Advertisement

ಸ್ತ್ರೀಗನ್ನಡಂ ಗೆಲ್ಗೆ!

12:10 PM Nov 01, 2017 | |

“ಕನ್ನಡ ಸುಲಿದ ಬಾಳೇಹಣ್ಣಿನಂದದಿ’ ಎಂದು ಹಾಡಿದರು ಮಹಾಲಿಂಗರಂಗ. ಕವಿಯ ಆ ಹಾಡು ಹೊರನಾಡಿನ ಈ ಐಎಎಸ್‌- ಐಪಿಎಸ್‌ ಅಧಿಕಾರಿಗಳ ಕಿವಿಗೆ ಬಿತ್ತೋ, ಬೀಳಲಿಲ್ಲವೋ ಗೊತ್ತಿಲ್ಲ. ಕೆಲಸ ಕೊಟ್ಟ, ಗಾಳಿ ಕೊಟ್ಟ, ಅನ್ನ ಕೊಟ್ಟ, ಪ್ರೀತಿ ಕೊಟ್ಟ ಈ ನಾಡಿನ ಭಾಷೆಯನ್ನು ಮಾತೃಭಾಷೆಯಂತೆ ಕಲಿತುಬಿಟ್ಟರು. ಐಎಎಸ್‌, ಐಪಿಎಸ್‌ ಶ್ರೇಣಿಯ ಅಧಿಕಾರಿಗಳು ಕನ್ನಡ ಕಲಿಯುವುದು ಅನಿವಾರ್ಯವೇ ಆದರೂ, ಅದನ್ನು ಪಾಲಿಸುವ ಮಂದಿ ವಿರಳ. ಪಾಲಿಸಿದರೂ ವ್ಯವಹಾರಕ್ಕೆ ಮಾತ್ರವೇ ಎಂಬಂತೆ.

Advertisement

ಆದರೆ, ಇಲ್ಲಿ ಕೆಲವರು ಅಧಿಕಾರಿಗಳಿದ್ದಾರೆ. ಅವರಿಗೆ ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಬಹಳ ಪ್ರೀತಿಯಿಂದ ಕನ್ನಡ ಕಲಿತಿದ್ದಾರೆ. ರಾಜ್‌ಕುಮಾರ್‌ರನ್ನು ಮೆಚ್ಚಿದ್ದಾರೆ, ಕನ್ನಡ ಸಿನಿಮಾ- ಧಾರಾವಾಹಿಗಳನ್ನು ನೋಡಿದ್ದಾರೆ, ಕನ್ನಡ ಪುಸ್ತಕಗಳನ್ನು ಓದಿದ್ದಾರೆ. ಒತ್ತಡದ ಕೆಲಸಗಳ ನಡುವೆಯೂ ಕನ್ನಡದ ಕೃತಿಯನ್ನು ತಮ್ಮ ಭಾಷೆಗೆ ಅನುವಾದಿಸುವ ಅಕ್ಕರೆ ತೋರಿದ್ದಾರೆ. ಎಲ್ಲಿಂದಲೋ ಬಂದು ಮನೆ ಮಗಳಂತೆಯೇ ಆಗಿಹೋಗಿರುವ ಇವರೆಲ್ಲರ ಕನ್ನಡಪ್ರೀತಿಯನ್ನು ಕನ್ನಡದ ಹಬ್ಬದಂದು ನೆನೆಯದಿರಲಾದೀತೆ? 

***
ಕನ್ನಡವೇ ಪಲ್ಲವಿ, ಕನ್ನಡವೇ ಸವಿ: ಪಲ್ಲವಿ ಅಕುರಾತಿ, ಐಎಎಸ್‌- ಆಂಧ್ರಪ್ರದೇಶ, ಉಪಕಾರ್ಯದರ್ಶಿ, ಜಾಗೃತಿ ವಿಭಾಗ
ನಾನು ಮೂಲತಃ ಆಂಧ್ರಪ್ರದೇಶದ ಗುಂಟೂರಿನವಳು. ಅಧಿಕಾರಿಯಾಗಿ ಕರ್ನಾಟಕಕ್ಕೆ ಬಂದಾಗ ಕನ್ನಡ ಕಲಿಯುವುದು ಅನಿವಾರ್ಯವಾಯಿತು. ಆದರೆ, ಕನ್ನಡ ಎಂದಿಗೂ ನನಗೆ ಹೊರೆಯಾಗಲಿಲ್ಲ. ಒಂದು ವರ್ಷದಲ್ಲೇ ಕನ್ನಡ ಕಲಿತೆ. ಆದರೆ, ತಪ್ಪಿಲ್ಲದೆ ಬರೆಯುವುದನ್ನು ಕಲಿಯಲು ಎರಡು ವರ್ಷ ಬೇಕಾಯ್ತು. ನಾನು ಡಾ. ರಾಜ್‌ಕುಮಾರ್‌ ಅವರ ಅಭಿಮಾನಿ. ಕನ್ನಡ ಕಲಿಯಲು ಅವರ ಸಿನಿಮಾಗಳು ತುಂಬಾನೇ ಸಹಾಯ ಮಾಡಿವೆ.

ಕನ್ನಡದ ಈಗಿನ ಯುವಜನತೆ ನೋಡಿರುವುದಕ್ಕಿಂತ ಹೆಚ್ಚಿನ ಕನ್ನಡ ಸಿನಿಮಾಗಳನ್ನು ನಾನು ನೋಡಿದ್ದೇನೆ. ಮಯೂರ, ಬಭುವಾಹನ, ಶ್ರೀಕೃಷ್ಣದೇವರಾಯ, ಎರಡು ಕನಸು, ಬಂಗಾರದ ಪಂಜರ, ಸಂಪತ್ತಿಗೆ ಸವಾಲ್‌, ಚಂದನದ ಗೊಂಬೆ, ಮುತ್ತಿನಹಾರ, ಮಲಯಮಾರುತ, ಹಾಲುಂಡ ತವರು… ಹೀಗೆ ನಾನು ಯಾವ ಸಿನಿಮಾವನ್ನೂ ಬಿಟ್ಟಿಲ್ಲ. ಗಣೇಶ್‌ ಅವರ “ಮುಂಗಾರುಮಳೆ’ ಸಿನಿಮಾ ಕೂಡ ನೋಡಿದ್ದೇನೆ.

“ಮಯೂರ’ ನನ್ನ ಆಲ್‌ ಟೈಂ ಫೇವರಿಟ್‌ ಮೂವಿ. ಅದನ್ನು ಕನ್ನಡ ಅರ್ಥವಾಗದ ನಮ್ಮ ಅಪ್ಪ-ಅಮ್ಮನಿಗೂ ತೋರಿಸಿ, ಅರ್ಥ ಮಾಡಿಸಿದ್ದೇನೆ. ಹೊರರಾಜ್ಯದಿಂದ ಬಂದ ಅಧಿಕಾರಿಗಳು “ತಿಳಿ ಕನ್ನಡ’ (ಹತ್ತನೇ ತರಗತಿಯ ಮೂರನೇ ಭಾಷೆ ಕನ್ನಡ) ಪರೀಕ್ಷೆ ಬರೆಯುವುದು ಕಡ್ಡಾಯ. ಅದರಲ್ಲಿ ಎಲ್ಲರೂ ಪಾಸಾಗಲೇಬೇಕು. ನನ್ನ ಕನ್ನಡದ ಕಲಿಕೆ ಶುರುವಾಗಿದ್ದೂ ಹಾಗೆಯೇ. ಮೊದಲು ನನಗೆ ಕನ್ನಡ ಕಲಿಸಿದ್ದು ಮುತ್ತಿನ ಮಠ ಸರ್‌.

Advertisement

ಮೈಸೂರಿಗೆ ಬಂದಮೇಲೆ ಡಾ. ಪ್ರಧಾನ್‌ ಗುರುದತ್ತ ಅವರು ಸರಿಯಾಗಿ ಮಾತಾಡಲು, ಅಫಿಶಿಯಲ್‌ ಲೆಟರ್‌ ಬರೆಯಲು ಕಲಿಸಿದರು. ಅವರು ಬೋರ್ಡ್‌ ಮೇಲೆ ಪ್ರತಿ ಅಕ್ಷರವನ್ನೂ ಬರೆದು ತೋರಿಸುತ್ತಿದ್ದುದು ಇವತ್ತಿಗೂ ನೆನಪಿದೆ. ಕನ್ನಡ ಸಾಹಿತ್ಯದ ಬಗ್ಗೆಯೂ ಅಲ್ಪಸ್ವಲ್ಪ ತಿಳಿದುಕೊಂಡಿದ್ದೇನೆ. ಆದರೆ, ತುಂಬಾ ಪುಸ್ತಕಗಳನ್ನು ಓದಿಲ್ಲ. ಚೋಮನದುಡಿ, ಮೂಕಜ್ಜಿಯ ಕನಸು, ಷೇಕ್ಸ್‌ಪಿಯರ್‌ನ ಕೃತಿಗಳ ಕನ್ನಡಾನುವಾದವನ್ನು ಓದಿದ್ದೇನೆ.

ಚೋಮನದುಡಿಯ ನಿರೂಪಣಾ ಧಾಟಿ ನನಗೆ ಬಹಳ ಇಷ್ಟವಾಯ್ತು. ಇತ್ತೀಚೆಗೆ ನಾನು ಅಕ್ಕಮಹಾದೇವಿಯ ಜೀವನ ಚರಿತ್ರೆಯನ್ನು ಕನ್ನಡದಿಂದ ತೆಲುಗು ಭಾಷೆಗೆ ಅನುವಾದ ಮಾಡುತ್ತಿದ್ದೇನೆ. ಕೊನೆಯ ಹಂತದ ಕೆಲಸಗಳು ನಡೆಯುತ್ತಿದ್ದು, ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದಲ್ಲಿ ಗಂಗಮ್ಮ ಸತ್ಯಂಪೇಟೆ ಅವರು ಬರೆದ “ಉಕ್ಕಿನ ಮಹಿಳೆ’ ಪುಸ್ತಕವನ್ನು “ಅಕ್ಕಮಹಾದೇವಿ ಜೀವಿತ ಚರಿತ್ರೆ’ ಎಂದು ಅನುವಾದಿಸುತ್ತಿದ್ದೇನೆ.

12ನೇ ಶತಮಾನದ ಹಳಗನ್ನಡದ ವಚನಗಳನ್ನೂ ಅನುವಾದಿಸಿದ್ದೇನೆ. 2-3 ತಿಂಗಳುಗಳ ಕಾಲ ಗಂಗಮ್ಮ ಅವರಿಗೆ ದಿನಾ ಫೋನ್‌ ಮಾಡಿ, ಅದನ್ನು ರೆಕಾರ್ಡ್‌ ಮಾಡಿಕೊಂಡು ಪುನಃ ಪುನಃ ಕೇಳುತ್ತಾ ಹಳೆಗನ್ನಡದ ಪದಗಳ ಅರ್ಥ, ಅನುವಾದದ ಬಗ್ಗೆ ತಿಳಿದುಕೊಂಡಿದ್ದೇನೆ. ಜೀವಮಾನದಲ್ಲಿ ನನಗೆ ಅತ್ಯಂತ ಖುಷಿ ಕೊಟ್ಟ ಸಂಗತಿಗಳಲ್ಲಿ ಈ ಅನುವಾದವೂ ಒಂದು.

***
ಕೆಲಸದಾಳಿಗಾಗಿ ಕನ್ನಡ ಕಲಿತೆ!: ಎಂ. ಕನಗವಲ್ಲಿ, ಐಎಎಸ್‌- ತಮಿಳುನಾಡು, ಕೊಪ್ಪಳ ಜಿಲ್ಲಾಧಿಕಾರಿ 
ನಾನು ಕನ್ನಡ ಕಲಿತಿದ್ದು ಮಂಡ್ಯದಲ್ಲಿ ಟ್ರೈನಿಂಗ್‌ ಪಡೆಯುತ್ತಿದ್ದಾಗ. ಅಲ್ಲಿ ಜನರೊಂದಿಗೆ ವ್ಯವಹರಿಸಬೇಕು ಅಂದ್ರೆ ಕನ್ನಡ ಕಲಿಯಲೇಬೇಕು. ನನ್ನ ಮನೆಕೆಲಸದವರು, ಡ್ರೈವರ್‌ ಎಲ್ಲರೂ ಕನ್ನಡದವರೇ. ಬಟ್ಟೆ, ಪಾತ್ರೆ ತೊಳೆಯುವ ಹೆಂಗಸಿಗೆ “ಬಟ್ಟೆಯಲ್ಲಿ ನೊರೆ ಉಳಿಸಬೇಡ, ಚೆನ್ನಾಗಿ ಪಾತ್ರೆ ತೊಳಿ’ ಅಂತ ತಮಿಳಿನಲ್ಲಿ ಹೇಳಿದರೆ ಅರ್ಥವಾಗುತ್ತಾ? ಹಾಗಾಗಿ ನಾನು ಒಬ್ಬ ಕನ್ನಡ ಟೀಚರ್‌ ಅನ್ನು ನೇಮಿಸಿಕೊಂಡಿದ್ದೆ. ಅವರು ಪ್ರತಿದಿನ ಬೆಳಗ್ಗೆ ಶಾಲೆಗೆ ಹೋಗುವ ಮುನ್ನ ನನಗೆ ಕನ್ನಡ ಕಲಿಸುತ್ತಿದ್ದರು. ನಾನು ಅವರ ಜೊತೆ ಕನ್ನಡದಲ್ಲಿ ಮಾತಾಡಿ, ಮಾತಾಡಿ ಬೇರೆಯವರೊಂದಿಗೂ ತಪ್ಪಿಲ್ಲದೆ ಮಾತಾಡುವುದನ್ನು 2-3 ತಿಂಗಳೊಳಗೆ ಕಲಿತೆ. 

ಕನ್ನಡ ಕಲಿಯುವುದಕ್ಕಾಗಿಯೇ ಆಗ ಧಾರಾವಾಹಿಗಳನ್ನು ನೋಡುತ್ತಿದ್ದೆ. ಸೀರಿಯಲ್‌ಗ‌ಳಲ್ಲಿ ನಿಧಾನವಾಗಿ ಡೈಲಾಗ್‌ ಹೇಳುವುದರಿಂದ ಅರ್ಥವಾಗುತ್ತಿತ್ತು. ಫಿಲ್ಮ್ ಮತ್ತು ನ್ಯೂಸ್‌ಗಳಲ್ಲಿ ತುಂಬಾ ಸ್ಪೀಡಾಗಿ ಮಾತಾಡುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳೋದು ಕಷ್ಟ ಆಗ್ತಿತ್ತು. ಆದರೆ, ಈಗ ನಾನು ಯಾರು, ಎಷ್ಟೇ ಸ್ಪೀಡ್‌ ಆಗಿ ಮಾತಾಡಿದರೂ ಅರ್ಥ ಮಾಡ್ಕೊàತೀನಿ, ಕನ್ನಡ ನ್ಯೂಸ್‌ ಚಾನೆಲ್‌ ನೋಡ್ತೀನಿ, ಹಲವರಿಗಿಂತ ಚೆನ್ನಾಗಿಯೇ ಕನ್ನಡ ಮಾತಾಡ್ತೀನಿ. ಸದ್ಯಕ್ಕೆ ಸರ್ಕಾರದ ಎಲ್ಲ ಫೈಲ್‌, ಸಕ್ಯುìಲರ್‌ಗಳನ್ನು ಓದಿ, ಬರೆಯಬಲ್ಲೆ. ಮುಂದೆ ಕನ್ನಡ ಸಾಹಿತ್ಯ ಓದುವ ಆಸೆಯೂ ಇದೆ.

***
ಜನರೇ ನನಗೆ ಕನ್ನಡ ಟೀಚರ್‌: ಸೋನಿಯಾ ನಾರಂಗ್‌, ಐಪಿಎಸ್‌ – ಚಂಡೀಗಢ, ಎನ್‌ಐಎ, ಎಸ್‌ಪಿ (ರಾಷ್ಟ್ರೀಯ ತನಿಖಾ ದಳ) 
ಕನ್ನಡದ ಮೊದಲ ಕಲಿಕೆ ನ್ಯಾಷನಲ್‌ ಪೊಲೀಸ್‌ ಅಕಾಡೆಮಿಯಲ್ಲಿ ಆಯ್ತು. ಅಲ್ಲಿ ಎಲ್ಲ ಅಧಿಕಾರಿಗಳಿಗೂ, ಯಾವ ಜಾಗಕ್ಕೆ ಪೋಸ್ಟ್‌ ಆಗುತ್ತಾರೋ ಅಲ್ಲಿಯ ಸ್ಥಳೀಯ ಭಾಷೆಯ ಬಗ್ಗೆ ಬೇಸಿಕ್‌ ಕಲಿಸುತ್ತಾರೆ. ಮುಂದಿನ ಕಲಿಕೆ ಮೈಸೂರಿನ ಪೊಲೀಸ್‌ ಅಕಾಡೆಮಿಯಲ್ಲಿ. ನಂತರ ಕಲಿತಿದ್ದೆಲ್ಲಾ ಜನರಿಂದಲೇ. ಕರ್ನಾಟಕದಲ್ಲಿ ಮೊದಲು ಪೋಸ್ಟಿಂಗ್‌ ಆಗಿದ್ದು ಗುಲ್ಬರ್ಗದಲ್ಲಿ. ಅಲ್ಲಿ ಉರ್ದು ಮಿಶ್ರಿತ ಕನ್ನಡ ಮಾತಾಡುತ್ತಾರೆ.

ನಂತರ ಬೈಲಹೊಂಗಲದಲ್ಲಿ ಎಎಸ್‌ಪಿ ಆಗಿ ವರ್ಗಾವಣೆಯಾಯ್ತು. ಅಲ್ಲಿಯದು ಉತ್ತರಕರ್ನಾಟಕ ಶೈಲಿಯ ಕನ್ನಡ. ಮುಂದಿನ ಪಯಣ ದಾವಣಗೆರೆ. ಅದು ದಕ್ಷಿಣ ಕರ್ನಾಟಕದ ಭಾಗ. ಅಲ್ಲಿನ ಕನ್ನಡದ ಸೊಗಡೇ ಬೇರೆ. ಹೀಗೆ ನನಗೆ ಕರ್ನಾಟಕದ ಬೇರೆ ಬೇರೆ ಭಾಗಗಳ ಕನ್ನಡದ ಪರಿಚಯವಾಯ್ತು. (ಕನ್ನಡದ “ನಾಯಿ’, ಉರ್ದುವಿನಲ್ಲಿ “ಕ್ಷೌರಿಕ’ ಆಗುತ್ತೆ! ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡಿರುವುದರಿಂದ ಹೀಗೆ ಕೆಲವೊಮ್ಮೆ ಪೇಚಿಗೆ ಸಿಲುಕುವ ಪ್ರಸಂಗಗಳೂ ಎದುರಾಗಿದ್ದವು) 

ಕನ್ನಡದ ದಿನಪತ್ರಿಕೆಗಳನ್ನು ಓದುತ್ತಿದ್ದೆ. ಸಿನಿಮಾದ ಬಗ್ಗೆ ನನಗೆ ಅಷ್ಟಾಗಿ ಆಸಕ್ತಿಯಿಲ್ಲ. ಕನ್ನಡ ಅಂತಲ್ಲ, ಯಾವ ಭಾಷೆಯ ಸಿನಿಮಾವನ್ನೂ ನೋಡುವುದು ಕಡಿಮೆ. ಕನ್ನಡದ ಹಾಡುಗಳನ್ನು ಕೇಳಿದ್ದೇನೆ. “ಮುಂಗಾರುಮಳೆ’ಯ ಹಾಡುಗಳು ನನಗೆ ಇಷ್ಟ. ಕನ್ನಡಿಗರು ಮೃದು ಹೃದಯದವರು, ಎಲ್ಲರನ್ನೂ ತುಂಬಾ ಪ್ರೀತಿ-ಆದರದಿಂದ ನೋಡಿಕೊಳ್ಳುತ್ತಾರೆ ಎನ್ನುವುದು ಇನ್ನೊಂದು ಸಂತಸದ ವಿಷಯ. 

***
“ನಮಸ್ಕಾರ, ಚೆನ್ನಾಗಿದೀರ?’- ನನ್ನ ಮೊದಲ ಕನ್ನಡ: ಡಾ. ಶಾಲಿನಿ ರಜನೀಶ್‌, ಐಎಎಸ್‌- ಚಂಡೀಗಢ, ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಮಾಧ್ಯಮಿಕ) ಪ್ರಧಾನ ಕಾರ್ಯದರ್ಶಿ 
1989ರಲ್ಲಿ ನಾನು ಕಾರ್ಯನಿಮಿತ್ತ ಕರ್ನಾಟಕಕ್ಕೆ ಬಂದೆ. ನನ್ನ ಮೊದಲ ಕಾರ್ಯಕ್ಷೇತ್ರ ಕೋಲಾರ. ಅಲ್ಲಿ ಜನ ತೆಲುಗು ಮಿಶ್ರಿತ ಕನ್ನಡ ಮಾತಾಡ್ತಾರೆ. ಮೊದಲಂತೂ ಯಾವುದು ಕನ್ನಡ, ಯಾವುದು ತೆಲುಗು ಅಂತ ತಿಳಿಯದೇ ಗೊಂದಲವಾಗುತ್ತಿತ್ತು. ಆಮೇಲೆ ಮಂಗಳೂರಿಗೆ ಹೋದೆ. ಅಲ್ಲಿನ ಜನ ನಿಖರವಾಗಿ ಕನ್ನಡ ಮಾತಾಡ್ತಾರೆ. ಏನನ್ನು ಪುಸ್ತಕದಲ್ಲಿ ಓದುತ್ತೇವೋ, ಅದದೇ ಶಬ್ದಗಳು.

ಕೋಲಾರ, ದಕ್ಷಿಣಕನ್ನಡ, ಬೆಳಗಾವಿ, ಧಾರವಾಡ, ಬೆಂಗಳೂರು… ಹೀಗೆ ಎಲ್ಲ ಕಡೆ ಕೆಲಸ ಮಾಡಿದ್ದೇನೆ. ಹಾಗಾಗಿ ಎಲ್ಲ ಸೊಗಡಿನ ಕನ್ನಡವೂ ಈಗ ಅರ್ಥವಾಗುತ್ತದೆ. ಮೊದಲಿಂದಲೂ ಹೊಸ ಭಾಷೆ ಕಲಿಯುವುದು ನನಗೆ ತುಂಬಾ ಇಷ್ಟ. ಕನ್ನಡದ ಜೊತೆಜೊತೆಗೆ ಅಲ್ಪಸ್ವಲ್ಪ ತುಳು, ತೆಲುಗನ್ನೂ ಕಲಿತಿದ್ದೇನೆ. ಪ್ರಾರಂಭದಲ್ಲಿ ನಾನು ಮತ್ತು ರಜನೀಶ್‌ ಮನೆಯಲ್ಲಿ ಕನ್ನಡವನ್ನೇ ಮಾತಾಡುತ್ತಿದ್ದೆವು.

ಅವರಿಗೆ ನನಗಿಂತ ಚೆನ್ನಾಗಿ ಕನ್ನಡ ಗೊತ್ತಿತ್ತು. ಕೆಲಸದವರು, ಅಡುಗೆಯವರು ಹೀಗೆ ಎಲ್ಲರೂ ಕನ್ನಡ ಟೀಚರ್‌ಗಳೇ. ಇದಕ್ಕೇನಂತಾರೆ? ಅದಕ್ಕೇನಂತಾರೆ? ಅಂತೆಲ್ಲಾ ಕೇಳಿ ಕೇಳಿ ತಿಳಿದುಕೊಳ್ಳುತ್ತಿದ್ದೆ.  ಮಾರ್ಕೆಟ್‌ಗೆ ಹೋದಾಗಲೂ ಕಿವಿ ಕನ್ನಡ ಪದಗಳತ್ತ ಹೊರಳುತ್ತಿತ್ತು. ನಾನು ಮೊದಲು ಕಲಿತದ್ದು, “ನಮಸ್ಕಾರ ಚೆನ್ನಾಗಿದೀರ’ ಅನ್ನೋದನ್ನು. ಯಾರನ್ನೇ ಆದರೂ ಗೌರವದಿಂದ ಮಾತಾಡಿಸುವುದು ನಮ್ಮ ಸಂಸ್ಕೃತಿ.

ಕನ್ನಡದಲ್ಲಿ ಏಕವಚನದ ಪದಗಳನ್ನು ನಾನು ಕಲಿತೇ ಇಲ್ಲ. ಸಣ್ಣ ಮಗುವನ್ನು ಕೂಡ ನೀವು, ಬನ್ನಿ, ಹೋಗಿ ಅಂತಲೇ ಮಾತಾಡಿಸುತ್ತೇನೆ. ನಾನು 10ನೇ ಕ್ಲಾಸ್‌ವರೆಗೂ ಸಂಸ್ಕೃತವನ್ನು ಪಠ್ಯವನ್ನಾಗಿ ಕಲಿತಿದ್ದೆ. ನನ್ನ ಪ್ರಕಾರ ಕನ್ನಡ ಮತ್ತು ಸಂಸ್ಕೃತಕ್ಕೆ ತುಂಬಾ ಸಾಮ್ಯತೆ ಇದೆ. ಕನ್ನಡದಲ್ಲಿ ಪದಗಳು ಹೊಳೆಯದೇ ಇದ್ದಾಗ ಸಂಸ್ಕೃತದ ಸಹಾಯ ಪಡೆಯುತ್ತಿದ್ದೆ.ನಾನು ಕನ್ನಡ ಪತ್ರಿಕೆಗಳನ್ನು, ಪುಸ್ತಕಗಳನ್ನು ಓದುತ್ತೇನೆ.

ಬಸವಣ್ಣನವರ ವಚನಗಳೆಂದರೆ ಅಚ್ಚುಮೆಚ್ಚು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಬಗ್ಗೆಯೂ ಓದಿದ್ದೇನೆ. ನೀವೂ ಬರೆಯಬಲ್ಲಿರಿ ಅಂತ ಹುರಿದುಂಬಿಸಿ ಹಿತೈಷಿಗಳು ಅಂಕಣ, ಪುಸ್ತಕವನ್ನೂ ಬರೆಸಿದ್ದಾರೆ. ಈಗಾಗಲೇ ಏಳೆಂಟು ಕನ್ನಡ ಪುಸ್ತಕಗಳನ್ನು ಬರೆದಿದ್ದೇನೆ. ಟಿ.ವಿಯಲ್ಲಿ ಬರುವ ಕನ್ನಡ ಸಿನಿಮಾಗಳನ್ನು ನೋಡುತ್ತೇನೆ. ಡಾ. ರಾಜ್‌ಕುಮಾರ್‌ ಅವರ ಬಹಳಷ್ಟು ಸಿನಿಮಾಗಳನ್ನು ನೋಡಿದ್ದೇನೆ.

ಮುಂಗಾರುಮಳೆ, ಹಜ್‌, ತಿಥಿ ಇತ್ಯಾದಿ ಚಿತ್ರಗಳೂ ಇಷ್ಟವಾಗಿವೆ. ಕನ್ನಡ ಭಾಷೆ ಎಷ್ಟು ಚಂದವೋ, ಇಲ್ಲಿನ ಜನರೂ ಅಷ್ಟೇ ಒಳ್ಳೆಯವರು. ಒಂದು ಪ್ರದೇಶದ ಭಾಷೆಯನ್ನು ಕಲಿತಾಗ ಮಾತ್ರ ಅಲ್ಲಿನ ಜನರ ಸಂಸ್ಕೃತಿ ಸುಲಭವಾಗಿ ಅರ್ಥವಾಗುತ್ತದೆ. ಮಾತನಾಡುವಾಗ ತಪ್ಪಾದರೆ ಅಪಹಾಸ್ಯ ಮಾಡದೆ ನನ್ನನ್ನು ತಿದ್ದಿದ್ದಾರೆ. ಇಲ್ಲಿನವರ ಪ್ರೀತಿಗೆ ಅಭಾರಿ.  

ಹೆಣ್ಣಲ್ಲ ಸಾರ್‌, ಅದು ಹಣ್ಣು!
ಹೊಸದೊಂದು ಭಾಷೆ ಕಲಿಯುವಾಗ ತಮಾಷೆಯ ಪ್ರಸಂಗಗಳು ನಡೆಯುತ್ತವೆ. ನನ್ನ ಜೊತೆಯಲ್ಲಿ ಅಂಥದ್ದೇನೂ ನಡೆದಿಲ್ಲ. ಆದರೆ, ಟ್ರೇನಿಂಗ್‌ ವೇಳೆಯಲ್ಲಿ ಸಹ ಅಧಿಕಾರಿಯೊಬ್ಬರು ತಪ್ಪು ಉಚ್ಚಾರದಿಂದ ಪೇಚಿಗೆ ಸಿಲುಕಿದ್ದರು. ಒಂದು ದಿನ ಊಟ ಮುಗಿದ ಮೇಲೆ ಅವರು ಗುಮಾಸ್ತನನ್ನು ಕರೆದು, “ನೋಡಪ್ಪಾ ಹೆಣ್ಣು ತಗೋ ಬಾ’ ಅಂದರು. ಗುಮಾಸ್ತನಿಗೆ ಗಲಿಬಿಲಿಯಾಯ್ತು.

ಇದೇನಪ್ಪಾ ಇವರು ಹೀಗೆ ಕೇಳ್ತಿದ್ದಾರೆ ಅಂತ. “ಸಾರ್‌ ಏನ್‌ ಕೇಳ್ತಿದ್ದೀರ ನೀವು?’ ಅಂದ ಗುಮಾಸ್ತ. “ಅದೇ ಕಣಪ್ಪಾ ನಿನ್ನೆ ಊಟ ಆದ್ಮೇಲೆ ಕೊಟ್ಟಿದ್ಯಲ್ಲಾ …ಆ ಹೆಣ್ಣು ಚೆನ್ನಾಗಿತ್ತು. ಇವತ್ತೂ ತಂದುಕೊಂಡು’ ಅಂದರು ಅಧಿಕಾರಿ. ಆಗ ಆ ಗುಮಾಸ್ತ ನಗುತ್ತಾ ಹೇಳಿದ: “ಸಾರ್‌ ಅದು ಹಣ್ಣು , ಹೆಣ್ಣಲ್ಲ. ನೀವು ಹೆಣ್ಣು ಅಂದ್ರೆ ಜನ ತಪ್ಪು ತಿಳೀತಾರೆ’ ಅಂತ. 

***
ಪುತ್ತೂರಲ್ಲಿ ಕನ್ನಡ ಕಿವಿಗೆ ಬಿತ್ತು…: ಡಾ. ರೋಹಿಣಿ ಕಾಟೋಚ್‌, ಐಪಿಎಸ್‌- ಹಿಮಾಚಲಪ್ರದೇಶ, ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 
ಸರ್ಕಾರಿ ಅಧಿಕಾರಿಗಳಿಗೆ ಕನ್ನಡ ಕಲಿಯುವುದು ಅನಿವಾರ್ಯ. ನಾವು ನೇರವಾಗಿ ಜನರೊಂದಿಗೆ ಸಂಪರ್ಕದಲ್ಲಿರಬೇಕಾಗುತ್ತದೆ. ಆಗ ಸ್ಥಳೀಯ ಭಾಷೆ ಗೊತ್ತಿದ್ದರೆ ಜನರಿಗೆ ಬೇಗ ಹತ್ತಿರವಾಗಬಹುದು. ನಾನು ಎ.ಎಸ್‌.ಪಿ. ಆಗಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಕೆಲಸಕ್ಕೆ ಸೇರಿದಾಗ ಕನ್ನಡ ಕಲಿತಿದ್ದು. ಅದು ಶುದ್ಧ ಕನ್ನಡ ಮಾತಾಡುವವರು ಇರುವ ಜಾಗ. ಹಾಗಾಗಿ ಓದು, ಬರಹ ಎರಡಕ್ಕೂ ಸಹಾಯವಾಯ್ತು.

ನಾನು ನ್ಯೂಸ್‌ಪೇಪರ್‌ಗಳನ್ನು ಓದಿಯೂ ಕನ್ನಡ ಕಲಿತಿದ್ದೇನೆ. ಈಗ ಸರ್ಕಾರದ ಎಲ್ಲ ಫೈಲ್‌, ಸರ್ಟಿಫಿಕೇಟ್‌ಗಳನ್ನು ಕನ್ನಡದಲ್ಲಿಯೇ ಓದಿ, ಬರೆಯುತ್ತೇನೆ. ಹಿಮಾಚಲಪ್ರದೇಶದಿಂದ ಬಂದ ನನಗೆ ಕನ್ನಡ ಮನೆಮಾತಷ್ಟೇ ಖುಷಿ ಕೊಡುತ್ತದೆ. ವಿದ್ಯಾಭ್ಯಾಸ ನಡೆದಿದ್ದು ಉತ್ತರಪ್ರದೇಶ, ಮಹರಾಷ್ಟ್ರದಲ್ಲಿ. ಇಲ್ಲಿಗೆ ಬರುವ ಮುಂಚೆ ಕನ್ನಡದ ಗಂಧ-ಗಾಳಿಯೂ ಇರಲಿಲ್ಲ. ಸೀನಿಯರ್‌ ಆಫೀಸರ್‌ಗಳು ನನಗೆ ಕನ್ನಡ ಶಿಕ್ಷಕರೂ ಆಗಿದ್ದರು.

* ಪ್ರಿಯಾಂಕಾ ನಟಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next