Advertisement

Women’s Day Special: ಮೊಸರು ಮಾರಿ, ಜೀವನ ನಡೆಸುವ ರೈತ ಮಹಿಳೆಯರು

01:16 PM Mar 07, 2024 | Team Udayavani |

ದೋಟಿಹಾಳ: ಸೂರ್ಯ ಹುಟ್ಟುವ ಮುನ್ನವೇ ಜಾಲಿಹಾಳ, ರ‍್ಯಾವಣಿಕಿ ಗ್ರಾಮದ ಮಹಿಳೆಯರು ತಮ್ಮ ಮನೆ ಕೆಲಸ ಮಾಡಿ, ಜಾನುವಾರಗಳಿಗೆ ಮೇವು ಹಾಕಿ, ಕರುಗಳಿಗೆ ಹಾಲು ಕುಡಿಸಿ, ತಾವು ಹಾಲನ್ನು ಕರೆದು ಮನೆಯಲ್ಲಿಟ್ಟು, ಒಂದು ಬುಟ್ಟಿಯಲ್ಲಿ ಗಡುಗೆಯಲ್ಲಿ ಮೊಸರು ಹಾಕಿಕೊಂಡು ಅದನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ದೋಟಿಹಾಳ ಗ್ರಾಮದ ಕಡೆ ಹೋಗುವ ದೃಶ್ಯ ಪ್ರತಿ ದಿನ ಜಾಲಿಹಾಳ ದೋಟಿಹಾಳ ರಸ್ತೆಯಲ್ಲಿ ಕಂಡುಬರುತ್ತದೆ.

Advertisement

ಸಮೀಪದ ಜಾಲಿಹಾಳ, ರ‍್ಯಾವಣಿಕಿ ಗ್ರಾಮದಲ್ಲಿ ಬಹುತೇಕ ಬಡ ರೈತ ಮಹಿಳೆಯರ ದುಡಿಮೆ ಹೈನುಗಾರಿಕೆ. ಇವರು ತಮ್ಮ ಸಂಸಾರದ ಬದುಕಿನ ಬಂಡಿ ಸಾಗಿಸಲು ಈ ಬಡ ರೈತ ಮಹಿಳೆಯರು ದೋಟಿಹಾಳ ಗ್ರಾಮದಲ್ಲಿ ಮೊಸರು ಮಾರಿ ಅದರಿಂದ ಬಂದ ಅಲ್ಪ ಸ್ವಲ್ಪ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಎರಡು ಗ್ರಾಮದಲ್ಲಿ ಬಡ ಮಹಿಳೆಯರು ಈ ಮೊಸರು ವ್ಯಾಪಾರವನ್ನೇ ನೆಚ್ಚಿಕೊಂಡಿದ್ದು, ಈ ಗ್ರಾಮಗಳಲ್ಲಿ ಅನೇಕ ಕುಟುಂಬಗಳಿಗೆ ಇದೇ ಆಶ್ರಯವಾಗಿದೆ.

ಜಾಲಿಹಾಳ, ರ‍್ಯಾವಣಿಕಿ ಗ್ರಾಮಗಳ ಮಹಿಳೆಯರು ಬೆಳಗ್ಗೆ ತಲೆ ಮೇಲೊಂದು ಬುಟ್ಟಿ, ಬುಟ್ಟಿಯೊಳಗಿನ ಗಡಿಗೆ, ಗಡುಗೆ ತುಂಬ ಮೊಸರು ಇಟ್ಟುಕೊಂಡು ನಿತ್ಯ 3 ಕಿ.ಮೀ. ಕಾಲ್ನಡಿಗೆಯಲ್ಲಿಯೇ ದೋಟಿಹಾಳ ಗ್ರಾಮಕ್ಕೆ ಬಂದು ಮೊಸರು ಮಾರುತ್ತಾರೆ. ಇವರು 150-200ರೂ.ವರೆಗೂ ಸಂಪಾದಿಸುತ್ತಾರೆ.

ಜಾಲಿಹಾಳ, ರ‍್ಯಾವಣಿಕಿ ಗ್ರಾಮಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳ ಮಹಿಳೆಯರು ಮೊಸರು ಮಾರಾಟವನ್ನೇ ಅವಲಂಬಿಸಿದ್ದಾರೆ. ಮನೆಗೊಂದು-ಎರಡು ಎಮ್ಮೆ ಸಾಕಣೆ ಮಾಡಿದ್ದು, ಕೆಲವರು ಎಮ್ಮೆ ಖರೀದಿಗೆ ಪಶು ಇಲಾಖೆಯಿಂದ ಸಹಾಯ ಧನ, ಬ್ಯಾಂಕ್‌ನಲ್ಲಿ ಸಾಲ ಪಡೆದುಕೊಂಡು ಹೈನುಗಾರಿಕೆ ಮಾಡುತ್ತಿದ್ದಾರೆ.

Advertisement

ಹಗಲಿನಲ್ಲಿ ಮನೆ ಕೆಲಸ ಮುಗಿದ ಮೇಲೆ ಎಮ್ಮೆ ಮೇಯಿಸಿ ಕಾಳಜಿ ಮಾಡುವ ಮಹಿಳೆಯರು ಬೆಳಗಿನ ಜಾವವೇ ಹಾಲು ಕರೆದು ಹೆಪ್ಪು ಹಾಕುತ್ತಾರೆ. ಇದರಿಂದ ಮೊಸರು ತಯಾರಿಸುತ್ತಾರೆ. ಮಣ್ಣಿನ ಗಡಿಗೆಯಲ್ಲಿ ಮೊಸರು ತುಂಬಿಕೊಂಡು ದೋಟಿಹಾಳ, ಕೇಸೂರು ಗ್ರಾಮಗಳಿಗೆ ತೆರಳಿ ಮೊಸರು ಮಾರಾಟ ಮಾಡುತ್ತಾರೆ.

ರ‍್ಯಾವಣಿಕಿ, ಜಾಲಿಹಾಳ ಗ್ರಾಮದಿಂದ 2 ಕಿ.ಮೀ. ದೂರದ ದೋಟಿಹಾಳ ಗ್ರಾಮಕ್ಕೆ ನಿತ್ಯ ಕಾಲ್ನಡಿಗೆಯಲ್ಲಿಯೇ ಸಾಗುವ ಈ ಮಹಿಳೆಯರು ಮನೆ, ಮನೆಗೂ ಸಾಗಿ ಮೊಸರು ತಂದಿರುವುದಾಗಿ ಹೇಳುತ್ತಾರೆ. 5-10 ರೂಪಾಯಿಯಂತೆ ಅಳೆದು ಮೊಸರು ಮಾರಾಟ ಮಾಡುತ್ತಾರೆ.

ಕೆಲ ಕುಟುಂಬಗಳು ಖಾಯಂ ಆಗಿ ಮೊಸರು ಖರೀದಿ ಮಾಡುತ್ತಿದ್ದಾರೆ. ಹೀಗೆ ಊರು-ಊರು ಸಂಚರಿಸಿ ಮೊಸರು ಮಾರಾಟ ಮಾಡುವ ಮಹಿಳೆಯರು ದಿನಕ್ಕೆ 150-200 ರೂ.ವರೆಗೂ ಆದಾಯ ಗಳಿಸುತ್ತಾರೆ. ಮಾಸಿಕ 5-2 ಸಾವಿರ ರೂ.ವರೆಗೂ ಹಣ ಸಂಪಾದಿಸುತ್ತಾರೆ.

ತಮ್ಮ ನಿತ್ಯದ ಬದುಕಿನ ಜತೆ ಎಮ್ಮೆ ಖರೀದಿಗೆ ಮಾಡಿದ ಸಾಲ ಪಾವತಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸಂದಾಯ ಮಾಡುತ್ತಾರೆ. ಈ ವೃತ್ತಿಯಿಂದ ಎರಡು ಗ್ರಾಮದ ಅನೇಕ ಮಹಿಳೆಯರೇ ತಮ್ಮ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ.

ಹಾಲು ಮಾರಿದರೆ ಲಾಭ ಕಡಿಮೆ. ಹಾಲಿಗೆ ಹೆಪ್ಪು ಹಾಕಿ, ಮೊಸರು ಮಾಡಿದರೆ ಇದರಿಂದ ಮಜ್ಜಿಗೆ ಮತ್ತು ಬೆನ್ನಿ ಸಿಗುತ್ತದೆ. ಹಾಲು ಮಾರಿದರೆ ಮಕ್ಕಳಿಗೆ ಮೊಸರು, ಮಜ್ಜಿಗೆ, ಬೆಣ್ಣೆ ಸಿಗುವುದಿಲ್ಲ. ಹೀಗಾಗಿ ಮೊಸರು ಮಾರುವವರೇ ಹೆಚ್ಚಾಗಿ ಇದ್ದಾರೆ. ಕಾರಣ ಮೊಸರಿನಿಂದ ಬೆಣ್ಣೆ-ಮಜ್ಜಿಗೆ ತೆಗೆಯಬಹುದು.- ಗ್ಯಾನಮ್ಮ ಕಳಕಪ್ಪಗೌಡ ಗೌಡರ, ಮಾಟೂರ ಗ್ರಾಮದ ರೈತ ಮಹಿಳೆ

ನಮ್ಮ ಅತ್ತೆಯರ ಕಾಲದಿಂದ ಮೊಸರು ವ್ಯಾಪಾರ ಮಾಡುತ್ತಿದ್ದೇವೆ. ಇದೇ ನಮ್ಮ ಬದುಕಿನ ದುಡಿಮೆಯಾಗಿದೆ. ಸದ್ಯ ಪ್ಯಾಕೆಟ್ ಮೊಸರು ಬಂದಾಗಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗಿದೆ. ಆದರೂ ಭಯವಿಲ್ಲ. ಶುದ್ಧ ಮೊಸರು ಬೇಕೆನ್ನುವವರು ಅನೇಕರಿದ್ದಾರೆ. ಮನೆಗೆ ಹೋಗಿ ಮೊಸರು ಹಾಕುವುದರಿಂದ ಅವರು ಖುಷಿಯಾಗುತ್ತಾರೆ. ಇದರಿಂದ ನಮಗೂ ಹಣ ಸಂಪಾದಿಸಿದಂತಾಗುತ್ತದೆ. – ಜಾಲಿಹಾಳ ಗ್ರಾಮದ ದೇವಮ್ಮ, ಪಾರ್ವತಿ, ಸಂಗವ್ವ, ಗಂಗಮ್ಮ, ಶರಣಮ್ಮ, ಮಾದೇವಿ (ಮೊಸರು ಮಾರುವ ಮಹಿಳೆಯರು)

ಪ್ಯಾಕೆಟ್ ಮೊಸರು ರುಚಿ ಕಡಿಮೆ, ಅದರಲ್ಲಿ ಕೆಮಿಕಲ್ ಮಿಶ್ರಣ ಇರುತ್ತದೆ. ನಮಗೆ ಶುದ್ಧ ಮೊಸರು ಬೇಕಾಗಿದ್ದು, ಹಳ್ಳಿ ರೈತ ಮಹಿಳೆಯರು ಮಾರುವ ಮೊಸರನ್ನೇ ಹೆಚ್ಚಾಗಿ ಊಟಕ್ಕೆ ಬಳಸುತ್ತೇವೆ. – ಶಂಕ್ರಮ್ಮ ಅರಳಿಕಟ್ಟಿ, ದೋಟಿಹಾಳ ಗ್ರಾಮದ ಮಹಿಳೆ.

ವರದಿ: ಮಲ್ಲಿಕಾರ್ಜುನ ಮೆದಿಕೇರಿ. ದೋಟಿಹಾಳ.

Advertisement

Udayavani is now on Telegram. Click here to join our channel and stay updated with the latest news.

Next