ಮುಂಬೈ: ವನಿತಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಸೋಮವಾರ ಯುಪಿ ವಾರಿಯರ್ ಅದೃಷ್ಟಪರೀಕ್ಷೆಗೆ ಸಜ್ಜಾಗಲಿದೆ. ತೃತೀಯ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಅದು ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸಲಿದೆ.
ಈ ಪಂದ್ಯವನ್ನು ಗೆದ್ದರೆ ಯುಪಿಯ ಪ್ಲೇ ಆಫ್ ಪ್ರವೇಶ ಖಾತ್ರಿಯಾಗಲಿದೆ. ಆಗ ಗುಜರಾತ್ ಜತೆಗೆ ಆರ್‌ಸಿಬಿ ಕೂಡ ಕೂಟದಿಂದ ನಿರ್ಗಮಿಸಲಿದೆ!
ಸದ್ಯ ಯುಪಿ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಗೆದ್ದರೆ ಈ ಸ್ಥಾನ ಇನ್ನಷ್ಟು ಭದ್ರಗೊಳ್ಳುತ್ತದೆ. ಆಗ ಉಳಿದ ಯಾವ ಪಂದ್ಯಗಳಿಗೂ ಮಹತ್ವ ಇಲ್ಲದಂತಾಗುತ್ತದೆ ಎಂಬುದನ್ನು ಗಮನಿಸಬೇಕು. ಇದಲ್ಲದೇ ಇನ್ನೂ ಒಂದು ಪಂದ್ಯವನ್ನು ಯುಪಿ ಆಡಬೇಕಿದೆ. ಕೊನೆಯ ಪಂದ್ಯದಲ್ಲಿ ಅದು ಡೆಲ್ಲಿಯನ್ನು ಎದುರಿಸಲಿದೆ. ಹೀಗಾಗಿ ಅಲಿಸ್ಸಾ ಹೀಲಿ ಪಡೆ ಸುರಕ್ಷಿತ ವಲಯದಲ್ಲಿದೆ ಎನ್ನಬಹುದು. ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲ ಸೋಲುಣಿಸಿದ ಸಾಹಸದಿಂದಾಗಿ ಯುಪಿ ವಾರಿಯರ್ ತನ್ನ ಪ್ಲೇ ಆಫ್ ಅವಕಾಶವನ್ನು ತೆರೆದಿರಿಸಿತ್ತು.
ಇನ್ನೊಂದೆಡೆ ಗುಜರಾತ್‌ಗೆ ಇದು ಕೊನೆಯ ಪಂದ್ಯ. ಗೆದ್ದರೆ ಅಂಕ 6ಕ್ಕೆ ಏರುವುದಾದರೂ ತೃತೀಯ ಸ್ಥಾನವಂತೂ ಎಟುಕದು. ಕಾರಣ, ರನ್‌ರೇಟ್‌ನಲ್ಲಿ ಅದು ಬಹಳ ಹಿಂದುಳಿದಿದೆ. ಹೀಗಾಗಿ ಇದು ಸ್ನೇಹ್ ರಾಣಾ ಬಳಗಕ್ಕೆ ಕೇವಲ ಲೆಕ್ಕದ ಭರ್ತಿಯ ಪಂದ್ಯ.
ಮುಂಬೈ-ಡೆಲ್ಲಿ ಮುಖಾಮುಖಿ
ದಿನದ ದ್ವಿತೀಯ ಪಂದ್ಯದಲ್ಲಿ ಮುಂಬೈ-ಡೆಲ್ಲಿ ಮುಖಾಮುಖಿ ಆಗಲಿವೆ. ಯುಪಿ ವಿರುದ್ಧ ಸೋಲಿನ ಆಘಾತಕ್ಕೆ ಸಿಲುಕಿದ ಹರ್ಮನ್‌ಪ್ರೀತ್ ಬಳಗ ಡೆಲ್ಲಿ ವಿರುದ್ಧ ಲಯಕ್ಕೆ ಮರಳಲು ಹಾತೊರೆಯುತ್ತಿದೆ. ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವುದರಿಂದ ಮುಂಬೈಗೆ ಆತಂಕವೇನೂ ಇಲ್ಲ. ಆದರೆ ಅಗ್ರಸ್ಥಾನ ಉಳಿಸಿಕೊಂಡು ನೇರವಾಗಿ ಫೈನಲ್ ಪ್ರವೇಶಿಸಬೇಕಾದರೆ ಮುಂಬೈಗೆ ಗೆಲುವು ಅನಿವಾರ್ಯ. ಒಂದು ವೇಳೆ ಉಳಿದೆರಡೂ ಪಂದ್ಯಗಳನ್ನು ಗೆದ್ದರೆ ಡೆಲ್ಲಿಗೂ ಅಗ್ರಸ್ಥಾನ ಅಲಂಕರಿಸುವ ಅವಕಾಶ ಇರುವುದನ್ನು ಮರೆಯುವಂತಿಲ್ಲ!