ಮುಂಬಯಿ: ಅತ್ಯಂತ ರೋಚಕವಾಗಿ ಸಾಗಿದ ಭಾರತ-ಆಸ್ಟ್ರೇಲಿಯ ನಡುವಿನ ದ್ವಿತೀಯ ವನಿತಾ ಟಿ20 ಪಂದ್ಯ ಟೈಯಲ್ಲಿ ಅಂತ್ಯ ಕಂಡಿತು. ಬಳಿಕ ಸೂಪರ್ ಓವರ್‌ನಲ್ಲಿ ಭಾರತ 4 ರನ್ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ ಒಂದೇ ವಿಕೆಟಿಗೆ 187 ರನ್ ಪೇರಿಸಿದರೆ, ಭಾರತ 20 ಓವರ್‌ಗಳಲ್ಲಿ 5 ವಿಕೆಟಿಗೆ 187 ರನ್ ಬಾರಿಸಿತು. ಸೂಪರ್ ಓವರ್‌ನಲ್ಲಿ ಭಾರತ ಒಂದು ವಿಕೆಟಿಗೆ 20 ರನ್ ಮಾಡಿದರೆ, ಆಸ್ಟ್ರೇಲಿಯ ಒಂದು ವಿಕೆಟಿಗೆ 16 ರನ್ ಮಾಡಿ ಶರಣಾಯಿತು.
ಸ್ಮತಿ ಮಂಧನಾ 79, ಶಫಾಲಿ ವರ್ಮ 34, ರಿಚಾ ಘೋಷ್ ಅಜೇಯ 26 ರನ್ ಬಾರಿಸಿ ಭಾರತದ ಹೋರಾಟವನ್ನು ಜಾರಿಯಲ್ಲಿರಿಸಿದರು. ಅಂತಿಮ ಓವರ್‌ನಲ್ಲಿ ಭಾರತದ ಜಯಕ್ಕೆ 14 ರನ್ ಅಗತ್ಯವಿತ್ತು. ಕೊನೆಯ ಎಸೆತವನ್ನು ಬೌಂಡರಿಗೆ ಬಾರಿಸಿದ ದೇವಿಕಾ ವೈದ್ಯ ಪಂದ್ಯವನ್ನು ಟೈಗೊಳಿಸುವಲ್ಲಿ ಯಶಸ್ವಿಯಾದರು.
ಆಸ್ಟ್ರೇಲಿಯ ಪರ ಬೆತ್ ಮೂನಿ ಅಜೇಯ 82 ಹಾಗೂ ತಹ್ಲಿಯಾ ಮೆಕ್‌ಗ್ರಾತ್ ಅಜೇಯ 70 ರನ್ ಬಾರಿಸಿದರು. ಈ ಜೋಡಿಯಿಂದ ಮುರಿಯದ ದ್ವಿತೀಯ ವಿಕೆಟಿಗೆ 158 ರನ್ ಹರಿದು ಬಂತು. ಅಲಿಸ್ಸಾ ಹೀಲಿ (25) ಅವರ ಏಕೈಕ ವಿಕೆಟ್ ದೀಪ್ತಿ ಶರ್ಮ ಪಾಲಾಯಿತು.