Advertisement

ಮಹಿಳಾ ದಿನಾಚರಣೆ ವಿಶೇಷ: ನೇಕಾರಿಕೆ ವೃತ್ತಿಯಲ್ಲಿ ಮಹಿಳೆಯರ ಪಾತ್ರ

02:30 PM Mar 08, 2022 | Team Udayavani |

ರಬಕವಿ-ಬನಹಟ್ಟಿ : ಇಂದು ಮಹಿಳೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ. ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ರಾಜಕೀಯ, ಕ್ರೀಡೆ, ವ್ಯಾಪಾರ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ. ಅದೇ ರೀತಿ ಸಾಂಪ್ರದಾಯಿಕವಾದ ನೇಕಾರಿಕೆ ವೃತ್ತಿಯ ಎಲ್ಲ ವಿಭಾಗಗಳಲ್ಲಿಯೂ ಆಕೆ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಕುಟುಂಬ ನಿರ್ವಹಣೆಯ ಜವಾಬ್ದಾರಿಯ ಜೊತೆಗೆ ಆರ್ಥಿಕ ಬಲವರ್ಧನೆಗೆ ನೇಕಾರಿಕೆಯಲ್ಲಿ ತೊಡಗಿಸಿಕೊಂಡಿರುವ ಅವಳ ಪಾತ್ರ ಅಗಣ್ಯವೇನಲ್ಲ.

Advertisement

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ, ಇಲಕಲ್ಲ, ಅಮೀನಗಡ, ಗುಳೇದಗುಡ್ಡ, ಕೆರೂರ, ತೇರದಾಳ, ಮಹಾಲಿಂಗಪುರ, ಬದಾಮಿ, ಗುಳೇದಗುಡ್ಡ, ಶಿರೂರ, ಹುನಗುಂದ, ಸುಳೇಬಾವಿ, ಗೂಡುರ, ಶಿರೋಳ, ಸಿದ್ದಾಪೂರ, ಹುಲ್ಯಾಳ, ಹುನ್ನೂರ ಸೇರಿದಂತೆ ಜಿಲ್ಲೆಯ ಇನ್ನೂ ಅನೇಕ ಕಡೆ ನೇಕಾರರು ಹೆಚ್ಚಾಗಿದ್ದು ನೇಕಾರಿಕೆಯನ್ನೇ ತಮ್ಮ ಕಸಬನ್ನಾಗಿ ಮಾಡಿಕೊಂಡವರಿದ್ದಾರೆ ಅದರಲ್ಲೂ ವಿದ್ಯುತ್ ಚಾಲಿತ ಮಗ್ಗಗಳು ಹಾಗೂ ಕೈಮಗ್ಗಗಳಲ್ಲಿ ಅಂದಾಜು 80 ರಿಂದ 90 ಸಾವಿರದಷ್ಟು ಮಹಿಳಾ ಕಾರ್ಮಿಕರು ದುಡಿಯುತ್ತಿದ್ದಾರೆ.

ಸೀರೆ ನೇಯ್ಗೆಯ ಪ್ರತಿಯೊಂದು ಹಂತದಲ್ಲೂ ಮಹಿಳೆಯ ಪಾತ್ರ ಪ್ರಮುಖವಾಗಿದೆ. ನೂಲು ತೋಡುವ, ಹಾಸು ಹೊಯ್ಯುವ, ಕಂಡಕಿ ಸುತ್ತುವ, ಕೆಚ್ಚುವ, ಟಾಣು ಹಾಕುವ, ಹಣಿಗೆ ಕೆಚ್ಚುವ, ಮಗ್ಗಕ್ಕೇರಿಸುವ, ನೇಯುವ, ಸೆರಗುಗಳಿಗೆ ಗೊಂಡೆ ಕಟ್ಟುವ, ಗಿರಾಕಿ ಇಚ್ಛಿಸಿದರೆ ಕಸೂತಿ ಹಾಕುವ, ಸಿದ್ಧವಾದ ಸೀರೆಗಳನ್ನು ಗಳಿಗೆ ಹಾಕಿ ವ್ಯಾಪಾರಸ್ಥರಿಗೆ ಮುಟ್ಟಿಸುವ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ಮಹಿಳೆಯ ಪಾತ್ರವಿದೆ.

ಒಂದು ಕಡೆ ಮಹಿಳೆ ತನ್ನ ಮನೆಗೆಲಸದ ಜೊತೆಗೆ ತನ್ನ ಕುಟುಂಬಕ್ಕೆ ಸಹಾಯವಾಗಲಿ ಎಂದು ನೇಕಾರಿಕೆಯನ್ನು ಮಾಡುತ್ತಾ ಕುಟುಂಬಕ್ಕೆ ನೆರವಾಗುತ್ತಿದ್ದರೆ. ಇನ್ನೂ ಕೆಲವರು ಆರ್ಥಿಕ ಪರಿಸ್ಥಿತಿಗೆ ಕಟ್ಟು ಬಿದ್ದು ಸಕ್ರಿಯವಾಗಿ ಸಹಾಯಕರಾಗಿ ನೇಕಾರಿಕೆ ವೃತ್ತಿಯನ್ನು ಮಾಡುತ್ತಾ ತನ್ನ ಕುಟುಂಬವನ್ನು ಸಲುಹುವ ಕೆಲಸವನ್ನು ಮಹಿಳೆ ಮಾಡುತ್ತಾ ನಡೆದಿದ್ದಾಳೆ. ಒಟ್ಟಾರೆ ಮನೆಯೊಳಗಿನ ಸಂಸಾರಿಕ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೊರಗಿನ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಮಹಿಳೆ ನೇಕಾರಿಕೆಯನ್ನು ಬಳಸಿಕೊಂಡಿದ್ದಾಳೆ.

Advertisement

ಇದನ್ನೂ ಓದಿ: ಮಹಿಳಾ ದಿನಾಚರಣೆ ವಿಶೇಷ: ಮಕ್ಕಳ ಕಲಾ ಪ್ರೇರಕಿ ಕಲ್ಪನಾ

ಇಂದಿನ ದಿನಮಾನಗಳಲ್ಲಿ ಕೌಟುಂಬಿಕ ಖರ್ಚುಗಳನ್ನು ನಿರ್ವಹಿಸಲು ಕೇವಲ ಪುರುಷರಿಗೆ ಅನುಕೂಲವಾಗಲಿ ಎಂದು ಮಹಿಳೆಯರು ಕೂಡಾ ತಮ್ಮ ಗಂಡಂದಿರರು ಬೇರೆ ಕೆಲಸಗಳಿಗೆ ಹೋದಾಗ ಸೀರೆ ನೇಯ್ಗೆಯಲ್ಲಿ, ಕಂಡಿಕೆ ಸುತ್ತುವುದು, ಗಳಿಗೆ ಹಾಕುವುದು ಸೇರಿದಂತೆ ನೇಕಾರಿಕೆಯ ಎಲ್ಲ ವೃತ್ತಿಗಳಲ್ಲಿಯೂ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ನೋಡಿಕೊಳ್ಳುವುದರ ಜೊತೆಗೆ ನಮ್ಮ ಗಂಡಂದಿರರಿಗೆ ಆರ್ಥಿಕವಾಗಿ ಅನುಕೂಲವಾಗಲಿ ಎಂದು ನೇಕಾರಿಕೆ ವೃತ್ತಿಯಲ್ಲಿನ ಕೆಲವು ಕೆಲಸಗಳನ್ನು ನಾವು ಮಾಡುತ್ತಿದ್ದೇವೆ ಎನ್ನುತ್ತಾರೆ ನೇಕಾರ ಮಹಿಳೆಯರು.

ಕೆಲವೊಂದು ನೇಕಾರಿಕೆಯ ಕೆಲಸಗಳನ್ನು ಮಾಡಲು ಮಹಿಳೆಯೇ ಬೇಕು ಅಂತಹ ಕೆಲಸಗಳನ್ನು ಪುರುಷ ಕಾರ್ಮಿಕರು ಮಾಡುವುದಿಲ್ಲ. ಕಾರಣ ಮಹಿಳೆ ಆ ಕೆಲಸಗಳಿಗೆ ಅವಶ್ಯವಾಗಿದ್ದಾಳೆ. ಅಲ್ಲದೇ ಮಹಿಳಾ ಕಾರ್ಮಿಕರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಜಿಕವಾಗಿ ಬಹಳಷ್ಟು ಹಿಂದುಳಿದಿರುವುದು ಇದಕ್ಕೆ ಕಾರಣವಿರಬಹುದು. ಆದರೆ ಸದ್ಯ ಎಲ್ಲ ಮಹಿಳಾ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುತ್ತಿದ್ದು ಇದರಿಂದ ಆ ಮಕ್ಕಳು ನೇಕಾರಿಕೆ ವೃತ್ತಿಗೆ ತೊಡಗಲು ಮುಂದೆ ಬರುತ್ತಿಲ್ಲ.

ಪುರುಷ ಪ್ರಧಾನವಾಗಿದ್ದ ನೇಕಾರಿಕೆ ವೃತ್ತಿಯಲ್ಲಿಯೂ ಕೂಡಾ ಮಹಿಳೆ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾಳೆ. ಮಹಿಳೆಯರು ವೃತ್ತಿಯಲ್ಲಿ ದಕ್ಷ ಹಾಗೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಸರಕಾರ ಮಹಿಳಾ ನೇಕಾರರ ಆರ್ಥಿಕ ಬಲವರ್ಧನೆಗೆ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಬೇಕು.

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next