ದೇವನಹಳ್ಳಿ: ಸಾಂಸಾರಿಕ ಜೀವನದ ಜೊತೆ ಸರ್ಕಾರಿ ಉದ್ಯೋಗದ ಹೊಣೆಗಾರಿಕೆ ಎರಡನ್ನೂ ನಿಭಾಯಿಸಿಕೊಂಡು ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಏರಿಸಿಕೊಂಡು ಕಲಾ, ಸಾಹಿತ್ಯ ಕ್ಷೇತ್ರಗಳೊಂದಿಗೆ ಬೆರತು ತಾಲೂಕಿನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಮೂಲತಃ ಮಡಿಕೇರಿ ಭಾಗಮಂಡಲದವರಾಗಿದ್ದು, ಕಚೇರಿ ಕೆಲಸದ ಜೊತೆ ಕಲೆ, ಸಾಹಿತ್ಯ, ನೃತ್ಯ ಮಾಡಿಕೊಂಡು ಕಳೆದ ಒಂದೂವರೆ ದಶಕದಿಂದ ನೃತ್ಯ ಕಲೆಯಿಂದ ವಂಚಿತರಾಗಿದ್ದ ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದು, ಸದ್ದಿಲ್ಲದೆ ಕೊಡಗಿನ ಕುವರಿ ಕಲಾಸೇವೆಯಲ್ಲಿದ್ದಾರೆ.
ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ಮಾಡಿ ಕೊಂಡು ನಾಟ್ಯಮಿಲನ ನೃತ್ಯ ಶಾಲೆ ಮೂಲಕ ಯುವಜನರಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಸರ್ಕಾರದ ಯಾವುದೇ ಸಹಾಯಧನ ಪಡೆಯದೆ ತಮ್ಮ ತಿಂಗಳ ಸಂಬಳದ ಶೇ.30ರಷ್ಟು ಟ್ರಸ್ಟ್‌ನ ಖಾತೆಗೆ ಸೇರಿಸಿ ಸ್ವಾವಲಂಬಿ ತರಬೇತಿ ಕೇಂದ್ರವನ್ನಾಗಿಸಿದ್ದಾರೆ.
ಮೀನುಗಾರಿಕೆ ವಿಷಯದಲ್ಲಿ ಪದವಿ ಮತ್ತು ಮಾರುಕಟ್ಟೆ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಮಂಗಳೂರು ವಿಶ್ವ ವಿದ್ಯಾಲಯಕ್ಕೆ ಪ್ರಥಮ ರ್‍ಯಾಂಕ್‌ನೊಂದಿಗೆ ಮೈಗಂಟಿಕೊಂಡು ಬಂದಿರುವ ಮಿಲನಾ, ಯಕ್ಷಗಾನ, ಭರತನಾಟ್ಯ, ನೃತ್ಯ ಪರಿಣಿತಿ ಪಡೆದು ಇತರರಿಗೆ ಆ ಗೀಳು ಅಂಟಿಸುವ ಹಂಬಲದವರಾಗಿದ್ದಾರೆ. 2017ರಲ್ಲಿ ದೆಹಲಿ ಕನ್ನಡ ಸಂಘದಲ್ಲಿ ಗೌಡ ಕೊಡವ ಸಂಭ್ರಮದಲ್ಲಿ ಭಾಗವಹಿಸಿದ್ದರು. ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಈ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳ ವೇಷಭೂಷಣ, ಕಾರ್ಯಕ್ರಮ ನೀಡುವಪ್ರಯಾಣ ವೆಚ್ಚವನ್ನು ಟ್ರಸ್ಟ್ ಭರಿಸುತ್ತದೆ. ಪ್ರತಿ ದಿನವೂ ಒತ್ತಡದ ಬದುಕಿನಲ್ಲಿಅಧಿಕಾರಿಯಾಗಿ ಇರುತ್ತೇವೆ. ಕಲೆ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾದಾಗ ಎಷ್ಟೇ ಒತ್ತಡವಿದ್ದರೂ ಮರೆತು ಮನೋಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ.
– ಮಿಲನಾ, ದೇವನಹಳ್ಳಿ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕಿ
– ಎಸ್.ಮಹೇಶ್