Advertisement

ಆಸೀಸ್‌ ವಿರುದ್ಧ ಸೋತರೂ ಭಾರತಕ್ಕೆ ಪ್ರಶಸ್ತಿ

10:00 AM Dec 09, 2019 | Team Udayavani |

ಕ್ಯಾನ್‌ಬೆರಾ (ಆಸ್ಟ್ರೇಲಿಯ): ಮೂರು ರಾಷ್ಟ್ರಗಳ ವನಿತಾ ಜೂನಿಯರ್‌ ಹಾಕಿ ಪಂದ್ಯಾವಳಿಯಲ್ಲಿ ಭಾರತ ಚಾಂಪಿಯನ್‌ ಆಗಿ ಮೂಡಿ ಬಂದಿದೆ. ರವಿವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ವಿರುದ್ಧ 1-2 ಗೋಲುಗಳ ಸೋಲನುಭವಿಸಿದ ಹೊರತಾಗಿಯೂ ಭಾರತಕ್ಕೆ ಪ್ರಶಸ್ತಿ ಒಲಿಯಿತು.

Advertisement

ರೌಂಡ್‌ ರಾಬಿನ್‌ ಲೀಗ್‌ ಮಾದರಿಯ ಈ ಕೂಟದ ಕೊನೆಯ ಮುಖಾಮುಖೀ ಬಳಿಕ ಭಾರತ ಮತ್ತು ಆಸ್ಟ್ರೇಲಿಯ 4 ಪಂದ್ಯಗಳಿಂದ ತಲಾ 7 ಅಂಕ ಸಂಪಾದಿಸಿದವು. ಆದರೆ ಒಟ್ಟಾರೆ ಗೋಲು ಗಳಿಕೆಯಲ್ಲಿ ಮುಂದಿದ್ದ ಕಾರಣ ಭಾರತ ಚಾಂಪಿಯನ್‌ ಪಟ್ಟ ಅಲಂಕರಿಸಿತು. 4 ಪಂದ್ಯಗಳಿಂದ 3 ಅಂಕಗಳನ್ನಷ್ಟೇ ಹೊಂದಿದ್ದ ಕಿವೀಸ್‌ ತೃತೀಯ ಸ್ಥಾನಿಯಾಯಿತು.
ಭಾರತ ಎರಡೂ ಪಂದ್ಯಗಳಲ್ಲಿ ನ್ಯೂಜಿಲ್ಯಾಂಡಿಗೆ ಸೋಲುಣಿಸಿತ್ತು. ಆಸ್ಟ್ರೇಲಿಯ ವಿರುದ್ಧದ ಮೊದಲ ಸುತ್ತಿನ ಪಂದ್ಯ ಡ್ರಾಗೊಂಡಿತ್ತು.

ಆಸ್ಟ್ರೇಲಿಯ ಮೇಲುಗೈ
ರವಿವಾರದ ನಿರ್ಣಾಯಕ ಮುಖಾ ಮುಖೀಯ 15ನೇ ನಿಮಿಷದಲ್ಲೇ ಆಸೀಸ್‌ ಗೋಲಿನ ಖಾತೆ ತೆರೆಯಿತು. ಅಬಿಗೇಲ್‌ ವಿಲ್ಸನ್‌ ಆತಿಥೇಯರಿಗೆ ಮುನ್ನಡೆ ಒದಗಿಸಿದರು. ಪಂದ್ಯವನ್ನು ಸಮಬಲಕ್ಕೆ ತರಲು ಭಾರತ 53ನೇ ನಿಮಿಷದ ತನಕ ಕಾಯಬೇಕಾಯಿತು. ಗಗನ್‌ದೀಪ್‌ ಕೌರ್‌ ಆಕರ್ಷಕ ಗೋಲ್‌ ಮೂಲಕ ಭಾರತದ ಪಾಳೆಯದಲ್ಲಿ ಸಂತಸ ಮೂಡಿಸಿದರು.

ಭಾರತ ಈ ಸಮಬಲವನ್ನೇ ಕಾಯ್ದುಕೊಂಡೀತೆಂದೇ ಭಾವಿಸ ಲಾಗಿತ್ತು. ಆದರೆ ಮೂರೇ ನಿಮಿಷ ದಲ್ಲಿ ಅಬಿಗೇಲ್‌ ವಿಲ್ಸನ್‌ ಮತ್ತೆ ಆಕ್ರಮಣಕ್ಕಿಳಿದು ದ್ವಿತೀಯ ಗೋಲು ಸಿಡಿಸಿದರು. ಆಸೀಸ್‌ ಪಡೆ ಗೆದ್ದರೂ ಪ್ರಯೋಜನವಾಗಲಿಲ್ಲ.

ದೊಡ್ಡ ಅಂತರದಲ್ಲಿ ಗೆಲ್ಲಬೇಕಿದ್ದ ಆಸ್ಟ್ರೇಲಿಯ ಬಿರುಸಿನಿಂದಲೇ ಆಟ ಆರಂಭಿಸಿತ್ತು. ಮೊದಲ ಕ್ವಾರ್ಟರ್‌ನಲ್ಲಿ ಭಾರತ ಒತ್ತಡಕ್ಕೆ ಸಿಲುಕಿತು. ದ್ವಿತೀಯ ಕ್ವಾರ್ಟರ್‌ನಲ್ಲಿ ಚೇತರಿಸಿಕೊಂಡರೂ ಬೆನ್ನು ಬೆನ್ನಿಗೆ ಲಭಿಸಿದ 2 ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಕೈಚೆಲ್ಲಿತು. 3ನೇ ಅವಧಿಯಲ್ಲಿ ಎರಡೂ ತಂಡಗಳಿಗೆ ಪೆನಾಲ್ಟಿ ಕಾರ್ನರ್‌ ಲಭಿಸಿತಾದರೂ ಗೋಲು ಬಾರಿಸಲಾಗಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next