Advertisement
ಹೌದು ಎಂದರೂ ಇಲ್ಲ ಎಂದರೂ ನಾವೆಲ್ಲ ಪುರುಷಪ್ರಧಾನ ವ್ಯವಸ್ಥೆಯನ್ನು ಒಪ್ಪಿ ನಡೆಯುತ್ತಿದ್ದೇವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಮೊದಲೆಲ್ಲ ಹೆಣ್ಣಿಗೆ ಭೌತಿಕವಾಗಿ ಪುರುಷನೊಬ್ಬನು ಹಿಂಬಾಲಿಸಬಹುದಾದ ಭಯವಿತ್ತು. ಈಗ, ಅವಳನ್ನು ಜಾಲತಾಣಗಳಲ್ಲಿ ಕಾಣದ ಲೋಕದ ರಾಕ್ಷಸನೊಬ್ಬನು ಅನುಸರಿಸುತ್ತಿರುತ್ತಾನೆ. ಈ ರಾಕ್ಷಸನಿಗೆ ಬಲಿ ಅಂದರೆ ಹೆಣ್ಣು. ಜಾಲತಾಣಗಳಲ್ಲಿ ಹೆಮ್ಮೆಯಿಂದ ತನ್ನತನವನ್ನು ಪ್ರದರ್ಶಿಸುವ ಹೆಣ್ಣಿಗೆ ಯಾರೂ ಊಹಿಸದ ರೀತಿಯಲ್ಲಿ ಈ ಭಯ ಕಾಡಲಾರಂಭಿಸುತ್ತದೆ.
ಜಾಲತಾಣದ ಮೂಲಕ ಯಾವ ತಪ್ಪೂ ಮಾಡದ ಹೆಣ್ಣುಮಕ್ಕಳು ಅನುಭವಿಸುವ ಭಾದೆಯ ಕುರಿತು ಹೇಳುವುದೇ ನನ್ನ ಈ ಬರವಣಿಗೆಯ ಉದ್ದೇಶವಾಗಿದೆ.ಅದೊಂದು ರಾತ್ರಿ 11ರ ಸಮಯ. ತುಂಬ ಕಲಿತ, ನನಗೆ ಪರಿಚಯವಿರುವ ಹೆಣ್ಣೊಬ್ಬಳು ತರಾತುರಿಯಲ್ಲಿ, ನನಗೆ 34 ಎಸ್‌ಎಂಎಸ್ ಕಳಿಸಿದಳು. ಅವಳ ಆತಂಕದ ಸಂದೇಶಗಳ ಅದರ ಸಾರಾಂಶ ಇಷ್ಟೇ. ಆಕೆಗೆ ಹಾಗೂ ನನಗೆ ತಿಳಿದಿರುವ ಪ್ರತಿಷ್ಠಿತ ವ್ಯಕ್ತಿಯೊಬ್ಬ ಆಕೆಯ ಕೆಟ್ಟ ಭಂಗಿಯ ಚಿತ್ರಗಳನ್ನು ಜಾಲತಾಣ ಮುಖೇನ ಕೇಳಿದ್ದಾನೆ. ಸಿಟ್ಟು ಮತ್ತು ಅಸಹಾಯಕತೆಯಲ್ಲಿ ಕಂಗಾಲಾದ ಹುಡುಗಿ, “ನಾನು ಮಾಡಿದ ತಪ್ಪಾದರೂ ಏನು?’ ಎಂದು ಹಲುಬುತ್ತಿದ್ದಳು. ಇವತ್ತು ನಾನು ಕೇಳಹೊರಟಿರುವ ಪ್ರಶ್ನೆ, ಹೆಣ್ಣು ಬದುಕನ್ನು ಪ್ರೀತಿಸುವ ಸಂಕೇತವಾಗಿ, ತನ್ನ ಚಿತ್ರಗಳಲ್ಲಿ ಮುಕ್ತವಾಗಿ ನಗುತ್ತ, ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತ ತನ್ನ ಇರುವಿಕೆಯನ್ನು ಕಾಣಿಸಿದರೆ, ಅದು ತಪ್ಪಾ? ಅದು ಆಕೆಯ ಕಾಮುಕತೆಯನ್ನು ಪ್ರತಿನಿಧಿಸುತ್ತದೆಯೆ? ಪುರುಷನು ಹಾಗೆ ಮಾಡಿದರೆ ಅವನಿಗೇಕೆ ಈ ವಿಚಾರಗಳು ಅನ್ವಯಿಸುವುದಿಲ್ಲ? ಒಬ್ಟಾಕೆ ಹೆಣ್ಣು ಒಬ್ಬ ಗಂಡಸನ್ನು ಸಾಮಾಜಿಕ ಜಾಲತಾಣದಲ್ಲಿ ತನ್ನ ಸ್ನೇಹವಲಯಕ್ಕೆ ಸೇರಿಸಿಕೊಂಡರೆ ಅದರಲ್ಲಿ ಅಸಹಜವಾದುದು ಏನಿದೆ? ಆಕೆ, ಆತನನ್ನು ತನ್ನ ಖಾಸಗಿ ವಲಯಕ್ಕೆ ಸೇರಿಸಿಕೊಳ್ಳಲು ಬಯಸಿದ್ದಾಳೆಂದೋ ಅಥವಾ ಆಕೆ ಶಯನಾಗಾರಕ್ಕೆ ಆಹ್ವಾನಿಸುತ್ತಿದ್ದಾಳೆಂದು ಯಾಕೆ ವಿಪರೀತ ಭಾವಿಸಬೇಕು?
Related Articles
Advertisement
ಮೇಲ್ನೋಟಕ್ಕೆ ಇದು ಚಿಕ್ಕ ಸಮಸ್ಯೆ ಎನಿಸಬಹುದು. ಆದರೆ, ಇದು ಇಂದು ನೂರಾರು ಹೆಣ್ಣುಮಕ್ಕಳು ಅನುಭವಿಸುತ್ತಿರುವ ಅಸಹಾಯಕತೆ. ಅದಕ್ಕೇ ಎಷ್ಟೋ ತಾಯಿಯಂದಿರು, ಗಂಡಂದಿರು ತಮ್ಮ ಮನೆಯ ಹೆಣ್ಣುಗಳನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿರಿಸುತ್ತಾರೆ. ಇಲ್ಲವಾದರೆ, “ಎಷ್ಟು ಬೇಕೋ ಅಷ್ಟರಲ್ಲೇ ಇರು, ನಿನ್ನತನದ ಪ್ರದರ್ಶನ ಬೇಡ’ ಎಂಬ ದಿಗ್ಬಂಧನ ವಿಧಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಇಲ್ಲದಿರುವುದರಿಂದ ಏನೂ ನಷ್ಟವಿಲ್ಲ ಎಂಬುದು ಸಾಮಾನ್ಯವಾದ ಅಭಿಪ್ರಾಯ. ಆದರೆ, ಇದು ಪರೋಕ್ಷವಾಗಿ ಸಮಾಜದಿಂದ ಹೆಣ್ಣನ್ನು ಬಹಿಷ್ಕರಿಸಿದಂತೆ !
ಡಿಜಿಟಲ್ ಇಂಡಿಯಾದ ಕನಸಿನಲ್ಲಿ ಹೆಣ್ಣುಮಕ್ಕಳಿಗೆ ಸ್ಥಾನವಿಲ್ಲ !
ರಶ್ಮಿ ಕುಂದಾಪುರ