ದುಬಾೖ: ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದ “ಎ’ ಬಣದ ಅಂತಿಮ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನ ತಂಡವನ್ನು 54 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದ ನ್ಯೂಜಿಲ್ಯಾಂಡ್ ತಂಡವು ಸೆಮಿಫೈನಲ್ ಹಂತಕ್ಕೇರಿತು.
ಬೌಲರ್‌ಗಳು ಮೇಲುಗೈ ಸಾಧಿಸಿದ ಈ ಪಂದ್ಯದಲ್ಲಿ ಪಾಕಿಸ್ಥಾನ ದಾಳಿಗೆ ಕುಸಿದ ನ್ಯೂಜಿಲ್ಯಾಂಡ್ ತಂಡವು 6 ವಿಕೆಟಿಗೆ 110 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಆರಂಭದಿಂದಲೇ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಪಾಕಿಸ್ಥಾನ 11.4 ಓವರ್‌ಗಳಲ್ಲಿ ಕೇವಲ 56 ರನ್ನಿಗೆ ಆಲೌಟಾಗಿ ಸೋಲನ್ನು ಕಂಡಿತು. ತಂಡದ ಮುನೀಬಾ ಅಲಿ ಮತ್ತು ನಾಯಕಿ ಫಾತಿಮಾ ಸನಾ ಮಾತ್ರ ಎರಡಂಕೆಯ ಮೊತ್ತ ಗಳಿಸಿದ್ದರು. ಈ ಗೆಲುವಿನಿಂದ ನ್ಯೂಜಿಲ್ಯಾಂಡ್ ತಾನಾಡಿದ ನಾಲ್ಕು ಪಂದ್ಯಗಳಿಂದ ಆರಂಕ ಪಡೆದು ದ್ವಿತೀಯ ತಂಡವಾಗಿ ಸೆಮಿಫೈನಲಿಗೇರಿದೆ.
ಬಣದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಆಸ್ಟ್ರೇಲಿಯ ತಂಡವು ಅಜೇಯ ತಂಡವಾಗಿ ಸೆಮಿಫೈನಲಿಗೇರಿತ್ತು. ಈ ಮಹತ್ವದ ಪಂದ್ಯದಲ್ಲಿ ಒಂದು ವೇಳೆ ಪಾಕಿಸ್ಥಾನ ಜಯ ಸಾಧಿಸಿದ್ದರೆ ಭಾರತಕ್ಕೆ ಸೆಮಿಫೈನಲಿಗೇರುವ ಅವಕಾಶವೊಂದಿತ್ತು. ನ್ಯೂಜಿಲ್ಯಾಂಡ್ ತಂಡ 110 ರನ್ ಗಳಿಸಿದಾಗ ಪಾಕಿಸ್ಥಾನ ಗೆಲ್ಲಬಹುದೆಂದು ಭಾವಿಸಲಾಗಿತ್ತು. ಆದರೆ ನ್ಯೂಜಿಲ್ಯಾಂಡಿನ ನಿಖರ ದಾಳಿಗೆ ಪಾಕಿಸ್ಥಾನ ನೆಲಕಚ್ಚಿದರಿಂದ ಭಾರತ ಸೆಮಿಫೈನಲಿಗೇರುವ ಆಸೆ ದೂರ ಆಯಿತು.
ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ನೀಡಿತು. ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ್ತಿ ಸೂಜಿ ಬೇಟ್ಸ್, ಸೋಫಿ ಡಿವೈನ್ ಮತ್ತು ಬ್ರೂಕ್ ಹಾಲಿಡೇ ಉತ್ತಮ ನಿರ್ವಹಣೆ ನೀಡಿದರು. ಬೌಲಿಂಗ್‌ನಲ್ಲಿ ನಿಖರ ದಾಳಿ ಸಂಘಟಿಸಿದ ಅಮೇಲಿಯಾ ಕೆರ್ರ 14 ರನ್ನಿಗೆ 3 ವಿಕೆಟ್ ಕಿತ್ತು ಮಿಂಚಿದರು. ಎಡೆನ್ ಕಾರ್ಸನ್ 7 ರನ್ನಿಗೆ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು: ನ್ಯೂಜಿಲ್ಯಾಂಡ್ 6 ವಿಕೆಟಿಗೆ 110 (ಸೂಜಿ ಬೇಟ್ಸ್ 28, ಬ್ರೂಕ್ ಹಾಲಿಡೇ 22, ನಸ್ರಾ ಸಂಧು 18ಕ್ಕೆ 3);
ಪಾಕಿಸ್ಥಾನ 11.4 ಓವರ್‌ಗಳಲ್ಲಿ 56 (ಮುನೀಬಾ ಅಲಿ 15, ಫಾತಿಮಾ ಸನಾ 21, ಅಮೇಲಿಯಾ ಕೆರ್ರ 14ಕ್ಕೆ 3, ಎಡೆನ್ ಕಾರ್ಸನ್ 7ಕ್ಕೆ 2).