Advertisement

ವನಿತಾ ಟಿ20 ತ್ರಿಕೋನ ಸರಣಿ : ಇಂದು ಭಾರತ-ಕಾಂಗರೂ ಫೈನಲ್‌ ಕದನ

09:13 AM Feb 13, 2020 | sudhir |

ಮೆಲ್ಬರ್ನ್: ಇನ್ನು ಹತ್ತೇ ದಿನಗಳಲ್ಲಿ ಆರಂಭವಾಗಲಿರುವ ವನಿತಾ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಉತ್ತಮ ಅಭ್ಯಾಸ ಒದಗಿಸಿದ ಟಿ20 ತ್ರಿಕೋನ ಸರಣಿಯ ಪ್ರಶಸ್ತಿ ಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಬುಧವಾರ ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯ ತಂಡಗಳು ಇಲ್ಲಿನ “ಜಂಕ್ಷನ್‌ ಓವಲ್‌’ನಲ್ಲಿ ಪರಸ್ಪರ ಎದುರಾಗಲಿವೆ.

Advertisement

ಇಂಗ್ಲೆಂಡನ್ನು ಒಳಗೊಂಡ ಈ ಸರಣಿಯಲ್ಲಿ ಮೂರೂ ತಂಡಗಳು ಸಮಬಲದ ಸಾಧನೆಗೈದಿದ್ದವು. ರನ್‌ರೇಟ್‌ನಲ್ಲಿ ಮುಂದಿದ್ದ ಆಸ್ಟ್ರೇಲಿಯ ಮತ್ತು ಭಾರತಕ್ಕೆ ಫೈನಲ್‌ ಬಾಗಿಲು ತೆರೆದಿತ್ತು. ಲೀಗ್‌ ಹಂತದಲ್ಲಿ ಭಾರತ-ಆಸ್ಟ್ರೇಲಿಯ ಕೂಡ ಸಮಬಲದ ಹೋರಾಟ ತೋರ್ಪಡಿಸಿದ್ದವು. ಮೊದಲ ಸುತ್ತಿನಲ್ಲಿ ಆಸೀಸ್‌ ವನಿತೆಯರು ಗೆದ್ದರೆ, ದ್ವಿತೀಯ ಸುತ್ತಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಜಯಭೇರಿ ಮೊಳಗಿಸಿತ್ತು. ಫೈನಲ್‌ನಲ್ಲಿ ಗೆಲ್ಲುವ ಸರದಿ ಯಾರದು ಎಂಬುದು ಎಲ್ಲರ ಕುತೂಹಲ.

ಮೇಲ್ನೋಟಕ್ಕೆ ಎರಡೂ ತಂಡ ಗಳು ಅತ್ಯುತ್ತಮವಾಗಿಯೇ ಇವೆ. ತವರಿನ ಅಂಗಳದಲ್ಲಿ ಆಡುವುದ ರಿಂದ ಆಸ್ಟ್ರೇಲಿಯಕ್ಕೆ ಲಾಭ ಹೆಚ್ಚು ಎನ್ನಬಹುದು. ಆದರೆ ತವರಲ್ಲೂ ಕಾಂಗರೂ ಪಡೆಯನ್ನು ಮಗುಚ ಬಹುದು ಎಂದು ಭಾರತ ಮತ್ತು ಇಂಗ್ಲೆಂಡ್‌ ತಂಡಗಳೆರಡೂ ತೋರಿಸಿಕೊಟ್ಟಿವೆ. ಹೀಗಾಗಿ ಫೈನಲ್‌ ಸವಾಲು ಆಸೀಸ್‌ ಪಾಲಿಗೆ ನಿರೀಕ್ಷಿಸಿದಷ್ಟು ಸುಲಭವೇನಲ್ಲ.

ಅಗ್ರ ಸರದಿ ನಿರ್ಣಾಯಕ
ಭಾರತದ ಬ್ಯಾಟಿಂಗ್‌ ಟಿ20ಗೆ ಹೇಳಿ ಮಾಡಿಸಿದಂತಿದೆ. ಆದರೆ ಸ್ಥಿರ ಪ್ರದರ್ಶನದ ಕೊರತೆ ಇದೆ. ಅನುಭವಿ ಮಂಧನಾ, ಯುವ ಆರಂಭಕಾರ್ತಿ ಶಫಾಲಿ, ನಾಯಕಿ ಕೌರ್‌, ಜೆಮಿಮಾ ರೋಡ್ರಿಗಸ್‌ ಮೇಲೆ ಭಾರತದ ದೊಡ್ಡ ಮೊತ್ತ ಅವಲಂಬಿತವಾಗಿದೆ. ಚೇಸಿಂಗ್‌ ಅವಕಾಶ ಲಭಿಸಿದರೂ ಇವರು ಸಿಡಿದು ನಿಲ್ಲುವುದು ಮುಖ್ಯ. ಅಕಸ್ಮಾತ್‌ ಅಗ್ರ ಕ್ರಮಾಂಕ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿದರೆ ಭಾರತಕ್ಕೆ ಇಲ್ಲಿ ಮೇಲುಗೈ ಖಂಡಿತ ಸಾಧ್ಯವಿಲ್ಲ. ಕಾರಣ, ಮಧ್ಯಮ ಸರದಿಯಲ್ಲಿ ವೇದಾ ಕೃಷ್ಣಮೂರ್ತಿ, ತನಿಯಾ ಭಾಟಿಯ ಇನ್ನೂ ರನ್‌ ಬರಗಾಲದಿಂದ ಮುಕ್ತರಾಗಿಲ್ಲ.

ಆಸೀಸ್‌ ಎದುರಿನ ದ್ವಿತೀಯ ಸುತ್ತಿನ ಮೇಲಾಟದಲ್ಲಿ ಭಾರತ 173 ರನ್ನುಗಳ ಅಗಾಧ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಹೋಗಿತ್ತು. ಇದು ಫೈನಲ್‌ನಲ್ಲೂ ಸ್ಫೂರ್ತಿ ಆಗಬೇಕಿದೆ.

Advertisement

ಈ ಸರಣಿಯಲ್ಲಿ ಭಾರತದ ಬೌಲರ್‌ಗಳದ್ದು ಸ್ಥಿರ ಹಾಗೂ ಅಮೋಘ ಪ್ರದರ್ಶನ. ದೀಪ್ತಿ, ರಾಜೇಶ್ವರಿ, ಶಿಖಾ, ರಾಧಾ ಘಾತಕವಾಗಿ ಪರಿಣಮಿಸಿದ್ದಾರೆ. ಫೈನಲ್‌ನಲ್ಲೂ ಇವರಿಂದ ಮ್ಯಾಜಿಕ್‌ ನಡೆಯಬೇಕಿದೆ.

ಆಸೀಸ್‌ ಬ್ಯಾಟಿಂಗ್‌ ಬಲಿಷ್ಠ
ಭಾರತದಂತೆ ಆಸ್ಟ್ರೇಲಿಯದ ಬ್ಯಾಟಿಂಗ್‌ ಸರದಿಯೂ ಬಲಿಷ್ಠ. ಓಪನರ್‌ ಮೂನಿ, ವನ್‌ಡೌನ್‌ ಆಟಗಾರ್ತಿ ಗಾರ್ಡನರ್‌ ಹೆಚ್ಚು ಅಪಾಯಕಾರಿ. ಲ್ಯಾನಿಂಗ್‌ ಮತ್ತು ಪೆರ್ರಿ “ಕೀ ಪ್ಲೇಯರ್’ ಆಗಿದ್ದಾರೆ. ಅಲಿಸ್ಸಾ ಹೀಲಿ ಮಾತ್ರ ಬ್ಯಾಟಿಂಗ್‌ ಸಂಕಟದಲ್ಲಿದ್ದಾರೆ. ಕಾಂಗರೂ ಬೌಲಿಂಗನ್ನು ನಿಭಾಯಿಸುವುದು ಸಮಸ್ಯೆಯಲ್ಲ ಎಂಬುದನ್ನು ಭಾರತ ಈಗಾಗಲೇ ಸಾಬೀತುಪಡಿಸಿದೆ. ಆದರೆ ನಿರ್ಣಾಯಕ ಮುಖಾಮುಖೀಯಲ್ಲಿ ಆಸೀಸ್‌ ಯಾವತ್ತೂ ಹೆಚ್ಚು ಅಪಾಯಕಾರಿ. ಇದಕ್ಕೆ, ಗೆಲ್ಲಲೇಬೇಕಿದ್ದ ಇಂಗ್ಲೆಂಡ್‌ ಎದುರಿನ ಅಂತಿಮ ಲೀಗ್‌ ಪಂದ್ಯವೇ ಸಾಕ್ಷಿ.

Advertisement

Udayavani is now on Telegram. Click here to join our channel and stay updated with the latest news.

Next