ಶಹಾಪುರ: ನಗರದ ವಾರ್ಡ್ ಸಂಖ್ಯೆ 11 ಮೂಲ ಸೌಲಭ್ಯದಿಂದ ವಂಚಿತಗೊಂಡಿದ್ದು, ಯಾರೊಬ್ಬ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಸಮರ್ಪಕ ಸೌಲಭ್ಯ ಒದಗಿಸದ ಕಾರಣ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ಈ ವಾರ್ಡಿನ ನಾಗರಿಕರು ನಿರ್ಧಾರಿಸಿದ್ದಾರೆ.
ಹೀಗಾಗಿ ವಿಷಯ ತಿಳಿದ ಅಧಿಕಾರಿಗಳು ತಾಲೂಕು ಆಡಳಿತ ನೇತೃತ್ವದಲ್ಲಿ ವಾರ್ಡ್‌ಗೆ ಆಗಮಿಸಿ ವಾರ್ಡ್ ನಾಗರಿಕರ ಸಮಸ್ಯೆ ದೂರುಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ವಾರ್ಡ್ ಮೂಲ ಸೌಕರ್ಯದಿಂದ ಸಂಪೂರ್ಣ ವಂಚಿತಗೊಂಡಿದೆ. ಸಾರ್ವಜನಿಕ ಮಹಿಳಾ ಶೌಚಾಲಯವಿಲ್ಲ. ಕುಡಿಯಲು ನೀರಿಗಾಗಿ ನಿತ್ಯ ಪರಿತಪಿಸಬೇಕಾಗಿದೆ. ಬಡಾವಣೆಯೊಳಗೆ ಅಂಬ್ಯುಲೆನ್ಸ್ ಬರಲು ವ್ಯವಸ್ಥಿತ ರಸ್ತೆ ಇಲ್ಲ. ರಸ್ತೆ ಜಾಗ ಆಕ್ರಮಿತಗೊಂಡಿದೆ ಎಂದು ಹಲವಾರು ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಲ್ಲಿ ಮಾತ್ರ ನಾವು ಮತದಾನ ಮಾಡುತ್ತೇವೆ. ಇಲ್ಲವಾದಲ್ಲಿ ಬಡಾವಣೆ ನಿವಾಸಿಗಳೆಲ್ಲರೂ ಈ ಬಾರಿ ಮತದಾನ ಬಹಿಷ್ಕರಿಸಲಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ತಹಶೀಲ್ದಾರ್ ಸಂಗಮೇಶ ಮತ್ತು ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ ಮೂಲ ಸೌಲಭ್ಯ ಒದಗಿಸುವ ಭರವಸೆ ನೀಡಿದರು. ಆದರೆ ನೀರು ಒದಗಿಸುವಲ್ಲಿ ಪ್ರಸ್ತುತ ಅಂತರ್ಜಲ ಸಂಪೂರ್ಣ ಬತ್ತಿರುವ ಹಿನ್ನೆಲೆ ನೀರಿನ ತೊಂದರೆಯಾಗಿದೆ. ಕೊಳವೆ ಬಾವಿ ತೋಡಿಸಿದರು ನೀರು ಬೀಳುತ್ತಿಲ್ಲ. ಮಳೆ ಬರುವವರೆಗೂ ಈ ಸಮಸ್ಯೆ ಇದ್ದದ್ದೆ ಎಂದು ಸಮಜಾಯಿಸಿ ನೀಡಿದರು.
ಆದರೆ ಇದಕ್ಕೆ ಒಪ್ಪದ ಮಹಿಳೆಯರು ಶೀಘ್ರವಾಗಿ ನೀರಿನ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಿ. ನಂತರದ ದಿನಗಳಲ್ಲಿ ಶಾಶ್ವತ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದರು. ಅಲ್ಲದೆ ಚುನಾವಣೆಯಲ್ಲಿ ಆಶ್ವಾಸನೆ ನೀಡುವ ಜನಪ್ರತಿನಿಗಳು ಗೆದ್ದು ಬಂದ ಮೇಲೆ ಇತ್ತ ತಲೆ ಹಾಕುವದಿಲ್ಲ. ಕಾರಣ ನಾವೆಲ್ಲ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಬಡಾವಣೆಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.