ಹಾವೇರಿ: ಹಾವೇರಿಯಲ್ಲಿ ಫೆ. 26 ರಿಂದ ಮೂರು ದಿನಗಳ ಕಾಲ ಜರುಗಲಿರುವ 86ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ ಮಹಿಳಾ ಸುರಕ್ಷತೆ, ಮಹಿಳೆಯರ ಸೌಲಭ್ಯಗಳ ಕುರಿತಂತೆ ಜಾಗೃತಿ ವಹಿಸಬೇಕೆಂದು ಸಮ್ಮೇಳನದ ಮಹಿಳಾ ಸಮಿತಿ ಅಧ್ಯಕ್ಷೆ ಹಾಗೂ ಜಿಪಂ ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ ಮನವಿ ಮಾಡಿದರು.
ನಗರದ ಜಿಲ್ಲಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಮಹಿಳಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸತಿ ಪ್ರದೇಶ, ಊಟದ ಪ್ರದೇಶಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಮಹಿಳಾ ಸದಸ್ಯರು ಮಾತನಾಡಿ, ಸಮ್ಮೇಳನದ ಗೋಷ್ಠಿಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ಮಹಿಳಾ ಸಾಹಿತಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಿಗೆ ಸಮ್ಮೇಳನದಲ್ಲಿ ಸನ್ಮಾನಕ್ಕೆ ಅವಕಾಶ ಕಲ್ಪಿಸಬೇಕೆಂದರು. ರಾಜ್ಯದ ವಿವಿಧ ಭಾಗಗಳಿಂದ ಸಮ್ಮೇಳನಕ್ಕೆ ಆಗಮಿಸುವ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆಯ ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಉತ್ತಮ ವಸತಿ ಸೌಕರ್ಯ, ಉತ್ತಮ ಸಾರಿಗೆ ವ್ಯವಸ್ಥೆ, ಸುರಕ್ಷತೆಗೆ ಮಹಿಳಾ ಪೊಲೀಸ್ ಪೇದೆಗಳ ನೇಮಕ, ಪ್ರತ್ಯೇಕ ಊಟದ ಕೌಂಟರ್‌ಗಳನ್ನು ತೆರೆಯುವುದು, ಮಹಿಳಾ ಗೋಷ್ಠಿಗಳನ್ನು ಬೆಳಗಿನ ವೇಳೆಯಲ್ಲಿ ಆಯೋಜಿಸುವುದು, ಸಂಜೆಯೊಳಗಾಗಿ ಮಹಿಳೆಯರು ಭಾಗವಹಿಸುವ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸುವುದು ಸೇರಿದಂತೆ ಹಲವು ಸಲಹೆ ನೀಡಿದರು.
ಇದನ್ನೂ ಓದಿ:ಬೇಡಿಕೆ ಈಡೇರಿಕೆಗೆ ಕಾಫಿ ಬೆಳೆಗಾರರ ಒತ್ತಾಯ
ಸಮ್ಮೇಳನದ ಕಾರ್ಯಕರ್ತರಾಗಿ ಮಹಿಳಾ ಸ್ವಯಂ ಸೇವಕರನ್ನು ಬಳಸಿಕೊಳ್ಳಬೇಕು. ಎನ್‌ಎಸ್‌ಎಸ್, ಎನ್ ಸಿಸಿ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಬೇಕು. ತಾಲೂಕುವಾರು ಮಹಿಳಾ ತಂಡಗಳನ್ನು ರಚಿಸಬೇಕು. ಕಾರ್ಯಕ್ರಮಗಳನ್ನು ಹಂಚಿಕೆ ಮಾಡಿ ಉಪ ಸಮಿತಿಗಳನ್ನು ರಚಿಸಿ ಸಕ್ರಿಯವಾಗಿ ಮಹಿಳೆಯರು ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಮಹಿಳಾ ಸಮಿತಿ ಸದಸ್ಯ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಣ್ಣನವರ, ಹಿರೇಕೆರೂರು ತಹಶೀಲ್ದಾರ್ ಉಮಾ, ಕಸಾಪ ತಾಲೂಕು ಅಧ್ಯಕ್ಷ ಯಲ್ಲಪ್ಪ ಆಲದಕಟ್ಟಿ ಇತರರಿದ್ದರು.