ಕಲಬುರಗಿ: ಮಹಿಳಾ ಪೊಲೀಸ್ ಸಿಬ್ಬಂದಿ ನೋವನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗಬಾರದೆಂದು ಈಶಾನ್ಯ ವಲಯದ ಐಜಿಪಿ ಅಲೋಕಕುಮಾರ ಸಲಹೆ ನೀಡಿದರು.
ನಗರದ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಪೊಲೀಸ್ ಇಲಾಖೆಯ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಮಸ್ಯೆಗಳ ಬಗ್ಗೆ ತಜ್ಞ ವೈದ್ಯರೊಂದಿಗಿನ ಸಮಾಲೋಚನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿನ ಮಹಿಳಾ ಸಿಬ್ಬಂದಿಗಳಲ್ಲಿ ಹಲವರು ಮನೋಖನ್ನತೆಗೆ ಒಳಗಾಗುತ್ತಿದ್ದಾರೆ. ಆ ಖನ್ನತೆ ಹೋಗಲಾಡಿಸಿಕೊಳ್ಳುವ ಮನೋಬಲ ರೂಢಿಸಿಕೊಳ್ಳಿ ಎಂದು ಹೇಳಿದರು. ಖನ್ನತೆ ಹೊಂದಿರುವ ಮಹಿಳಾ ಸಿಬ್ಬಂದಿ ತಮ್ಮಲ್ಲಿರುವ ನೋವನ್ನು ಅದುಮಿಟ್ಟುಕೊಳ್ಳ ಬಾರದು.
ಆ ನೋವು ಮನಸ್ಸಿನಲ್ಲಿಟ್ಟುಕೊಂಡು ಕೊರಗುವುದರಿಂದ ಯಾವುದೇ ಪರಿಹಾರ ಸಿಗದೆ, ಅನಾರೋಗ್ಯಕ್ಕೆ ಈಡಾಗುವ ಅಪಾಯವಿದೆ. ಆದ್ದರಿಂದ ನೋವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕೆಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆಯಲ್ಲಿರುವ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಭಿನ್ನ. ಸಿಬ್ಬಂದಿಗಳಲ್ಲಿ ಸಾಕಷ್ಟು ಕೌಶಲ್ಯಗಳಿರುತ್ತವೆ, ಚಾಣಾಕ್ಷತೆ ಹೊಂದಿರುತ್ತಾರೆ. ಅದನ್ನು ಅರಿತು ಕಾರ್ಯನಿರ್ವಹಣೆಯಲ್ಲಿ ತೊಡಗಬೇಕೆಂದು ಸಲಹೆ ನೀಡಿದರು.
ಎಸ್‌ಪಿ ಎನ್. ಶಶಿಕುಮಾರ, ಹೆಚ್ಚುವರಿ ಎಸ್‌ಪಿ ಜಯಪ್ರಕಾಶ, ವೈದ್ಯರಾದ ಡಾ| ಸಂದೀಪ, ಡಾ| ಉಷಾ ದೊಡ್ಮನಿ, ಡಾ| ಸಂಗೀತಾ ಹೂಗಾರ ಹಾಜರಿದ್ದರು. ಡಿಎಸ್‌ಪಿ ಜಾಹ್ನವಿ ಸೇರಿದಂತೆ ಇಲಾಖೆಯ ಸುಮಾರು 200 ಕ್ಕೂ ಹೆಚ್ಚು ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಪಿಎಸ್‌ಐ ಯಶೋಧಾ ಕಟಕೆ ನಿರೂಪಿಸಿದರು.