ಮುಂಬೈ : ನಗರದ ಬ್ರಬೋರ್ನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ವನಿತಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಜೈಂಟ್ಸ್ ವಿರುದ್ಧ
ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ.
ಗುಜರಾತ್ ಜೈಂಟ್ಸ್ 11 ರನ್‌ಗಳ ಜಯ ಸಾಧಿಸಿ ಗೆಲುವಿನ ನಗು ಬೀರಿತು.
ಮೊದಲು ಆಡಿದ್ದ ಎರಡನ್ನೂ ಸೋತಿದ್ದ ಗುಜರಾತ್ ತಂಡ ಆರ್‌ಸಿಬಿಗೆ ಮೂರನೇ ಸೋಲಿನ ಶಾಕ್ ನೀಡಿತು.
ಗುಜರಾತ್ ಜೈಂಟ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 201 ರನ್ ಗಳನ್ನು ಕಲೆ ಹಾಕಿ ದೊಡ್ಡ ಮೊತ್ತವನ್ನೇ ಆರ್ ಸಿಬಿ ತಂಡದ ಮುಂದಿಟ್ಟಿತು. ಸಬ್ಬಿನೇನಿ ಮೇಘನಾ 8 ರನ್ ಗಳಿಸಿ ಬೇಗನೆ ಔಟಾದರು. ಆ ಬಳಿಕ ಭರ್ಜರಿ ಜೊತೆಯಾಟವಾಡಿದ ಡಂಕ್ಲಿ (65ರನ್) ಮತ್ತು ಹರ್ಲೀನ್ ಡಿಯೋಲ್(67ರನ್) ತಂಡ ದೊಡ್ಡ ಮೊತ್ತ ಕಲೆ ಹಾಕಲು ನೆರವಾದರು. ಸ್ಪೋಟಕ ಆಟವಾಡಿದ ಡಂಕ್ಲಿ 28 ಎಸೆತಗಳಲ್ಲಿ 65 ರನ್ ಗಳಿಸಿದರು. ಗಾರ್ಡ್ನರ್ 19, ಹೇಮಲತಾ16, ಸದರ್ಲ್ಯಾಂಡ್ 14 ರನ್ ಕೊಡುಗೆ ನೀಡಿದರು.
ಭಾರಿ ಗುರಿ ಬೆನ್ನಟ್ಟಿದ ಆರ್ ಸಿಬಿ 54 ರನ್ ಆಗುವಷ್ಟರಲ್ಲಿ ನಾಯಕಿ ಸ್ಮೃತಿ ಮಂಧಾನ (18ರನ್) ಅವರ ವಿಕೆಟ್ ಕಳೆದುಕೊಂಡಿತು. ಎಲ್ಲಿಸ್ ಪೆರಿ 32 ರನ್ ಗಳಿಸಿ ಔಟಾದರು. ರಿಚಾ ಘೋಷ್ 10 ರನ್ ಗಳಿಸಿ ನಿರ್ಗಮಿಸಿದರು. ಭರವಸೆಯ ಆಟವಾಡಿದ ಸೋಫಿ ಡಿವೈನ್ 45 ಎಸೆತಗಳಲ್ಲಿ 66 ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ಅವರು 8 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದ್ದರು.
ಕೊನೆಯ ಎರಡು ಓವರ್ ಗಳಲ್ಲಿ ಗೆಲ್ಲಲು 33 ರನ್ ಅನಿವಾರ್ಯವಾಗಿತ್ತು. 10 ರನ್ ಗಳಿಸಿದ್ದ ಕನಿಕಾ ಅಹುಜಾ ಸ್ಟಂಪ್ ಔಟಾದರು. ಕೊನೆಯ ಓವರ್ ನಲ್ಲಿ 24 ರನ್ ಅಗತ್ಯವಾಗಿತ್ತು. ಹೀದರ್ ನೈಟ್ 30 ರನ್ ಗಳಿಸಿ ಆಟವಾಡುತ್ತಿದ್ದರು, ಅವರಿಗೂ ಗೆಲುವಿನ ದಡ ಸೇರಿಸುವುದು ಸಾಧ್ಯವಾಗಲಿಲ್ಲ. 2 ರನ್ ಗಳಿಸಿದ್ದ ಪೂನಂ ಖೇಮ್ನಾರ್ ಮೊದಲ ಎಸೆತದಲ್ಲೇ ನಿರ್ಗಮಿಸಿದರು. ಕೊನೆಯಲ್ಲಿ ಶ್ರೇಯಾಂಕಾ ಪಾಟೀಲ್ ಔಟಾಗದೆ 11 ರನ್ ಗಳಿಸಿದರು. ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲು ಮಾತ್ರ ಶಕ್ತವಾಯಿತು.