Advertisement

ಮದ್ಯಪಾನ ವಿರುದ್ಧ ಮಹಿಳೆಯರ ಹೋರಾಟ: ಸರಕಾರ ಎಚ್ಚೆತ್ತುಕೊಳ್ಳಲಿ

12:30 AM Jan 29, 2019 | |

ರಾಜ್ಯದಲ್ಲಿ ಹೊಸ ಮಾದರಿಯ ಹೋರಾಟವೊಂದು ನಡೆಯುತ್ತಿದೆ. ಅದು ಮದ್ಯ ನಿಷೇಧ ಆಗ್ರಹಿಸಿ ಮಹಿಳೆಯರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪಾದಯಾತ್ರೆ ಹೊರಟಿರುವುದು. ಬೆಳಗಾವಿ, ನಿಪ್ಪಾಣಿ, ರಾಣೆಬೆನ್ನೂರು ಈ ಮುಂತಾದ ಜಿಲ್ಲೆಗಳ ಸಾವಿರಾರು ಮಹಿಳೆಯರು ಒಂದಾಗಿ ಬೆಂಗಳೂರಿನತ್ತ ಹೊರಟಿದ್ದಾರೆ. ಈಗಾಗಲೇ ಚಿತ್ರದುರ್ಗ ದಾಟಿರುವ ಅವರು ಜ.30ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯೋಜನೆ ಹಾಕಿಕೊಂಡಿದ್ದಾರೆ. ಅವರು ಮಾಡುತ್ತಿರುವ ಹೋರಾಟ ಯಶಸ್ವಿಯಾಗುತ್ತದೋ ಇಲ್ಲವೋ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಮಹಿಳೆಯರು ಸಾಮಾಜಿಕ ಪಿಡುಗಿನ ವಿರುದ್ಧ ಈ ರೀತಿಯ ಒಂದು ಸಂಘಟಿತ ಹೋರಾಟ ನಡೆಸುತ್ತಿದ್ದಾರೆ ಎನ್ನುವುದೇ ಇಲ್ಲಿ ಗಮನಾರ್ಹ ಅಂಶ. ಈ ಹೋರಾಟಕ್ಕೆ ನಾಯಕರು ಇಲ್ಲ, ಎಲ್ಲರೂ ಸ್ವಯಂ ಪ್ರೇರಣೆಯಿಂದ ಹೋರಾಟಕ್ಕಿಳಿದಿದ್ದಾರೆ. ಹೆಚ್ಚಿನವರು ಗಂಡಂದಿರ, ತಂದೆಯಂದಿರ, ಸಹೋದರರ ಮದ್ಯ ವ್ಯಸನದಿಂದ ಇನ್ನಿಲ್ಲದ ಸಂಕಷ್ಟವನ್ನು ಅನುಭವಿಸಿದವರು. ಹೀಗೆ ಸಂತ್ರಸ್ತ ಮಹಿಳೆಯರೇ ಮುಂಚೂಣಿ ನಾಯಕರು ಇಲ್ಲದೆ ಒಂದು ಹೋರಾಟವನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಎರಡು ವರ್ಷದ ಹಿಂದೆ ಕೇರಳದ ಮುನ್ನಾರ್‌ನ ಚಹಾತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯರು ಈ ರೀತಿ ನೇತೃತ್ವವಿಲ್ಲದ ಹೋರಾಟ ನಡೆಸಿ ಗಮನ ಸೆಳೆದಿದ್ದರು. ಅವರ ಹೋರಾಟ ಯಶಸ್ವಿಯಾಗಿತ್ತು ಕೂಡಾ. 

Advertisement

ಮದ್ಯಪಾನ ನಿಷೇಧಿಸಿ ಎನ್ನುವ ಬೇಡಿಕೆ ಹೊಸದೇನಲ್ಲ. ಆಗಾಗ ಮಹಿಳೆಯರು ತಮ್ಮೂರಿನ ಮದ್ಯದಂಗಡಿಯನ್ನು ಎತ್ತಂಗಡಿ ಮಾಡಲು ಅಥವಾ ಹೊಸ ಮದ್ಯದಂಗಡಿ ತೆರೆಯಲು ಅನುಮತಿ ಕೊಡಬಾರದೆಂದು ಆಗ್ರಹಿಸಿ ಹೋರಾಟ ನಡೆಸಿರುವುದು ಸುದ್ದಿಯಾಗುತ್ತಿರುತ್ತದೆ. ಆದರೆ ಮದ್ಯ ನಿಷೇಧಿಸಬೇಕೆಂದು ಆಗ್ರಹಿಸಿ ರಾಜ್ಯವ್ಯಾಪಿಯಾದ ಹೋರಾಟವೊಂದು ನಡೆಯುತ್ತಿರುವುದು ಇದೇ ಮೊದಲು. ಈ ಹೋರಾಟದಲ್ಲಿ ಭಾಗವಹಿಸು ತ್ತಿರುವ ಮಹಿಳೆಯರು ದಿನಗಟ್ಟಲೆ ಮನೆ-ಮಕ್ಕಳು, ಸಂಸಾರವನ್ನು ಬಿಟ್ಟು ನಡೆಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ದಿನಗೂಲಿ ಕಾರ್ಮಿಕರು. ಅವರ ಹೋರಾಟದ ಕೆಚ್ಚನ್ನು ನೋಡಿದಾಗ ಮದ್ಯಪಾನದ ವ್ಯಸನದಿಂದ ಅವರೆಷ್ಟು ನೊಂದಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. 

ಮಹಿಳೆಯರ ಹೋರಾಟಕ್ಕೆ ಸರಕಾರ ಮಣಿಯಬಹುದು ಎಂದು ಊಹಿಸಲು ಕೂಡಾ ಸಾಧ್ಯವಿಲ್ಲ. ಹೋರಾಟ ಪ್ರಾರಂಭವಾದಾಗಲೇ ಮುಖ್ಯ ಮಂತ್ರಿಯವರು ಮದ್ಯ ನಿಷೇಧಿಸುವುದು ಎಂದರೆ ಹುಡುಗಾಟದ ಮಾತಲ್ಲ. ಸರಕಾರ ನಡೆಯುತ್ತಿರುವುದೇ ಮದ್ಯದ ಆದಾಯದಿಂದ ಎಂದು ಹೇಳಿ ಬಿಟ್ಟಿರುವುದರಿಂದ ಮಹಿಳೆಯರ ಬೇಡಿಕೆ ಈಡೇರುವುದು ಅಸಾಧ್ಯವೇ ಸರಿ. ಪ್ರಾಯೋಗಿಕವಾಗಿಯೂ ಮದ್ಯ ನಿಷೇಧ ಹೇಳಿದಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ನೂರಾರು ತೊಡಕುಗಳಿವೆ. ಕಾನೂನಿನ ಹತ್ತಾರು ಸುಳಿಗಳಿವೆ. ಎಲ್ಲದಕ್ಕೂ ಮಿಗಿಲಾಗಿ ನಾಡನ್ನಾಳುವವರಿಗೆ ಮದ್ಯ ನಿಷೇಧಿಸಬೇಕೆಂಬ ಇಚ್ಛಾಶಕ್ತಿಯೇ ಇಲ್ಲ. 

ಸಮಾಜದಲ್ಲಿ ಎರಡು ರೀತಿಯ ಮದ್ಯ ವ್ಯವಸನಿಗಳಿದ್ದಾರೆ. ಒಬ್ಬರು ಶೋಕಿಗಾಗಿ, ಮೋಜಿಗಾಗಿ ಕುಡಿಯುವ ಶ್ರೀಮಂತರು. ಇನ್ನೊಬ್ಬರು ಶರಾ ಬಿನ ಚಟ ಹತ್ತಿಕೊಂಡು ಅದರಿಂದ ಹೊರಬರಲಾರದೆ ದಿನದ ಸಂಪಾದನೆ ಯನ್ನೆಲ್ಲ ಮದ್ಯದಂಗಡಿಗೆ ಸುರಿದು ಹೋಗುವ ಬಡವರು. ಶ್ರೀಮಂತರ ಕುಡಿತದಿಂದ ಸಮಾಜಕ್ಕೇನೂ ಸಮಸ್ಯೆಯಿಲ್ಲ. ಹೆಚ್ಚೆಂದರೆ ಅವರ ಆರೋಗ್ಯದ ಮೇಲೆ ಪರಿಣಾಮವಾಗಬಹುದಷ್ಟೆ. ಆದರೆ ಬಡ ಕುಟುಂಬದ ಯಜಮಾನ ದಿನದ ಗಳಿಕೆಯನ್ನು ಮದ್ಯದಂಗಡಿಯಲ್ಲಿ ಖಾಲಿ ಮಾಡಿ ಬರಿಗೈಯಲ್ಲಿ ಬಂದರೆ ಕಷ್ಟಪಡುವುದು ಅವನ ಹೆಂಡತಿ ಮತ್ತು ಮಕ್ಕಳು. ಬಡತನ ನಿವಾರಣೆಗಾಗಿ ಸರಕಾರ ಏನೆಲ್ಲ ಯೋಜನೆಗಳನ್ನು ಜಾರಿಗೊಳಿಸಿದರೂ ಅದು ನಿರೀಕ್ಷಿತ ಪರಿಣಾಮ ಬೀರದಿರಲು ಬಡವರ ಮದ್ಯಪಾನ ಚಟವೂ ಮುಖ್ಯ ಕಾರಣ. 

ಸಮಾಜ ಅಧಃಪತನದತ್ತ ಸಾಗಲು ಮದ್ಯಪಾನ ಮುಖ್ಯ ಕಾರಣ ಎನ್ನುವುದು ಮಹಾತ್ಮ ಗಾ,ಧೀಜಿಯವರಿಗೆ ಎಂದೋ ಅರಿವಾಗಿತ್ತು. ಹೀಗಾಗಿಯೇ ಅವರು ಸ್ವತಂತ್ರ ಭಾರತ ಮದ್ಯಪಾನ ಮುಕ್ತವಾಗಿರಬೇಕು ಎಂದು ಬಯಸಿದ್ದರು. ಆದರೆ ಅವರ ಇಚ್ಛೆ ಎಂದೆಂದಿಗೂ ಕೈಗೂಡದಂಥ ವ್ಯವಸ್ಥೆಯನ್ನು ಸ್ವಾತಂತ್ರಾéನಂತರ ನಾವು ರೂಪಿಸಿದ್ದೇವೆ. ಪ್ರಸ್ತುತ ಗುಜರಾತ್‌, ಬಿಹಾರ, ನಾಗಾಲ್ಯಾಂಡ್‌,ಲಕ್ಷದ್ವೀಪದಲ್ಲಿ ಮಾತ್ರ ಮದ್ಯ ನಿಷೇಧವಿದೆ. ಆದರೆ ಈ ರಾಜ್ಯಗಳಲ್ಲಿ ಕಳ್ಳಬಟ್ಟಿ ಧಾರಾಳವಾಗಿ ಸಿಗುತ್ತದೆ. ಮದ್ಯ ನಿಷೇಧ ಮಾಡಿದ ರಾಜ್ಯಗಳಲ್ಲಿ ಹಾಲು, ಪಿಜ್ಜಾ ಪೂರೈಸುವಂತೆ ಮನೆಗೆ ಮದ್ಯ ಪೂರೈಸುವ ವ್ಯವಸ್ಥೆ ತಲೆ ಎತ್ತಿದೆ. ಇಂಥ ಕಳ್ಳ ವ್ಯವಹಾರಗಳನ್ನು ತಡೆಯಲು ಸರಕಾರ ಇನ್ನೊಂದಷ್ಟು ಖರ್ಚು ಮಾಡಬೇಕಾಗುತ್ತದೆ. ಹೀಗೆ ಮದ್ಯ ನಿಷೇಧಿಸಿದರೆ ಒಂದೆಡೆಯಿಂದ ನೇರ ತೆರಿಗೆ ನಷ್ಟವಾದರೆ ಇನ್ನೊಂದೆಡೆಯಿಂದ ಕಳ್ಳಬಟ್ಟಿ ನಿಯಂತ್ರಿಸಲು ಮಾಡುವ ಹೆಚ್ಚುವರಿ ಖರ್ಚಿನ ಹೊರೆ. ಈ ಕಾರಣದಿಂದ ಹೆಚ್ಚಿನ ರಾಜ್ಯಗಳು ಮದ್ಯ ನಿಷೇಧಿಸುವ ಗೋಜಿಗೆ ಹೋಗಿಲ್ಲ. ಹೆಚ್ಚಿನೆಡೆ ಬಲಿಷ್ಠ ಮದ್ಯದ ಲಾಬಿಗಳು ಸರಕಾರಗಳನ್ನು ನಿಯಂತ್ರಿಸುತ್ತಿವೆ.ಇಂಥ ವ್ಯವಸ್ಥೆಯಲ್ಲೂ ಮದ್ಯ ನಿಷೇಧಕ್ಕಾಗಿ ದಿಟ್ಟ ಹೋರಾಟಕ್ಕಿಳಿದಿರುವ ಮಹಿಳೆಯರ ದೃಢಸಂಕಲ್ಪವನ್ನು ಮೆಚ್ಚಿಕೊಳ್ಳಬೇಕು. ಈ ಹೋರಾಟದಿಂದ ಕನಿಷ್ಠ ಸರಕಾರಕ್ಕೆ ಗ್ರಾಮೀಣ ಭಾಗದ ಮಹಿಳೆಯರು ಮದ್ಯದಿಂದಾಗಿ ಅನುಭವಿಸುತ್ತಿರುವ ಸಂಕಷ್ಟಗಳ ಅರಿವಾದರೆ ಅಷ್ಟರಮಟ್ಟಿಗೆ ಹೋರಾಟ ಯಶಸ್ವಿಯಾದಂತೆಯೇ ಸರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next