ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ತೆರೆದ ಮಹಿಳಾ ವಿಶ್ರಾಂತಿ ಕೊಠಡಿ ಮಾತ್ರ ಮಹಿಳಾ ಸಿಬ್ಬಂದಿ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಜಿಲ್ಲಾಡಳಿತ ಭವನದಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಮಧ್ಯಾಹ್ನದ ವೇಳೆ ವಿಶ್ರಾಂತಿ ಪಡೆಯಲು ವಿಶ್ರಾಂತಿ ಕೊಠಡಿ ಇಲ್ಲ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಡಿಸಿ ಕಚೇರಿ ಸಭಾಂಗಣದ ಪಕ್ಕದಲ್ಲಿ ವಿಶ್ರಾಂತಿ ಕೊಠಡಿಯನ್ನು ತಾತ್ಕಲಿಕವಾಗಿ ತೆರೆದಿದೆ. ಆದರೆ, ಮೂರು ತಿಂಗಳಾದರೂ ಕೊಠಡಿಗೆ ಬೇಕಾದ ಮೂಲ ಸೌಕರ್ಯ ಇಲ್ಲದೇ ವಿಶ್ರಾಂತಿ ಕೊಠಡಿಯನ್ನು ಜಿಲ್ಲಾಡಳಿ ಬರೀ ಹೆಸರಿಗೆ ಮಾತ್ರ ತೆರೆದಂತೆ ಕಾಣುತ್ತಿದೆ.
36ಕ್ಕೂ ಹೆಚ್ಚು ಇಲಾಖೆಗಳು ಜಿಲ್ಲಾಡಳಿತ ಭವನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಹಿಳೆಯರಿಗೆ ಸುಭದ್ರತೆ ದೃಷ್ಟಿಯಿಂದ ಎಲ್ಲಾ ಕಡೆ ಸಿಸಿ ಕ್ಯಾಮರಾಗಳನ್ನು ಹಾಕಲಾಗಿದೆ. ಆದರೆ, ವಿಶ್ರಾಂತಿ ಕೊಠಡಿ ಇಲ್ಲ ಎಂಬ ಕೊರಗನ್ನು ಜಿಲ್ಲಾಡಳಿತ ನೀಗಿಸಿದರೂ ವಿಶ್ರಾಂತಿ ಪಡೆಯಲು ಬೇಕಾದ ಆಸನಗಳ ವ್ಯವಸ್ಥೆ ಇಲ್ಲದೇ ಕೊಠಡಿಯನ್ನು ಜಿಲ್ಲಾಡಳಿತ ಕಾಟಾಚಾರಕ್ಕೆ ತೆರೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕೊಠಡಿಗೆ ಬೀಗ: ಇನ್ನೂ ಮೂಲ ಸೌಕರ್ಯಗಳ ವಂಚಿತ ಮಹಿಳಾ ವಿಶ್ರಾಂತಿ ಕೊಠಡಿಯನ್ನು ತೆಗೆಯುವುದೇ ಇಲ್ಲ. ಸದಾ ಕಾಲ ಬಾಗಿಲು ಹಾಕಿರುತ್ತಾರೆಂದು ಜಿಲ್ಲಾಡಳಿತ ಭವನದಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯೊಬ್ಬರು ತಿಳಿಸಿದರು.
ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಅಗತ್ಯ. ಆದರೆ, ಸದ್ಯ ನಿರ್ಮಿಸಿರುವ ಕೊಠಡಿ ಸಮರ್ಪಕವಾಗಿಲ್ಲ. ಸಾರ್ವಜನಿಕರು ಓಡಾಡುವ ಮೆಟ್ಟಿಲು ಪಕ್ಕದಲ್ಲಿಯೇ ಕೊಠಡಿ ತೆರೆಯಲಾಗಿದೆ. ಕುಡಿಯುವ ನೀರು ಮತ್ತಿತರ ಸೌಕರ್ಯ ಇರುವ ವಿಶ್ರಾಂತಿ ಕೊಠಡಿ ನಿರ್ಮಿಸಿದರೆ ಹೆಚ್ಚು ಅನುಕೂಲ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳಾ ಸಿಬ್ಬಂದಿ ತಿಳಿಸಿದರು.