Advertisement

ಸೂಪರ್‌ನೋವಾಸ್‌ಗೆ ಹ್ಯಾಟ್ರಿಕ್‌ ತಪ್ಪಿಸೀತೇ ಮಂಧನಾ ಟೀಮ್‌?

11:43 PM Nov 08, 2020 | mahesh |

ಶಾರ್ಜಾ: ಸ್ಮತಿ ಮಂಧನಾ ನೇತೃತ್ವದ ಟ್ರೈಲ್‌ಬ್ಲೇಜರ್ ಮತ್ತು ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಕಳೆದೆರಡು ಬಾರಿಯ ಚಾಂಪಿಯನ್‌ ಸೂಪರ್‌ನೋವಾಸ್‌ ತಂಡಗಳು ಸೋಮವಾರ ಮಹಿಳಾ ಟಿ20 ಚಾಲೆಂಜ್‌ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖೀಯಾಗಲಿವೆ. ಟ್ರೈಲ್‌ಬ್ಲೇಜರ್ ಚೊಚ್ಚಲ ಚಾಂಪಿಯನ್‌ ಪಟ್ಟ ಅಲಂಕರಿಸುವ ಕನಸು ಕಾಣುತ್ತಿದ್ದರೆ, ಇನ್ನೊಂದೆಡೆ ಸೂಪರ್‌ನೊàವಾಸ್‌ ಹ್ಯಾಟ್ರಿಕ್‌ ಟ್ರೋಫಿ ಗೆಲ್ಲುವ ಯೋಜನೆಯಲ್ಲಿದೆ. ಆದ್ದರಿಂದ ಇತ್ತಂಡಗಳು ಈ ಪಂದ್ಯದಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರುವುದರಲ್ಲಿ ಅನುಮಾನವಿಲ್ಲ.

Advertisement

ಎಲ್ಲರಿಗೂ ಒಂದೊಂದು ಜಯ
ಲೀಗ್‌ ಹಂತದಲ್ಲಿ ಮೂರೂ ತಂಡಗಳು ಒಂದೊಂದು ಜಯ ಸಾಧಿಸಿದ್ದವು. ಉತ್ತಮ ರನ್‌ಧಾರಣೆ ಹೊಂದಿದ್ದ ಮಂಧನಾ ಪಡೆ ಮೊದಲೇ ಫೈನಲ್‌ ಟಿಕೆಟ್‌ ಬುಕ್‌ ಮಾಡಿತ್ತು. ಆದರೆ ಸೂಪರ್‌ನೋವಾಸ್‌ಗೆ ಈ ಟಿಕೆಟ್‌ ಅಷ್ಟು ಸುಲಭದಲ್ಲಿ ಸಿಕ್ಕಿರಲಿಲ್ಲ. ಶನಿವಾರ ರಾತ್ರಿ ಇದೇ ಟ್ರೈಲ್‌ಬ್ಲೇಜರ್ ವಿರುದ್ಧ 2 ರನ್ನಿನ ಗೆಲುವು ಸಾಧಿಸಿ, ರನ್‌ರೇಟ್‌ನಲ್ಲಿ ವೆಲಾಸಿಟಿಗಿಂತ ಮುಂದಿದ್ದ ಕಾರಣ ಫೈನಲ್‌ಗೆ ನೆಗೆಯಿತು.

ಕೊನೆಯ ಲೀಗ್‌ ಪಂದ್ಯದಲ್ಲಿ ಟ್ರೈಲ್‌ಬ್ಲೇಜರ್ಗೆ ಗೆಲ್ಲುವ ಎಲ್ಲ ಅವಕಾಶವಿತ್ತು. ಆದರೆ ಕೂಟದ ಕುತೂಹಲ ಉಳಿಯುವ ಕಾರಣಕ್ಕಾಗಿ, ಎಲ್ಲ ತಂಡಗಳೂ ಒಂದೊಂದು ಜಯ ಕಾಣಬೇಕೆಂಬ ಲೆಕ್ಕಾಚಾರ ಇಲ್ಲಿ ಕೆಲಸ ಮಾಡಿದಂತಿತ್ತು.

ಅಪಾಯಕಾರಿ ಅತಪಟ್ಟು
ಲಂಕಾದ ಎಡಗೈ ಆಟಗಾರ್ತಿ ಚಾಮರಿ ಅತಪಟ್ಟು ಸೂಪರ್‌ನೋವಾಸ್‌ ತಂಡದ ಅಪಾಯಕಾರಿ ಹಾಗೂ ಪ್ರಮುಖ ಅಸ್ತ್ರವಾಗಿ ಗೋಚರಿಸಿದ್ದಾರೆ. ಎರಡೂ ಪಂದ್ಯಗಳಲ್ಲಿ ಅತಪಟ್ಟು ಸ್ಫೋಟಕ ಬ್ಯಾಟಿಂಗ್‌ನಿಂದ ಮಿಂಚಿದ್ದರು. ಈ ವಿಕೆಟ್‌ ಬೇಗ ಉರುಳಿದರಷ್ಟೇ ಟ್ರೈಲ್‌ಬ್ಲೇಜರ್ ಮೇಲುಗೈ ಪಡೆಯಲು ಸಾಧ್ಯ ಎಂಬುದು ಸದ್ಯದ ಲೆಕ್ಕಾಚಾರ. ಅತಪಟ್ಟು ಅವರಿಗೆ ಪ್ರಿಯಾ ಪೂನಿಯಾ ಉತ್ತಮ ಬೆಂಬಲ ನೀಡುತ್ತಿದ್ದಾರೆ.

ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸುವ ನಾಯಕಿ ಕೌರ್‌ ಕೂಡ ತಂಡಕ್ಕೆ ನೆರವಾಗಬಲ್ಲರು. ಆದರೆ ಭಾರತ ತಂಡದ ಭರವಸೆಯ ಹಾಗೂ ಚುರುಕಿನ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ ಈ ಕೂಟದಲ್ಲಿ ಘೋರ ವೈಫಲ್ಯ ಅನುಭವಿಸಿದ್ದಾರೆ. ಎರಡು ಪಂದ್ಯಗಳಿಂದ ಗಳಿಸಿದ್ದು 8 ರನ್‌ ಮಾತ್ರ. ನಿರ್ಣಾಯಕ ಪಂದ್ಯದಲ್ಲಾದರೂ ಅವರು ಉತ್ತಮವಾಗಿ ಬ್ಯಾಟಿಂಗ್‌ ನಡೆಸಿ ತಂಡದ ನೆರವಿಗೆ ನಿಲ್ಲಬೇಕಾದ ಅನಿವಾರ್ಯ ಇವರ ಮೇಲಿದೆ. ಅಕಸ್ಮಾತ್‌ ಅತಪಟ್ಟು ವಿಕೆಟ್‌ ಬೇಗ ಉರುಳಿದರೆ ಆಗ ಜೆಮಿಮಾ ಅವರೇ ತಂಡದ ಕೈ ಹಿಡಿಯಬೇಕಾಗುತ್ತದೆ. ಸೂಪರ್ನೋವಾಸ್‌ ತಂಡದ ಬೌಲಿಂಗ್‌ ಕೂಡ ಸುಧಾರಣೆ ಕಾಣುವ ಅಗತ್ಯವಿದೆ. ಅನುಜಾ ಪಾಟೀಲ್‌ ಹೊರತುಪಡಿಸಿ ಉಳಿದ ಪ್ರಮುಖ ಬೌಲರ್‌ಗಳು ದುಬಾರಿಯಾಗುತ್ತಿದ್ದಾರೆ. ಅನುಭವಿ ಬೌಲರ್‌ ಪೂನಂ ಯಾದವ್‌ ಕೂಡ ಈ ಯಾದಿಯಲ್ಲಿ ಸೇರಿದ್ದಾರೆ.

Advertisement

ಎರಡೂ ಸಲ ಸೂಪರ್‌ ನೋವಾಸ್‌ ಚಾಂಪಿಯನ್‌
ಕೌರ್‌ ನಾಯಕತ್ವದ ಸೂಪರ್‌ನೋವಾಸ್‌ ಹಿಂದಿನೆರಡೂ ಕೂಟಗಳಲ್ಲಿ ಚಾಂಪಿಯನ್‌ ಆಗಿ ಮೂಡಿಬಂದು ತನ್ನ ಪ್ರಾಬಲ್ಯ ಮೆರೆದಿದೆ. ಮುಂಬಯಿಯಲ್ಲಿ ನಡೆದ 2018ರ ಪಂದ್ಯ ಲಾಸ್ಟ್‌ ಬಾಲ್‌ ಫಿನಿಶಿಂಗ್‌ ಕಂಡಿತ್ತು. ಅಂದು ಟ್ರೈಲ್‌ಬ್ಲೇಜರ್ 6 ವಿಕೆಟಿಗೆ 129 ರನ್‌ ಬಾರಿಸಿದರೆ, ಪೂಜಾ ವಸ್ತ್ರಾಕರ್‌ ಕೊನೆಯ ಎಸೆತದಲ್ಲಿ ಒಂದು ರನ್‌ ಹೊಡೆದು ಸೂಪರ್‌ನೊàವಾಸ್‌ಗೆ ಗೆಲುವು ತಂದಿತ್ತಿದ್ದರು.

2019ರ ಜೈಪುರದ ಫೈನಲ್‌ನಲ್ಲಿ ಸೂಪರ್‌ನೊàವಾಸ್‌ಗೆ ವೆಲಾಸಿಟಿ ತಂಡ ಎದುರಾಗಿತ್ತು. ಈ ಪಂದ್ಯ ಕೂಡ ರೋಚಕ ಹೋರಾಟ ಕಂಡು ಕೊನೆಯ ಎಸೆತದಲ್ಲಿ ಫಲಿತಾಂಶ ದಾಖಲಿಸಿದ್ದು ವಿಶೇಷ. ಮೊದಲು ಬ್ಯಾಟಿಂಗ್‌ ನಡೆಸಿದ ವೆಲಾಸಿಟಿ 6ಕ್ಕೆ 121 ರನ್‌ ಗಳಿಸಿತು. ಸೂಪರ್‌ನೊàವಾಸ್‌ 6 ವಿಕೆಟಿಗೆ 125 ರನ್‌ ಬಾರಿಸಿ 4 ವಿಕೆಟ್‌ ಅಂತರದಿಂದ ಗೆದ್ದು ಬಂತು. ಅಮೇಲಿಯಾ ಕೆರ್ರ ಅಂತಿಮ ಎಸೆತದಲ್ಲಿ ಬೌಂಡರಿ ಸಿಡಿಸಿ ಸೂಪರ್‌ನೋವಾಸ್‌ ಬಳಿಯೇ ಟ್ರೋಫಿ ಉಳಿಯುವಂತೆ ಮಾಡಿದ್ದರು.

ಟ್ರೈಲ್‌ಬ್ಲೇಜರ್ ಸಂಘಟಿತ ತಂಡ
ಟ್ರೈಲ್‌ಬ್ಲೇಜರ್ ತಂಡ ಸಮರ್ಥವಾಗಿದ್ದು ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡರಲ್ಲೂ ಸಂಘಟಿತ ಪ್ರದರ್ಶನ ತೋರುತ್ತಿದೆ. ನಾಯಕಿ ಸ್ಮತಿ ಮಂಧನಾ, ದೀಪ್ತಿ ಶರ್ಮ, ಹರ್ಲಿನ್‌ ದೇವಲ್‌, ವಿಂಡೀಸ್‌ ಆಟಗಾರ್ತಿ ಡಿಯಾಂಡ್ರಾ ಡಾಟಿನ್‌ ಉತ್ತಮ ಬ್ಯಾಟಿಂಗ್‌ ಫಾರ್ಮ್ ನಲ್ಲಿರುವುದರಿಂದ ದೊಡ್ಡ ಮೊತ್ತಕ್ಕೇನೂ ಕೊರತೆ ಎದುರಾಗದು.

ತಂಡದ ಬೌಲಿಂಗ್‌ ಕೂಡ ವೈವಿಧ್ಯಮಯವಾಗಿದೆ. ಟಿ20 ಕ್ರಿಕೆಟಿನ ನಂಬರ್‌ ವನ್‌ ಬೌಲರ್‌, ಇಂಗ್ಲೆಂಡಿನ ಎಡಗೈ ಸ್ಪಿನ್ನರ್‌ ಸೋಫಿ ಎಕ್‌ಸ್ಟೋನ್‌, ಅನುಭವಿ ಜೂಲನ್‌ ಗೋಸ್ವಾಮಿ, ಆಲ್‌ರೌಂಡರ್‌ಗಳಾದ ದೀಪ್ತಿ ಶರ್ಮ, ಹರ್ಲಿನ್‌ ಮತ್ತು ರಾಜೇಶ್ವರಿ ಗಾಯಕ್ವಾಡ್‌ ಘಾತಕ ಬೌಲಿಂಗ್‌ ನಡೆಸಿ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ. 2018ರ ಫೈನಲ್‌ನಲ್ಲಿ ಸೂಪರ್ನೋವಾಸ್‌ ಎದುರು ಅನುಭವಿಸಿದ 3 ವಿಕೆಟ್‌ ಸೋಲಿಗೆ ಸೇಡು ತೀರಿಸಿಕೊಳ್ಳಲು ಟ್ರೈಲ್‌ಬ್ಲೇಜರ್ಗೆ ಇದೊಂದು ಉತ್ತಮ ಅವಕಾಶ.

Advertisement

Udayavani is now on Telegram. Click here to join our channel and stay updated with the latest news.

Next