Advertisement

ವನಿತಾ ಹಾಕಿ: ಭಾರತಕ್ಕೆ 1-2 ಸೋಲು

10:05 AM Jan 28, 2020 | Team Udayavani |

ಆಕ್ಲೆಂಡ್‌: ನ್ಯೂಜಿಲ್ಯಾಂಡ್‌ ವಿರುದ್ಧದ ಹಾಕಿ ಸರಣಿಯ 2ನೇ ಪಂದ್ಯದಲ್ಲಿ ಭಾರತ 1-2 ಗೋಲುಗಳ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ್ದ ರಾಣಿ ರಾಮ್‌ಪಾಲ್‌ ಪಡೆ 4-0 ಅಂತರದಿಂದ ಭರ್ಜರಿಯಾಗಿ ಗೆದ್ದಿತ್ತು. ಆದರೆ ಸೋಮವಾರದ ಪಂದ್ಯದಲ್ಲಿ ಇದೇ ಲಯವನ್ನು ಕಾಯ್ದು ಕೊಳ್ಳುವಲ್ಲಿ ವಿಫ‌ಲವಾಯಿತು. 4 ಪಂದ್ಯಗಳ ಸರಣಿ ಈಗ 1-1 ಸಮ ಬಲಕ್ಕೆ ಬಂದಿದೆ.

Advertisement

ನ್ಯೂಜಿಲ್ಯಾಂಡ್‌ ಆಕ್ರಮಣಕಾರಿ ಯಾಗಿಯೇ ಆಟ ಆರಂಭಿಸಿತು. ಮೊದಲ ಕ್ವಾರ್ಟರ್‌ನ 3ನೇ ನಿಮಿಷ ದಲ್ಲೇ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಯಶಸ್ವಿಯಾಗಿ ಬಳಸಿ ಕೊಂಡ ಮೆಗಾನ್‌ ಹುಲ್‌ ಕಿವೀಸ್‌ ಖಾತೆ ತೆರೆದರು. ಆದರೆ ಇದೇ ಕ್ಟಾರ್ಟರ್‌ನ ಕೊನೆಯ ಕ್ಷಣದಲ್ಲಿ ಭಾರತದ ಸಲೀಮಾ ಟೇಟೆ ತಿರುಗಿ ಬಿದ್ದರು. ಪೆನಾಲ್ಟಿ ಕಾರ್ನರ್‌ ಒಂದನ್ನು ಗೋಲಾಗಿ ಪರಿವರ್ತಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು.

ಮುಂದಿನೆರಡು ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ರಕ್ಷಣಾ ವಿಭಾಗದಲ್ಲಿ ಮಾಡಿದ ತಪ್ಪಿಗೆ ಬೆಲೆ ತೆರಬೇಕಾಯಿತು. ಹುಲ್‌ ಪೆನಾಲ್ಟಿ ಸ್ಟ್ರೋಕ್‌ ಮೂಲಕ 2ನೇ ಗೋಲು ಬಾರಿಸಿ ಕಿವೀಸ್‌ಗೆ ಮೇಲುಗೈ ಒದಗಿಸಿದರು.

ಕಳಪೆ ಪ್ರದರ್ಶನ: ಕೋಚ್‌
“ಈ ಸೋಲಿನಿಂದ ಬೇಸರವಾಗಿದೆ. ಇಂದು ನಮ್ಮವರ ಆಟ ಬಹಳ ಕಳಪೆಯಾಗಿತ್ತು. ನ್ಯೂಜಿಲ್ಯಾಂಡ್‌ಗಿಂತ ನಮಗೇ ಹೆಚ್ಚು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದ್ದವು. ಆದರೆ ನಮ್ಮವರು ಇದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಫಾರ್ವರ್ಡ್‌ ಆಟಗಾರರ ವೈಫ‌ಲ್ಯ ಎದ್ದು ಕಂಡಿತು’ ಎಂದು ಕೋಚ್‌ ಸೋರ್ಡ್‌ ಮರಿನ್‌ ಪ್ರತಿಕ್ರಿಯಿಸಿದ್ದಾರೆ. ಮುಂದಿನ ಪಂದ್ಯ ಬುಧವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next