Advertisement

ಮಹಿಳಾ ಠಾಣೆ ಕಟ್ಟಡ ಕಾಮಗಾರಿಗೆ ಮಂಜೂರಾತಿ

02:00 PM Jan 18, 2018 | Team Udayavani |

ಪುತ್ತೂರು: ಸಂಚಾರ ಠಾಣೆಯ ಆಶ್ರಯದಲ್ಲಿರುವ ಮಹಿಳಾ ಠಾಣೆಗೆ ಹೊಸ ಕಟ್ಟಡ ಭಾಗ್ಯಸಿಗಲಿದೆ. ಹಳೆ ಠಾಣೆಯ ಕಟ್ಟಡವನ್ನು ನವೀಕರಣ ಮಾಡಿ, ಅಲ್ಲಿಗೆ ಮಹಿಳಾ ಠಾಣೆ ಶಿಫ್ಟ್‌ ಆಗಲಿದೆ. ಈ ನವೀಕರಣ ಕಾಮಗಾರಿಗೆ ಸರಕಾರ
ಮಂಜೂರಾತಿ ನೀಡಿದೆ.

Advertisement

ಪುತ್ತೂರಿಗೆ ಮಹಿಳಾ ಠಾಣೆ ಮಂಜೂರಾಗುತ್ತಿದ್ದಂತೆ ಕಟ್ಟಡದ ಕೊರತೆ ಎದುರಾಯಿತು. ತಾತ್ಕಾಲಿಕವಾಗಿ ಸಂಚಾರ
ಠಾಣೆಯ ಕಟ್ಟಡದಲ್ಲೇ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸಿಬಂದಿ, ವಾಹನ ಸೌಲಭ್ಯ ಒದಗಿಸಲಾಯಿತು. ಕಟ್ಟಡಕ್ಕಾಗಿ ಹುಡುಕಾಡಿದಾಗ ಕಣ್ಣಿಗೆ ಬಿದ್ದಿದ್ದು ಪಾಳು ಬಿದ್ದ ಹಳೆ ಠಾಣೆ ಕಟ್ಟಡ. ಇದಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸರಕಾರಕ್ಕೆ ರವಾನಿಸಿದ್ದರು. ನವೀಕರಣ ಕಾಮಗಾರಿಗೆ ಸರಕಾರ ಅಂಕಿತ ಹಾಕಿದೆ. 19.20 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸುವಂತೆ ಮಂಜೂರಾತಿಯೂ ದೊರಕಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿಯಿರುವ ಠಾಣೆ ಕಟ್ಟಡ ತೀರಾ ಹಳೆಯದು. ಮೊದಲಿಗೆ
ಕಾನೂನು ಮತ್ತು ಸುವ್ಯವಸ್ಥೆಯನ್ನು ಇದೇ ಕಟ್ಟಡದಿಂದ ನಿರ್ವಹಿಸಲಾಗುತ್ತಿತ್ತು. ಆಗ ಪುತ್ತೂರು ಠಾಣೆಯ ಸರಹದ್ದು
ವಿಸ್ತಾರವಾಗಿತ್ತು. ಗ್ರಾಮಾಂತರ ಠಾಣೆ ಇರಲಿಲ್ಲ. ಆದರೆ, ಜನಸಂಖ್ಯೆ, ವಾಹನ ದಟ್ಟಣೆ ಮಿತಿಯಲ್ಲಿತ್ತು. ಬರಬರುತ್ತಾ
ಪಟ್ಟಣ ಬೆಳೆಯತೊಡಗಿತು. ಪುತ್ತೂರಿಗೆ ಸಂಚಾರ ಠಾಣೆಯ ಅಗತ್ಯವನ್ನು ಇಲಾಖೆಗೆ ಮನಗಾಣಿಸಲಾಯಿತು. ಠಾಣೆ
ಮಂಜೂರಾಯಿತು. ಇದೇ ಹೊತ್ತಲ್ಲಿ ನಗರ ಠಾಣೆಗೆ ಹೊಸ ಕಟ್ಟಡ ನಿರ್ಮಿಸಿದ್ದು, ಸಂಚಾರ ಠಾಣೆ ಹಳೆ ಕಟ್ಟಡದಲ್ಲಿ
ಉದ್ಘಾಟನೆಗೊಂಡಿತು. ಸಂಚಾರ ಠಾಣೆಗೂ ಹೊಸ ಕಟ್ಟಡ ನಿರ್ಮಿಸುತ್ತಿದ್ದಂತೆ, ಹಳೆ ಕಟ್ಟಡ ಪಾಳು ಬಿತ್ತು.

ಕಾಮಗಾರಿ ಶೀಘ್ರ
ಜಿಲ್ಲೆಯ ವಿವಿಧ ಠಾಣೆಗಳಿಗಾಗಿ ಒಟ್ಟು 66 ಲಕ್ಷ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಮಂಜೂರಾತಿ ಸಿಕ್ಕಿದೆ. ಇದರಲ್ಲಿ 19.20 ಲಕ್ಷ ರೂ. ಪುತ್ತೂರು ಮಹಿಳಾ ಠಾಣಾ ಕಟ್ಟಡಕ್ಕೆ. ಹಣ ಮಂಜೂರು ಆಗುತ್ತಿದ್ದಂತೆ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿಯ ಹೊಣೆ ವಹಿಸಿ ಕೊಡಲಾಗುವುದು. ಬಳಿಕ ಕಾಮಗಾರಿ ಆರಂಭವಾಗಲಿದೆ.

ಹಳೆ ಠಾಣೆ ಕಟ್ಟಡ
ಹಳೆ ಠಾಣೆ ಕಟ್ಟಡದ ಒಳಭಾಗ ಸೋರುತ್ತಿದೆ. ಬಾಗಿಲುಗಳು ದುರ್ಬಲಗೊಂಡಿವೆ. ರಸ್ತೆಗೆ ತಾಗಿಕೊಂಡೇ ಕಟ್ಟಡ ಇದ್ದರೂ, ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಗೇಟ್‌ ಇಲ್ಲದೇ ಹೋಗಿದ್ದರೆ, ಅತಿಕ್ರಮಣಕ್ಕೂ ಒಳಗಾಗುವ ಸಾಧ್ಯತೆಯಿತ್ತು. ಆದರೆ ಪೊಲೀಸ್‌ ಭಯದಿಂದಲೋ ಏನೋ, ಪಾಳು ಬಿದ್ದರೂ ಒಳ ಹೋಗಲು ಭಯ ಪಡುತ್ತಾರೆ. ಕಟ್ಟಡದ ಒಳಭಾಗ ಅಸ್ತವ್ಯಸ್ತವಾಗಿದ್ದು, ಕಚೇರಿಗೆ ಸೂಕ್ತ ಸ್ಥಳವಾಗಿ ರೂಪಿಸಲು ನವೀಕರಣ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯನ್ಮುಖವಾಗಿದೆ.

Advertisement

ಏನೆಲ್ಲ ಕಾಮಗಾರಿ?
ಒಟ್ಟು ಠಾಣಾ ಕಟ್ಟಡವನ್ನು ಸಂಪೂರ್ಣ ನವೀಕರಣ ಮಾಡಲು ಇಲಾಖೆ ಮುಂದಾಗಿದೆ. ಮಾಡು ರಿಪೇರಿ, ನೆಲ ದುರಸ್ತಿ, ಗೋಡೆಗೆ ಸಾರಣೆ ಮಾಡಿ, ಸುಣ್ಣ-ಬಣ್ಣ ಬಳಿಯುವುದು ಸಹಿತ ಹಲವು ಕಾಮಗಾರಿ ನಡೆಯಬೇಕಿದೆ. ಇದಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಶೀಘ್ರ ಕೆಲಸ ಆರಂಭ
ಪುತ್ತೂರು ಮಹಿಳಾ ಠಾಣಾ ಕಟ್ಟಡದ ಕಾಮಗಾರಿಗಾಗಿ 19.20 ಲಕ್ಷ ರೂ.ಗೆ ಮಂಜೂರಾತಿ ಸಿಕ್ಕಿದೆ. ಹಣ ಬಿಡುಗಡೆ ಆಗುತ್ತಿದ್ದಂತೆ ಕೆಲಸ ಶುರು ಆಗಲಿದೆ. ಆದಷ್ಟು ಶೀಘ್ರ ಕಟ್ಟಡ ಕಾಮಗಾರಿ ನಡೆದು, ಹೊಸ ಕಟ್ಟಡದಲ್ಲಿ ಮಹಿಳಾ ಠಾಣೆಯ ಕೆಲಸ ಆರಂಭ ಆಗಬೇಕಿದೆ.
ಸುಧೀರ್‌ ಕುಮಾರ್‌ ರೆಡ್ಡಿ,
 ಎಸ್ಪಿ, ದ.ಕ

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next