Advertisement

Women’s ODI ಸರಣಿ : ಕ್ಲೀನ್‌ಸ್ವೀಪ್‌ ಯೋಜನೆಯಲ್ಲಿ ಭಾರತ

12:26 AM Jun 23, 2024 | Team Udayavani |

ಬೆಂಗಳೂರು: ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಮೊದಲೆರಡು ಪಂದ್ಯಗಳಲ್ಲಿ ಉರುಳಿಸಿರುವ ಭಾರತದ ವನಿತೆಯರೀಗ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಳ್ಳುವ ಕಾತರದಲ್ಲಿದ್ದಾರೆ. ಇನ್ನೊಂದೆಡೆ ಲಾರಾ ವೋಲ್ವಾರ್ಟ್‌ ಬಳಗ ಕೊನೆಯ ಪಂದ್ಯವನ್ನಾದರೂ ಗೆದ್ದು ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.

Advertisement

ಮೊದಲ ಪಂದ್ಯವನ್ನು ಭಾರತ ಅಧಿಕಾರಯುತವಾಗಿಯೇ ಗೆದ್ದಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ತಾಕತ್ತಿನ ನಿಜದರ್ಶನವಾಗಿದೆ. 326 ರನ್ನುಗಳ ಬೃಹತ್‌ ಸವಾಲು ಮುಂದಿದ್ದರೂ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ಹರಿಣಗಳ ಪಡೆ ಕೇವಲ 4 ರನ್ನಿನಿಂದ ಹಿಂದುಳಿದಿತ್ತು. ಹೀಗಾಗಿ 3ನೇ ಪಂದ್ಯ ತೀವ್ರ ಪೈಪೋಟಿ ಕಾಣುವ ಸಾಧ್ಯತೆ ಇದೆ. ಸರಣಿ ಹೇಗೂ ಗೆದ್ದಾಯಿತೆಂದು ನಮ್ಮವರು ಪಂದ್ಯವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಕೆಲವು ಪ್ರಯೋಗಗಳಿಗಾಗಿಯೂ ಇದನ್ನು ಬಳಸಿಕೊಳ್ಳಬೇಕಿದೆ.

ದ್ವಿತೀಯ ಪಂದ್ಯ ಬರೋಬ್ಬರಿ 4 ಶತಕಗಳನ್ನು ಕಂಡಿತ್ತು. ಭಾರತದ ಉಪನಾಯಕಿ ಸ್ಮತಿ ಮಂಧನಾ ಸತತ ಎರಡನೇ ಶತಕದ ಮೂಲಕ ಮುಹೂ ರ್ತವಿರಿಸಿದ್ದರು. ಈ ಸಾಧನೆಗೈದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆ ಇವರದ್ದಾಗಿತ್ತು.

ಬಳಿಕ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಟ್‌ ಮತ್ತು ಮರಿಜಾನ್‌ ಕಾಪ್‌ ಕೂಡ ಸೆಂಚುರಿ ಸಂಭ್ರಮ ಆಚರಿಸಿದ್ದರು. ಉರುಳಿದ್ದು 9 ವಿಕೆಟ್‌ ಮಾತ್ರ. ಒಟ್ಟಾರೆ ಈ ಪಂದ್ಯ ಬೌಲರ್‌ಗಳ ಪಾಲಿಗೆ ದೊಡ್ಡದೊಂದು ಅಗ್ನಿಪರೀಕ್ಷೆಯಾಗಿತ್ತು. ಅಂತಿಮ ಪಂದ್ಯ ಯಾವ ಟ್ರ್ಯಾಕ್‌ ಮೇಲೆ ನಡೆದೀತು ಎಂಬುದರ ಮೇಲೆ ಇತ್ತಂಡಗಳ ಹೋರಾಟ ನಿಂತಿದೆ.

ಶ್ರೇಯಾಂಕಾಗೆ ಅವಕಾಶ?
ಈ ಎರಡೂ ಪಂದ್ಯಗಳಲ್ಲಿ ತವರಿನ ಬೌಲರ್‌ ಶ್ರೇಯಾಂಕಾ ಪಾಟೀಲ್‌ ಆಡಿರಲಿಲ್ಲ. ರವಿವಾರ ಇವರಿಗೆ ಅವಕಾಶ ಸಿಗುವ ಎಲ್ಲ ಸಾಧ್ಯತೆ ಇದೆ. ಹಾಗೆಯೇ ಎಡಗೈ ಬ್ಯಾಟರ್‌ ಸೈಕಾ ಇಶಾಖ್‌, ಅಗ್ರ ಕ್ರಮಾಂಕದ ಆಟಗಾರ್ತಿ ಪ್ರಿಯಾ ಪೂನಿಯ ಕೂಡ ಆಡಿಲ್ಲ. ಇವರೂ ಆಡುವ ಬಳಗದಲ್ಲಿ ಕಾಣಿಸಿ ಕೊಳ್ಳಬಹುದು. ಕಳೆದ 8 ಪಂದ್ಯಗಳಲ್ಲಿ ತೀವ್ರ ರನ್‌ ಬರಗಾಲ ಎದುರಿಸುತ್ತಿರುವ ಶಫಾಲಿ ವರ್ಮ ಅವರಿಗೆ ವಿಶ್ರಾಂತಿ ನೀಡಿದರೂ ಅಚ್ಚರಿ ಇಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next