮುಖಾಮುಖೀಯಾಗಲಿವೆ.

ಸಂಕ್ಷಿಪ್ತ ಸ್ಕೋರ್‌
ಭಾರತ-20 ಓವರ್‌ಗಳಲ್ಲಿ 5 ವಿಕೆಟಿಗೆ 152 (ಮಂಧನಾ 67, ಅನುಜಾ 35, ಮಿಥಾಲಿ 18, ಗಾಡ್ನìರ್‌ 22ಕ್ಕೆ 2, ಪೆರ್ರಿ 31ಕ್ಕೆ 2). ಆಸ್ಟ್ರೇಲಿಯ-18.1 ಓವರ್‌ಗಳಲ್ಲಿ 4 ವಿಕೆಟಿಗೆ 156 (ವಿಲ್ಲಾನಿ 39, ಮೂನಿ 48, ಲ್ಯಾನಿಂಗ್‌ 35, ಜೂಲನ್‌ 30ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next