ಶುಕ್ರವಾರದ 3ನೇ ಏಕದಿನ ಪಂದ್ಯದಲ್ಲಿ ಲಿಜೆಲ್ ಲೀ ಅಜೇಯ 132 ರನ್ ಬಾರಿಸಿ ಭಾರತವನ್ನು ಗೆಲುವಿನಿಂದ ದೂರಕ್ಕಟ್ಟಿದರು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 5 ವಿಕೆಟಿಗೆ 248 ರನ್ ಪೇರಿಸಿತು. ದಿಟ್ಟ ರೀತಿಯಲ್ಲಿ ಜವಾಬಿತ್ತ ದಕ್ಷಿಣ ಆಫ್ರಿಕಾ 46.3 ಓವರ್‌ಗಳಲ್ಲಿ 4 ವಿಕೆಟಿಗೆ 223 ರನ್ ಗಳಿಸಿದ ವೇಳೆ ಮಳೆ ಸುರಿಯಿತು. ಪಂದ್ಯ ಇಲ್ಲಿಗೇ ನಿಂತಿತು. ಆಗ ಪ್ರವಾಸಿ ತಂಡ ಡಕ್‌ವರ್ತ್-ಲೂಯಿಸ್ ನಿಯಮದಂತೆ 6 ರನ್ ಮುನ್ನಡೆಯಲ್ಲಿತ್ತು.
Advertisement
ಜೀವನಶ್ರೇಷ್ಠ ಸಾಧನೆ88ನೇ ಏಕದಿನ ಪಂದ್ಯವಾಡಲಿಳಿದ ಓಪನರ್ ಲಿಜೆಲ್ ಲೀ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ಆಫ್ರಿಕಾ ಸರದಿಯನ್ನು ಬೆಳೆಸುತ್ತ ಹೋದರು. ಭಾರತದ ಬೌಲರ್‌ಗಳಿಗೆ ಈ ವಿಕೆಟ್ ಮರೀಚಿಕೆಯೇ ಆಗಿ ಉಳಿಯಿತು. ಲಿಜೆಲ್ ಆಟವೇ ಪಂದ್ಯದ ಟರ್ನಿಂಗ್ ಪಾಯಿಂಟ್ ಎನಿಸಿತು. ಅವರ ಅಜೇಯ 132 ರನ್ನುಗಳ ಜೀವನಶ್ರೇಷ್ಠ ಇನ್ನಿಂಗ್ಸ್ 131 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 16 ಬೌಂಡರಿ, 2 ಸಿಕ್ಸರ್. ಇದು ಅವರ 3ನೇ ಶತಕ.
Related Articles
Advertisement
ಪಂದ್ಯಶ್ರೇಷ್ಠ: ಲಿಜೆಲ್ ಲೀ.
ಮಿಥಾಲಿ ರಾಜ್ 10,000 ರನ್ ಸಾಧನೆಭಾರತದ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಶುಕ್ರವಾರದ 3ನೇ ಏಕದಿನ ಪಂದ್ಯದ ವೇಳೆ ವಿಶಿಷ್ಟ ಸಾಧನೆಯೊಂದಿಗೆ ನೂತನ ಎತ್ತರ ತಲುಪಿದರು. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಭಾರತದ ಮೊದಲ ಹಾಗೂ ವಿಶ್ವದ ಕೇವಲ ದ್ವಿತೀಯ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮುಖಾಮುಖೀಯಲ್ಲಿ 35 ರನ್ ಗಳಿಸಿದ ವೇಳೆ ಮಿಥಾಲಿ 10 ಸಾವಿರ ರನ್ ಗಡಿ ತಲುಪಿದರು. ಮೂರೂ ಮಾದರಿಯ ಕ್ರಿಕೆಟ್ ಪಂದ್ಯಗಳಿಂದ ಮಿಥಾಲಿ ರನ್ ಗಳಿಕೆ 10,001ಕ್ಕೆ ಏರಿದೆ. ಆಡಿದ ಒಟ್ಟು ಇನ್ನಿಂಗ್ಸ್ 291. ಇಂಗ್ಲೆಂಡಿನ ಮಾಜಿ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಈ ಯಾದಿಯ ಮೊದಲಿಗರು. ಅವರು 316 ಇನ್ನಿಂಗ್ಸ್‌ಗಳಿಂದ 10,273 ರನ್ ಪೇರಿಸಿದ್ದಾರೆ. 22 ವರ್ಷಗಳ ಅನುಭವ
38 ವರ್ಷದ, ರಾಜಸ್ಥಾನ್ ಮೂಲದ ಮಿಥಾಲಿ ದೊರೈ ರಾಜ್ ಭಾರತದ ಅತ್ಯಂತ ಅನುಭವಿ ಹಾಗೂ ಹಿರಿಯ ಕ್ರಿಕೆಟ್ ಆಟಗಾರ್ತಿ. 1999ರಲ್ಲಿ ಐರ್ಲೆಂಡ್ ವಿರುದ್ಧ ಏಕದಿನ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಡಿಯಿರಿಸಿದ್ದರು. ಕಳೆದ 22 ವರ್ಷಗಳಿಂದಲೂ ಅವರು ಜಾಗತಿಕ ಕ್ರಿಕೆಟಿನ ಸ್ಟಾರ್ ಆಟಗಾರ್ತಿಯಾಗಿ ಮೆರೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಥಾಲಿ 8 ಶತಕ (ಟೆಸ್ಟ್‌ನಲ್ಲಿ 1, ಏಕದಿನದಲ್ಲಿ 7), 75 ಅರ್ಧ ಶತಕ ಬಾರಿಸಿದ್ದಾರೆ (ಟೆಸ್ಟ್‌ನಲ್ಲಿ 4, ಏಕದಿನದಲ್ಲಿ 54, ಟಿ20ಯಲ್ಲಿ 17). ಮಿಥಾಲಿ ರಾಜ್ ಅನಂತರದ ಸ್ಥಾನದಲ್ಲಿರುವ ಆಟಗಾರ್ತಿಯರೆಂದರೆ ನ್ಯೂಜಿಲ್ಯಾಂಡಿನ ಸುಝೀ ಬೇಟ್ಸ್ (7,849), ವೆಸ್ಟ್ ಇಂಡೀಸಿನ ಸ್ಟೆಫಾನಿ ಟೇಲರ್ (7,816) ಮತ್ತು ಆಸ್ಟ್ರೇಲಿಯದ ಮೆಗ್ ಲ್ಯಾನಿಂಗ್ (6,900).