Advertisement

ODI ಸ್ಮೃತಿ ಮಂಧನಾ ಅಮೋಘ ಶತಕ; ಮಂಕಾದ ದಕ್ಷಿಣ ಆಫ್ರಿಕಾ

10:47 PM Jun 16, 2024 | Team Udayavani |

ಬೆಂಗಳೂರು: ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಬಾರಿಸಿದ ಆಪತ್ಕಾಲದ ಶತಕ ಹಾಗೂ ಬೌಲರ್‌ಗಳ ಘಾತಕ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 143 ರನ್ನುಗಳ ಭರ್ಜರಿ ಜಯ ಸಾಧಿಸಿದೆ.

Advertisement

ಬೆಂಗಳೂರಿನಲ್ಲಿ ನಡೆದ ಮುಖಾಮುಖಿಯಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ 8 ವಿಕೆಟಿಗೆ 265 ರನ್‌ ಬಾರಿಸಿದರೆ, ದಕ್ಷಿಣ ಆಫ್ರಿಕಾ 37.4 ಓವರ್‌ಗಳಲ್ಲಿ 122ಕ್ಕೆ ಕುಸಿಯಿತು. ಹರಿಣಗಳ ಮೊತ್ತ ಮಂಧನಾ ಗಳಿಕೆಗಿಂತ 5 ರನ್‌ ಜಾಸ್ತಿ! ದ್ವಿತೀಯ ಪಂದ್ಯ ಬುಧವಾರ ನಡೆಯಲಿದೆ.

ಮಂಧನಾ 6ನೇ ಶತಕ
ಅಗ್ರ ಕ್ರಮಾಂಕದ ಆಟಗಾರ್ತಿಯರೆಲ್ಲ ಕ್ರೀಸ್‌ ಆಕ್ರಮಿಸಿಕೊಳ್ಳಲು ವಿಫ‌ಲರಾದಾಗ ಏಕಾಂಗಿ ಯಾಗಿ ಹೋರಾಡಿದ ಸ್ಮತಿ ಮಂಧನಾ 6ನೇ ಏಕದಿನ ಶತಕದೊಂದಿಗೆ ಆಪತ್ಬಾಂಧವರಾಗಿ ಮೂಡಿಬಂದರು. ಅತ್ಯಂತ ಎಚ್ಚರಿಕೆಯಿಂದ, ಅಷ್ಟೇ ಜವಾಬ್ದಾರಿಯುತವಾಗಿ ಆಡಿ 47ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡರು. ಮಂಧನಾ ಕೊಡುಗೆ 117 ರನ್‌. 127 ಎಸೆತಗಳನ್ನು ನಿಭಾಯಿಸಿದ ಅವರು 12 ಬೌಂಡರಿ ಹಾಗೂ ಇನ್ನಿಂಗ್ಸ್‌ನ ಏಕೈಕ ಸಿಕ್ಸರ್‌ಗೆ ಸಾಕ್ಷಿಯಾದರು.

ದಕ್ಷಿಣ ಆಫ್ರಿಕಾ ವಿರುದ್ಧ ಮಂಧನಾ ಬಾರಿಸಿದ 2ನೇ ಶತಕ ಇದಾಗಿದೆ. ಇದಕ್ಕೂ ಮೊದಲು 2018ರ ಕಿಂಬರ್ಲಿ ಪಂದ್ಯದಲ್ಲಿ 135 ರನ್‌ ಹೊಡೆದಿದ್ದರು.

ಇದು ಸ್ಮೃತಿ ಮಂಧನಾ ಅವರ 83ನೇ ಏಕದಿನ ಪಂದ್ಯ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ ಪೂರೈಸಿದ ಸಾಧನೆಯಿಂದಲೂ ಸುದ್ದಿಯಾದರು.

Advertisement

ಮಂಧನಾ ಗಳಿಕೆ 33 ರನ್‌ ಆದಾಗ ಭಾರತದ 5ನೇ ವಿಕೆಟ್‌ ಉರುಳಿತ್ತು. ಶಫಾಲಿ (7), ಹೇಮಲತಾ (12), ನಾಯಕಿ ಕೌರ್‌ (10), ಜೆಮಿಮಾ (17) ಮತ್ತು ರಿಚಾ (3) ಪೆವಿಲಿಯನ್‌ ಸೇರಿದ್ದರು. ಅನಂತರ ತಮ್ಮ ವಿಕೆಟ್‌ ಕಾಪಾಡಿಕೊಳ್ಳುವ ಜತೆಯಲ್ಲೇ ಇನ್ನಿಂಗ್ಸ್‌ ಬೆಳೆಸಿದ ಹಿರಿಮೆ ಈ ಅನುಭವಿ ಆಟಗಾರ್ತಿಯದ್ದಾಯಿತು.

ಮಂಧನಾ ಅವರಿಗೆ ಆಲ್‌ರೌಂಡರ್‌ಗಳಾದ ದೀಪ್ತಿ ಶರ್ಮ (37) ಮತ್ತು ಪೂಜಾ ವಸ್ತ್ರಾಕರ್‌ (31) ಉತ್ತಮ ಬೆಂಬಲವಿತ್ತರು. 6ನೇ ಹಾಗೂ 7ನೇ ವಿಕೆಟಿಗೆ ಕ್ರಮವಾಗಿ 81 ಹಾಗೂ 58 ರನ್‌ ಒಟ್ಟುಗೂಡಿತು.

ವನಿತಾ ಪ್ರೀಮಿಯರ್‌ ಲೀಗ್‌ ಚಾಂಪಿಯನ್‌ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ನಾಯಕಿಯೂ ಆಗಿರುವ ಸ್ಮತಿ ಮಂಧನಾ ಆಟಕ್ಕೆ ಆರ್‌ಸಿಬಿ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

ಆಶಾ ಸ್ಮರಣೀಯ ಪದಾರ್ಪಣೆ
ಭಾರತದ ಆಶಾ ಸೋಬನಾ ಮತ್ತು ದಕ್ಷಿಣ ಆಫ್ರಿಕಾದ ಆ್ಯನರ್ಲೆ ಡರ್ಕ್‌ ಸೆನ್‌ ಏಕದಿನಕ್ಕೆ ಪದಾರ್ಪಣೆ ಮಾಡಿದರು. ಆಶಾ ವಯಸ್ಸು 33 ವರ್ಷ, 92ನೇ ದಿನ. ಇದರೊಂದಿಗೆ ಅವರು ಏಕದಿನಕ್ಕೆ ಕಾಲಿಟ್ಟ ಭಾರತದ ಅತೀ ಹಿರಿಯ ಆಟಗಾರ್ತಿ ಎನಿಸಿದರು. 21ಕ್ಕೆ 4 ವಿಕೆಟ್‌ ಉದುರಿಸುವ ಮೂಲಕ ಅವರು ತಮ್ಮ ಪದಾರ್ಪಣೆಯನ್ನು ಸ್ಮರಣೀಯಗೊಳಿಸಿದರು. ದೀಪ್ತಿ ಶರ್ಮ 2 ವಿಕೆಟ್‌; ರೇಣುಕಾ, ಪೂಜಾ ಮತ್ತು ರಾಧಾ ಯಾದವ್‌ ಒಂದೊಂದು ವಿಕೆಟ್‌ ಕೆಡವಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-8 ವಿಕೆಟಿಗೆ 265 (ಮಂಧನಾ 117, ದೀಪ್ತಿ 37, ಪೂಜಾ ಔಟಾಗದೆ 31, ಅಯಬೊಂಗಾ ಖಾಕಾ 47ಕ್ಕೆ 3, ಮಸಬಟಾ ಕ್ಲಾಸ್‌ 51ಕ್ಕೆ 2). ದಕ್ಷಿಣ ಆಫ್ರಿಕಾ-37.4 ಓವರ್‌ಗಳಲ್ಲಿ 122 (ಸುನೆ ಲೂಸ್‌ 33, ಸಿನಾಲೊ ಜಾಫ‌¤ 27, ಮರಿಜಾನ್‌ ಕಾಪ್‌ 24, ಆಶಾ 21ಕ್ಕೆ 4, ದೀಪ್ತಿ 10ಕ್ಕೆ 2). ಪಂದ್ಯಶ್ರೇಷ್ಠ: ಸ್ಮೃತಿ ಮಂಧನಾ

Advertisement

Udayavani is now on Telegram. Click here to join our channel and stay updated with the latest news.

Next