ಕನ್ನಡದಲ್ಲಿ ಈಗಂತೂ ವಿಭಿನ್ನ ಕಥಾಹಂದರವುಳ್ಳ ಚಿತ್ರಗಳು ಹೊಸ ನಿರೀಕ್ಷೆ ಹುಟ್ಟಿಸುತ್ತಿವೆ. ಅದರಲ್ಲೂ ಹೊಸಬರ ಚಿತ್ರಗಳು ಕುತೂಹಲ ಕೆರಳಿಸುವುದುಂಟು. ಆ ಸಾಲಿಗೆ ಈಗ “ಓಜಸ್’ ಎಂಬ ಸಿನಿಮಾವೂ ಸೇರಿದೆ. ತೆರೆ ಮೇಲಿನ ಕಲಾವಿದರನ್ನು ಹೊರತುಪಡಿಸಿದರೆ, ತೆರೆ ಹಿಂದೆ ನಿಂತವರೆಲ್ಲರಿಗೂ ಇದು ಹೊಸ ಅನುಭವ. “ಓಜಸ್’ ಚಿತ್ರಕ್ಕೆ ಸಿ.ಜೆ.ವರ್ಧನ್ ನಿರ್ದೇಶಕರು. ಕಥೆ, ಚಿತ್ರಕಥೆ ಜವಾಬ್ದಾರಿ ವಹಿಸಿಕೊಂಡ ಅವರ ಚೊಚ್ಚಲ ಚಿತ್ರವನ್ನು ರಜತ್ ರಘುನಾಥ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ರಜತ್ ರಘುನಾಥ್ ಹಾಗೂ ಡಾ. ಎಡ್ವರ್ಡ್ ಡಿಸೋಜ ಅವರು ನಿರ್ಮಿಸಿದ್ದಾರೆ.
“ಓಜಸ್’ ಅನ್ನುವುದು ಸಂಸ್ಕೃತ ಪದ. ಹಾಗೆಂದರೆ, ಬೆಳಕು ಎಂದರ್ಥ. ಕಥೆಗೆ ಪೂರಕವಾಗಿಯೇ ಶೀರ್ಷಿಕೆ ಇಟ್ಟಿರುವ ಚಿತ್ರತಂಡ, ಫೆಬ್ರವರಿ 7 ರಂದು ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಇದೊಂದು ಕುಡಿತ ವಿಷಯದ ಮೇಲೆ ಬೆಳಕು ಚೆಲ್ಲುವ ಕಥೆ ಹೊಂದಿದೆ. ಕುಡಿತ ಎಷ್ಟು ಮಾರಕ ಎಂಬುದನ್ನಿಲ್ಲಿ ಹೇಳುವುದರ ಜೊತೆಯಲ್ಲಿ ಒಂದು ಫ್ಯಾಮಿಲಿಯಲ್ಲಿ ಕುಡಿತ ಎಂಬ ಅಂಶ ಸೇರಿದಾಗ, ಆ ಫ್ಯಾಮಿಲಿ ಹೇಗೆಲ್ಲಾ ಸಮಸ್ಯೆಗೆ ಸಿಲುಕುತ್ತದೆ. ಅದರ ಪರಿಣಾಮದಿಂದಾಗಿ ಕುಟುಂಬಸ್ಥರು ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾರೆ ಅನ್ನುವುದು ಕಥೆ.
ಇಲ್ಲಿ ಸೆಂಟಿಮೆಂಟ್ ಹೈಲೈಟ್ ಆಗಿದ್ದು, ಕ್ಲೈಮ್ಯಾಕ್ಸ್ ಚಿತ್ರದ ವಿಶೇಷತೆ ಹೊಂದಿದೆ. ಯಾವುದೇ ಲಾಂಗು, ಮಚ್ಚು ಇಲ್ಲದೆ, ಹೊಡೆದಾಟದ ಅಬ್ಬರ ಇಲ್ಲದೆ, ಒಂದು ಹೆಣ್ಣು ಮನೆಗೆ ಹೇಗೆ ಬೆಳಕಾಗುತ್ತಾಳ್ಳೋ, ಅದೇ ಹೆಣ್ಣು ಹೇಗೆ ಸಮಾಜಕ್ಕೆ ಬೆಳಕಾಗಿ ರೂಪಗೊಳ್ಳುತ್ತಾಳೆ ಎಂಬ ಅಂಶ ಒಳಗೊಂಡಿದೆ. ಚಿತ್ರದಲ್ಲಿ ನೇಹಾ ಸಕ್ಸೇನಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟಿ ಭವ್ಯಾ ತಾಯಿ ಪಾತ್ರ ಮಾಡಿದರೆ, ಯತಿರಾಜ್ ಖಳನಟರಾಗಿ ಅಬ್ಬರಿಸಿದ್ದಾರೆ.
ಮೂಲತಃ ವಕೀಲರಾಗಿರುವ ನಿರ್ಮಾಪಕ ರಜತ್ ಅವರಿಗೆ ಸಿನಿಮಾ ಮೇಲಿನ ಪ್ರೀತಿ ನಿರ್ಮಾಪಕರನ್ನಾಗಿಸಿದ್ದು, ಅವರಿಲ್ಲಿ ಪೊಲೀಸ್ ಅಧಿಕಾರಿಯಾಗಿಯೂ ನಟಿಸಿದ್ದಾರೆ. ಮತ್ತೂಬ್ಬ ನಿರ್ಮಾಪಕ ಡಾ. ಎಡ್ವರ್ಡ್ ಡಿಸೋಜ ಸಿಎಂ ಪಾತ್ರ ಮಾಡಿದ್ದಾರೆ. ಉಳಿದಂತೆ ಡಿಂಗ್ರಿ ನಾಗರಾಜ್, ಮೈಸೂರು ರಮಾನಂದ ಇತರರು ನಟಿಸಿದ್ದಾರೆ. ಯಾವುದೇ ಕಟ್ ಇಲ್ಲದೆ “ಯು’ ಪ್ರಮಾಣ ಪತ್ರ ಕೊಡಲಾಗಿದೆ. ಚಿತ್ರಕ್ಕೆ ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣವಿದೆ. ಕಾರ್ತಿಕ್ ವೆಂಕಟೇಶ್ ಸಂಗೀತವಿದೆ. ಕೆ.ಗುರುಪ್ರಸಾದ್ ಸಂಕಲನ, ವಿನಯ್ ಸಂಭಾಷಣೆ ಬರೆದಿದ್ದಾರೆ.