Advertisement

ಮಹಿಳಾ ಪೇದೆಯ ಬದುಕು-ಬವಣೆ

01:06 PM Jan 19, 2018 | |

ಪ್ರಿಯಾಂಕಾ ಉಪೇಂದ್ರ ಅವರು “ಸೆಕೆಂಡ್‌ ಹಾಫ್’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಇದು ಪೊಲೀಸ್‌ ಪೇದೆಯ ಕಥೆಯಾದ್ದರಿಂದ ಚಿತ್ರದ ಟ್ರೇಲರ್‌ ರಿಲೀಸ್‌ಗೆ ಪೊಲೀಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಅವರನ್ನು ಚಿತ್ರತಂಡ ಆಹ್ವಾನಿಸಿತ್ತು. ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿದ ರೂಪಾ ಅವರು, “ಚಿತ್ರದ ಟ್ರೇಲರ್‌ ಚೆನ್ನಾಗಿದೆ. ನಿರ್ದೇಶಕರು ಒಳ್ಳೆಯ ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಪೇದೆಗಳ ಪಾತ್ರ ಕೂಡಾ ಪ್ರಮುಖವಾಗಿರುತ್ತದೆ. ಪ್ರಮುಖ ಪ್ರಕರಣವನ್ನು ಭೇದಿಸುವಲ್ಲಿ ಅವರು ಕೂಡಾ ಶ್ರಮಪಟ್ಟಿರುತ್ತಾರೆ. ಈಗ ಅಂತಹ ಪೇದೆಗಳ ಅದರಲ್ಲೂ ಮಹಿಳಾ ಪೇದೆಯ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಈ ಚಿತ್ರ ಮತ್ತಷ್ಟು ಮಹಿಳೆಯರು ಪೊಲೀಸ್‌ ಇಲಾಖೆಯೆಡೆ ಬರುವಂತೆ ಮಾಡಲಿ’ ಎಂದು ಶುಭ ಹಾರೈಸಿದರು.

Advertisement

ಪ್ರಿಯಾಂಕಾ ಉಪೇಂದ್ರ ಅವರಿಗೆ ಒಂದು ತಿಂಗಳ ಕಾಲ ಪೊಲೀಸ್‌ ಯುನಿಫಾರಂ ಹಾಕಿದ್ದು ಹೊಸ ಅನುಭವಂತೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದಾಗಿ ಹೇಳಿದ ಪ್ರಿಯಾಂಕಾ ಅವರು, ಚಿತ್ರದ ಟ್ರೇಲರ್‌ ಅನ್ನು ರೂಪಾ ಅವರು ಬಿಡುಗಡೆ ಮಾಡಿದ್ದು ಖುಷಿ ಕೊಟ್ಟಿದೆ ಎಂದರು. ಈ ಚಿತ್ರವನ್ನು ಯೋಗಿ ದೇವಗಂಗೆ ನಿರ್ದೇಶಿಸಿದ್ದಾರೆ. ಅವರಿಗೆ ಈ ಚಿತ್ರ ಮಾಡಲು ರೂಪಾ ಮೌದ್ಗಿಲ್‌ ಪ್ರೇರಣೆಯಂತೆ. ರೂಪಾ ಅವರು ಬರೆದ “ಸಿನಿಮಾವಲ್ಲ ಪೊಲೀಸರ ಬದುಕು’ ಎಂಬ ಲೇಖನದಿಂದ ಪ್ರೇರೇಪಿತರಾಗಿ ಈ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು. ಚಿತ್ರದಲ್ಲಿ ಮಹಿಳಾ ಪೇದೆಯೊಬ್ಬರು ಪಡುವ ಕಷ್ಟ ಹಾಗೂ ಆ ನಂತರ ನಡೆಯುವ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರಂತೆ. ಇಲ್ಲಿ ಪೊಲೀಸ್‌ ಇಲಾಖೆಗೆ ಉಪಯೋಗವಾಗುವಂತಹ ಸಾಕಷ್ಟು ಅಂಶಗಳನ್ನು ಕೂಡಾ ಹೇಳಿದ್ದಾರಂತೆ. ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಕೂಡಾ ನಟಿಸಿದ್ದಾರೆ. ತಮ್ಮ ಚಿಕ್ಕಮ್ಮನೊಂದಿಗೆ ನಟಿಸಿದ ಅನುಭವದ ಬಗ್ಗೆ ಹೇಳಿಕೊಂಡರು. ಇಲ್ಲಿ ಉಪೇಂದ್ರ ಅವರು ಒಂದು ಹಾಡು ಹಾಡಿದ್ದು, ಆ ಹಾಡಿಗೆ ನಿರಂಜನ್‌ ಡ್ಯಾನ್ಸ್‌ ಮಾಡಿದ್ದಾರೆ. ಚಿತ್ರಕ್ಕೆ ಚೇತನ್‌ ಸೋಸ್ಕಾ ಸಂಗೀತ ನೀಡಿದ್ದಾರೆ.

ಈ ಚಿತ್ರವನ್ನು ನಾಗೇಶ್‌ ನಿರ್ಮಿಸಿದ್ದಾರೆ. ನಾಗೇಶ್‌ ಆರಂಭದಲ್ಲಿ “ಗಾಂಧಿ ನೋಟು’ ಎಂಬ ಸಿನಿಮಾ ಮಾಡಲು ಹೊರಟಿದ್ದರಂತೆ. ಆದರೆ, ಇವರ ಸಿನಿಮಾ ಸೆಟ್ಟೇರಲು ಕೆಲ ದಿನ ಇರುವಾಗ ನೋಟ್‌ ಬ್ಯಾನ್‌ ಆಗಿದೆ. ಸಿನಿಮಾದಲ್ಲೂ ಅದೇ ಕಥೆ ಇರುವುದರಿಂದ ಅದು ವಕೌìಟ್‌ ಆಗೋದಿಲ್ಲ ಎಂದು ಅದನ್ನು ಕೈ ಬಿಟ್ಟು “ಸೆಕೆಂಡ್‌ ಹಾಫ್’ ಕೈಗೆತಿಕೊಂಡಿದ್ದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next