ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಈ ಬಾರಿ ಚಿನ್ನ ಗಳಿಕೆಯಲ್ಲಿ ವನಿತೆಯರೇ ಟಾಪ್ ಐದು ಸ್ಥಾನ ಪಡೆದಿದ್ದಾರೆ. ಮಂಗಳೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮಹಿಮಾ ರಾವ್ ಅವರು 13 ಚಿನ್ನದ ಪದಕ ಪಡೆದು ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಟಿಯು ಕುಲಪತಿ ಪ್ರೊ|ಕರಿಸಿದ್ದಪ್ಪ, ಮೂಡಬಿದರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸನ್ಮತಿ ಪಾಟೀಲ 11 ಚಿನ್ನದ ಪದಕ, ಬೆಂಗಳೂರಿನ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನ ವಿದ್ಯಾ ಜಿ.ಎಸ್. ಏಳು ಚಿನ್ನದ ಪದಕ, ಮೈಸೂರಿನ ಜೆಎಸ್‌ಎಸ್ ಮಹಿಳಾ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಾಜಿಯ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ದಿವ್ಯಾ ಚಟ್ಟಿ ಆರು ಚಿನ್ನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಇಆ್ಯಂಡ್‌ಸಿ ವಿಭಾಗದಲ್ಲಿ ಸಿಂಧೂರಾ ಸರಸ್ವತಿ ಆರು ಚಿನ್ನದ ಪದಕ ಪಡೆದು ಮಿಂಚಿದ್ದಾರೆ.
ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು 24 ರ್‍ಯಾಂಕ್ ಪಡೆದು ಪ್ರಥಮ ಸ್ಥಾನ ಪಡೆದರೆ, ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು 24 ರ್‍ಯಾಂಕ್ ಪಡೆದು ದ್ವಿತೀಯ ಸ್ಥಾನ, ಬೆಂಗಳೂರಿನ ಆರ್.ಎನ್.ಎಸ್. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು 17 ರ್‍ಯಾಂಕ್, ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ 15 ರ್‍ಯಾಂಕ್, ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು 14 ರ್‍ಯಾಂಕ್ ಗಳಿಸಿದೆ ಎಂದು ವಿವರಿಸಿದರು.
ಹತ್ತೂಂಬತ್ತನೇ ಘಟಿಕೋತ್ಸವದಲ್ಲಿ 58,827 ಬಿಇ, 744 ಬಿಆರ್ಕ್, 4808 ಎಂಬಿಎ, 1325 ಎಂಸಿಎ, 1582 ಎಂಟೆಕ್, 39 ಎಂಆಕ್, 479 ಪಿಎಚ್‌ಡಿ ಹಾಗೂ 21 ಎಂಎಸ್ಸಿ (ಎಂಜಿನಿಯರಿಂಗ್) ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದರು. ಕುಲಸಚಿವ ಪ್ರೊ|ಎ.ಎಸ್. ದೇಶಪಾಂಡೆ, ಮೌಲ್ಯಮಾಪನ ಕುಲಸಚಿವ ಪ್ರೊ|ಸತೀಶ ಅಣ್ಣಿಗೇರಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಕೈಮಗ್ಗ ಉತ್ಪಾದನೆ ಸಮವಸ್ತ್ರಗಳು: ಕೈಮಗ್ಗ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ವರ್ಷದ ಘಟಿಕೋತ್ಸವದಿಂದ ಕೈಮಗ್ಗ ಉತ್ಪಾದನೆ ಬಟ್ಟೆಗಳನ್ನೇ ವಿದ್ಯಾರ್ಥಿ ಗಳು ಸಮವಸ್ತ್ರಗಳನ್ನಾಗಿ ಧರಿಸಲಿ ದ್ದಾರೆ. ಜತೆಗೆ ಗಣ್ಯರು ಧರಿಸುವ ಗೌನ್ ಕೂಡ ಕೈಮಗ್ಗ ಉತ್ಪಾದನೆದ್ದೇ ಆಗಿರಲಿದೆ. ವಿದ್ಯಾರ್ಥಿಗಳಿಗೆ ಬಿಳಿ ಬಣ್ಣದ ಪ್ಯಾಂಟ್, ಶರ್ಟ್ ಹಾಗೂ ವಿದ್ಯಾರ್ಥಿನಿಯರಿಗೆ ಬಿಳಿ ಸೀರೆ ಸಮವಸ್ತ್ರ ಆಗಿರಲಿದೆ. ಇದು ಈ ಘಟಿಕೋತ್ಸವದ ವಿಶೇಷ ಎಂದು ವಿಟಿಯು ಕುಲಪತಿ ಪ್ರೊ| ಕರಿಸಿದ್ದಪ್ಪ ತಿಳಿಸಿದರು.
ಶಿವನ್‌ಗೆ ಗೌರವ ಡಾಕ್ಟರ್ ಆಫ್ ಸೈನ್ಸ್: ಫೆ.8ರಂದು ಬೆಳಗ್ಗೆ 11ಗಂಟೆಗೆ ವಿಟಿಯು ಜ್ಞಾನ ಸಂಗಮ ಆವರಣದ ಡಾ|ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ 19ನೇ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಈ ವರ್ಷ ಬೆಂಗಳೂರು ಇಸ್ರೋ ಅಧ್ಯಕ್ಷ ಡಾ|ಕೆ.ಶಿವನ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುವುದು. ರಾಷ್ಟ್ರೀಯ ಮಾನ್ಯತಾ ಮಂಡಳಿ ಅಧ್ಯಕ್ಷ ಪ್ರೊ|ಕೆ.ಕೆ.ಅಗರವಾಲ್ ಅವರು ಘಟಿಕೋತ್ಸವ ಭಾಷಣ ಮಾಡುವರು. ಡಿಸಿಎಂ ಡಾ|ಅಶ್ವಥ ನಾರಾಯಣ ಅವರು ಪದವಿ ಪ್ರದಾನ ಮಾಡಲಿದ್ದಾರೆಂದು ವಿಟಿಯು ಕುಲಪತಿ ಪ್ರೊ|ಕರಿಸಿದ್ದಪ್ಪ ತಿಳಿಸಿದರು.