ಮಹಿಳಾ ಮೀಸಲಾತಿ ಮಸೂದೆ ನನೆಗುದಿಗೆ ಬಿದ್ದು ಎಂಟು ವರ್ಷಗಳನ್ನು ಕಳೆದಾದ ಮೇಲೆ ಮತ್ತೆ ರಾಜಕೀಯ ಪಡಸಾಲೆಯಲ್ಲಿ ಈ ವಿಷಯ ಚರ್ಚೆಯ ಮುನ್ನಲೆಗೆ ಬಂದಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರೆ ಬೆಂಬಲ ನೀಡುವುದಾಗಿ ಹೇಳುವ ಮೂಲಕ ಚರ್ಚೆಗೆ ನಾಂದಿ ಹಾಡಿದ್ದಾರೆ. ತ್ರಿವಳಿ ತಲಾಖ್ ವಿಚಾರದಲ್ಲಿ ಕಾಂಗ್ರೆಸ್ ಮುಸ್ಲಿಂ ಮಹಿಳೆಯರ ಪರ ನಿಂತಿಲ್ಲ ಎಂಬ ಪ್ರಧಾನಿ ಮೋದಿ ಟೀಕೆಗೆ ಎದುರೇಟು ನೀಡಲು ರಾಹುಲ್ ಮಹಿಳಾ ಮೀಸಲಾತಿ ವಿಚಾರವನ್ನು ಎತ್ತಿಕೊಂಡಿದ್ದಾರೆ. ಇದಕ್ಕೆ ಬಿಜೆಪಿಯ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದು, ತ್ರಿವಳಿ ತಲಾಖ್, ನಿಖಾ ಹಲಾಲ ವಿಚಾರಗಳಲ್ಲಿ ಕಾಂಗ್ರೆಸ್ ಬೆಂಬಲ ನೀಡಿದರೆ ಮಹಿಳಾ ಮೀಸಲಾತಿಯನ್ನು ಬಿಜೆಪಿ ಬೆಂಬಲಿಸಲಿದೆ ಎಂದು ಹೇಳಿದ್ದಾರೆ. ಮಹಿಳಾ ರಾಜಕೀಯ ಮೀಸಲಾತಿ ಎಂಬುದು ಹೊಸದಾಗಿ ರಾಜಕೀಯ ವಾಕ್ಸಮರಕ್ಕೆ ವಸ್ತುವಾದಂತಾಗಿದೆ. ಆದರೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಮಸೂದೆ ಅಂಗೀಕಾರಗೊಳಿಸಲು ಎಲ್ಲರೂ ಒಗ್ಗೂಡಿ ಪ್ರಯತ್ನಿಸುತ್ತಾರೆಯೇ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. 2010ರಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾದ ನಂತರ 4 ವರ್ಷಗಳ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಚಲಾಯಿಸಿತ್ತು. ಆ ಹೊತ್ತಲ್ಲಿ ರಾಹುಲ್ ಗಾಂಧಿ ಈ ವಿಷಯದ ಬಗ್ಗೆ ಚಕಾರವೆತ್ತಲಿಲ್ಲ. ಆ ಬಳಿಕ 4 ವರ್ಷಗಳಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರದಲ್ಲಿದೆ. ಈಗಲೂ ಮಸೂದೆ ಮಂಡನೆ ಬಗ್ಗೆ ಯಾವುದೇ ಚಿಂತನೆಯೂ ನಡೆದಿಲ್ಲ.
2010ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀ ಕಾರಗೊಂಡಾಗ, ರಾಜಕೀಯದಲ್ಲಿ ಮಹಿಳಾ ಯುಗ ಆರಂಭಗೊಂಡೇ ಬಿಟ್ಟಿತು ಎನ್ನುವಷ್ಟರಮಟ್ಟಿಗೆ ಅಬ್ಬರ ಕೇಳಿಬಂತು. ಸ್ತ್ರೀ ಸ್ವಾತಂತ್ರ್ಯ, ಸಬಲೀಕರಣ ಇತ್ಯಾದಿ ವಿಷಯಗಳ ಬಗ್ಗೆ ಪುರುಷ ರಾಜಕಾರಣಿಗಳು ಭಾಗವಹಿಸಿದ ಸಭೆಗಳಲ್ಲೆಲ್ಲಾ ಉದ್ದುದ್ದ ಭಾಷಣ ಬಿಗಿದರು. ಆದರೆ ಆ ಮಸೂದೆ ಅನುಷ್ಠಾನಗೊಳ್ಳಬೇಕೆಂದರೆ ಲೋಕಸಭೆಯಲ್ಲೂ ಅಂಗೀಕಾರ ಗೊಳ್ಳಬೇಕಿತ್ತು. ಆ ನಿಟ್ಟಿನಲ್ಲಿ ಏನೇನೂ ಕ್ರಮ ಕೈಗೊಳ್ಳದೆ ರಾಜಕಾರಣಿಗಳು ಜಾಣ ಮೌನವಹಿಸಿ ಮಸೂದೆಯನ್ನು ವ್ಯವಸ್ಥಿತವಾಗಿ ಶೈತ್ಯಾಗಾರಕ್ಕೆ ತಳ್ಳಿದರು. ಹಾಲಿ ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಯಾಗಿ ದ್ದಾಗ ಆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ಜಾರಿಗೆ ತಂದರು. ದೇಶಾದ್ಯಂತ ಪಂಚಾಯತ್‌ಗಳಲ್ಲಿ ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡಲು ಹಾಲಿ ಎನ್‌ಡಿಎ ಸರ್ಕಾರ ಎರಡು ವರ್ಷಗಳ ಹಿಂದೆ ಯೋಜಿಸಿತ್ತು. ಆದರೆ ರಾಜ್ಯಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಪ್ರಸ್ತಾಪ ಮುಂದಕ್ಕೆ ಹೋಗಲಿಲ್ಲ. ಜತೆಗೆ ರಾಜ್ಯ ವಿಧಾನಸಭೆಗಳಲ್ಲಿ ಹಾಗೂ ಲೋಕಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮಸೂದೆಯನ್ನು ಮತ್ತೂಮ್ಮೆ ಕೈಗೆತ್ತಿಕೊಳ್ಳುವ ಗೋಜಿಗೂ ಸರ್ಕಾರ ಹೋಗಲಿಲ್ಲ.
ಮಹಿಳಾ ಮೀಸಲು ಕಾಯ್ದೆ ಜಾರಿ ಒತ್ತಟ್ಟಿಗಿರಲಿ, ಸ್ವಯಂಪ್ರೇರಿತವಾಗಿ ಮಹಿಳೆಯರನ್ನು ಚುನಾವಣಾ ಕಣಕ್ಕಿಳಿಸುವ ನಿಟ್ಟಿನಲ್ಲಿ ಎಷ್ಟು ರಾಜಕೀಯ ಪಕ್ಷಗಳು ಚಿಂತಿಸಿವೆ ಎಂದರೆ ಸಿಗುವ ಉತ್ತರ ಸೊನ್ನೆ. ಚುನಾವಣೆ ಹೊತ್ತಲ್ಲಿ ಗೆಲ್ಲುವ ಸಾಮರ್ಥ್ಯದ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ ಎಂದು ಎಲ್ಲಾ ಪಕ್ಷಗಳೂ ಹೇಳಿಕೆ ನೀಡುತ್ತವೆ. ಕೊನೆಗೆ ಕಣಕ್ಕಿಳಿಯುವ ಮಹಿಳೆಯರು ಬೆರಳೆಣಿಕೆಯ ಸಂಖ್ಯೆಯಲ್ಲಿರುತ್ತಾರೆ. ಅಂದರೆ ಮಹಿಳಾ ಸಬಲೀಕರಣದ ಪರವಾಗಿ ನಾಯಕರು ಹಾಕುವ ಸವಾಲು- ಪ್ರತಿ ಸವಾಲು ಅವರ ರಾಜಕೀಯ ಲೆಕ್ಕಾಚಾರದ ಮೇಲೆ ಇರುತ್ತವೆಯೇ ಹೊರತು ನಿಜ ವಾದ ಮಹಿಳಾ ಸಬಲೀಕರಣದ ಕುರಿತ ಅಂತಃಕರಣದಿಂದಲ್ಲ. ವಿಧಾನ ಸಭೆ, ಲೋಕಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತಂದರೆ ತಮ್ಮ ಸ್ಥಾನಗಳಿಗೇ ಕುತ್ತು ಬರುತ್ತದೆ ಎಂಬ ಚಿಂತೆ ಪುರುಷ ಜನಪ್ರತಿನಿಧಿಗಳದ್ದಾಗಿದೆ. ಹೀಗಾಗಿ ಪಂಚಾಯತ್ ಮಟ್ಟದಲ್ಲಿ ಜಾರಿಗೆ ಬರುವಷ್ಟು ವೇಗವಾಗಿ ವಿಧಾನಸಭೆ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನವಾಗುತ್ತಿಲ್ಲ ಎಂಬುದು ಗುಟ್ಟಲ್ಲ. ಕಾಳಜಿಯಿರದ ಹೊರತು ನಾಲಿಗೆ ತುದಿಯ ಮಹಿಳಾ ಪರ ಸಂವೇದನೆಯಿಂದ ಯಾವುದೇ ಉಪಯೋಗವಾಗಲಾರದು.