Advertisement

ದೊಡ್ಡಬಳ್ಳಾಪುರ: ರಾಗಿ ಕಲ್ಲು ಬೀಸುವಾಗ, ನಾಟಿ ಮಾಡುವಾಗ, ಭತ್ತ ಕುಟ್ಟುವಾಗ ನೋವನ್ನು ಮರೆಸುವ ಜಾನಪದ ಹಾಡುಗಳು ಇಂದು ಆಧುನಿಕ ಯುಗದಲ್ಲಿ ಮರೆಯಾಗುತ್ತಿವೆ. ಇಂತಹ ಪರಂಪರೆಯನ್ನು ಈಗಲೂ ಮುಂದುವರೆಸಿಕೊಂಡುಬರುತ್ತಿರುವವರಲ್ಲಿ ತಾಲೂಕಿನ ಮಧುರೆ ಹೋಬಳಿ ಕನಸವಾಡಿಯ ಮುಪ್ಪಡಿಘಟ್ಟದ ಪಿಳ್ಳಮ್ಮ ಒಬ್ಬರಾಗಿದ್ದಾರೆ.

Advertisement

ಪಿಳ್ಳಮ್ಮ ಅವರಿಗೆ ವಿದ್ಯಾಭ್ಯಾಸ ಇಲ್ಲದಿದ್ದರೂ ಜನಪದ, ಭಾವಗೀತೆ, ಭಕ್ತಿಗೀತೆ, ಸೋಭಾನೆ ಪದ, ಭಜನೆಮೊದಲಾಗಿ ನೂರಾರು ಪದಗಳನ್ನು ನಿರರ್ಗಳವಾಗಿ ಹಾಡಬಲ್ಲರು. ಜಾನಪದ ಹಾಡುಗಳನ್ನು ತನ್ನ ಅಜ್ಜಿ ಬೈಲಮ್ಮರವರಿಂದ ಕಲಿತಿದ್ದು, ಬಾಲ್ಯದಿಂದಲೇ ಅಭ್ಯಾಸ ಮಾಡಿಕೊಂಡಿ ದ್ದಾರೆ. ತಾಯಿ ಮಲ್ಲಮ್ಮ ಕೂಡ ಜನಪದ ಹಾಡುಗಾರ್ತಿಯಾಗಿದ್ದರು. ಇವರ ಕಲೆಯನ್ನು ಗುರುತಿಸಿದ್ದ ಹಳ್ಳಿ ಜನ ಹೆಣ್ಣು ಮಕ್ಕಳು ಋತುಮತಿಯಾದಾಗ, ಸೀಮಂತವಾದಾಗ ಪಿಳ್ಳಮ್ಮನವರಿಂದ ಸೋಬಾನೆ ಪದಗಳನ್ನು ಹಾಡಿಸುತ್ತಿದ್ದರು.

ಇದರೊಂದಿಗೆ ದೇವತಾ ಕಾರ್ಯಗಳಲ್ಲಿ ದೇವರ ಭಜನೆ, ತತ್ವಪದ, ಭಕ್ತಿಗೀತೆ ಹಾಡುವ ಮೂಲಕ ಹೆಸರು ಗಳಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. ಬೆಂಗಳೂರು ಆಕಾಶವಾಣಿ ಪಿಳ್ಳಮ್ಮರವರಿಂದ ಹಾಡಿಸಿ 6 ಕಂತುಗಳ ಮೂಲಕ ಕಾರ್ಯಕ್ರಮ ಪ್ರಸಾರ ಮಾಡಿದ್ದಾರೆ. ಇಂದಿಗೂ ಅವರನ್ನು ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದರೆ ಹೋಗಿ ಹಾಡಿ ಬರುತ್ತಾರೆ. ಇವರಿಂದ ಅನೇಕರು ಜಾನಪದ ಹಾಡುಗಳನ್ನು ಕಲಿತಿದ್ದಾರೆ. ನಶಿಸುತ್ತಿರುವ ಜಾನಪದ ಕಲೆಯನ್ನು ಇಂದಿನ ಪೀಳಿಗೆ ಆಸಕ್ತಿ ವಹಿಸಿ ಉಳಿಸಿ ಬೆಳೆಸಬೇಕಿದೆ ಎನ್ನುವ ಆಶಯ ಪಿಳ್ಳಮ್ಮ ಅವರದ್ದು.

ಶ್ರೀಕಾಂತ್‌ ಡಿ.

*

Advertisement

ಕಹಿ ಮರೆಸಿ ಉತ್ಸಾಹ ತುಂಬಿದ ಲಕ್ಷ್ಮಮ್ಮ  :

 

ವಿಜಯಪುರ: ಪಟ್ಟಣದ ಯಲ್ಲಮ್ಮ ದೇವಾಲಯ ರಸ್ತೆಯ ನಿವಾಸಿ ಲಕ್ಷ್ಮಮ್ಮ. ವಯಸ್ಸು 68 ಆದರೂ 28 ವಯಸ್ಸಿಗೆ ಕಡಿಮೆ ಇಲ್ಲದಂತ ಚುರುಕುತನ. ಅದೆಷ್ಟೋ ಜನರ ಜೀವನದ ಓರೆಕೋರೆಗಳನ್ನು ತಮ್ಮ ಹಾಡು-ಕತೆಯ ಮೂಲಕವೇ ಅರಿವು ಮೂಡಿಸುವುದರ ಜೊತೆಗೆ ಸರಿದಾರಿಗೆ ತಂದವರು.

ಕಲಾವಿದರಾಗಿ ಗುರುತಿಸಿಕೊಂಡವರು. ಬಾಲ್ಯದಿಂದಲೇ ಭಜನೆ, ಭಕ್ತಿ ಗೀತೆ, ತತ್ವ ಪದಗಳು, ಕೀರ್ತನೆಗಳನ್ನು ಕರಗತ ಮಾಡಿಕೊಂಡವರು. ಆಧ್ಯಾತ್ಮಿಕ ಚಿಂತಕರಾಗಿ ಸಾತ್ವಿಕ ಜೀವನ ನಡೆಸುತ್ತಿರುವ ಇವರು, ತಮ್ಮ ಕಂಠದಿಂದ ಅದೆಷ್ಟು ಕೀರ್ತನೆಗಳು, ಭಕ್ತಿಗೀತೆ ಜನಪದ ಗೀತೆ, ಸೋಬಾನೆ ಪದ ಹೇಳಿದ್ದಾರೋ ಲೆಕ್ಕವೇ ಇಲ್ಲ.

ಮಾರ್ಗದರ್ಶಕರಾಗಿ ನೇಮಕ: ಶ್ರೀ ಸಂಗಮ ಶಾಂತಾ ಶ್ರಮದ ಮಠದ ಉಸ್ತುವಾರಿ ಮತ್ತು ಗುರು ಪರಂಪರೆಯ ಮಾರ್ಗದರ್ಶಕರಾಗಿ ಇವರನ್ನು ನೇಮಿಸಲಾಗಿದೆ.

ಕಹಿ ಮರೆಸಿ ಉತ್ಸಾಹ ತುಂಬಿದ್ದಾರೆ: ಮಠದ ಭಕ್ತಾದಿಗಳಿಗೆ ತಂದೆ ತಾಯಿಯರನ್ನು ಮಕ್ಕಳು ಹೇಗೆ ಕಾಣಬೇಕು? ಮಕ್ಕಳ ಜವಾಬ್ದಾರಿ ಏನು? ಸಂಸಾರದ ನಿರ್ವಹಣೆ ಹೇಗೆ? ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಸದಾ ಗುರುಬೋಧನೆ ಮಾಡುವ ಮೂಲಕ ಎಷ್ಟೋ ಜನರ ಜೀವನದಲ್ಲಿ ಕಹಿ ಮರೆಸಿ ಉತ್ಸಾಹ ತುಂಬಿದ್ದಾರೆ.

ಜಾನಪದ ಕಲಾ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಹ್ವಾನಿಸಿ ಗೌರವ: ಪಟ್ಟಣದಲ್ಲಿ ಎಲ್ಲಿಯಾದರೂ ಮದುವೆ, ಮುಂಜಿ ಯಂತಹ ಸಾಂಪ್ರದಾಯಿಕ ಆಚರಣೆ ಇರಲಿ, ಅದನ್ನು ಆಚರಿಸುವ ಪದ್ಧತಿ, ಅದರ ಹಿನ್ನೆಲೆ, ಯಾವ ಸಂದರ್ಭಕ್ಕೆ ಯಾವ ಹಾಡು ಎಲ್ಲವನ್ನೂ ಸರಾಗವಾಗಿ ನಿಭಾಯಿಸಿಬಿಡುತ್ತಾರೆ. ಇವರ ಕಲೆಯನ್ನು ಗುರುತಿಸಿ ಬೆಂಗಳೂರು ಗ್ರಾಮಾಂತರ ಜಾನಪದ ಕಲಾ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಹ್ವಾನಿಸಿ ಗೌರವಿಸಿದ್ದಾರೆ.

ನಿರ್ದೇಶಕರಾಗಿ ಆಯ್ಕೆ :

ಇವರ ಬುದ್ಧಿಮಾತಿನ ದಾಟಿ, ದೇವರ ಮೇಲಿನ ಶ್ರದ್ಧೆ, ಏನೇ ಕೊಟ್ಟರೂ ನಿಭಾಯಿಸುವ ಹುಮ್ಮಸ್ಸು ನೋಡಿ, ಮುಜಾರಾಯಿ ಇಲಾಖೆಗೆ ಒಳಪಟ್ಟಿರುವ ಪಟ್ಟಣದ ಮೂಡಲ ಆಂಜನೇಯ ದೇವಾಲಯದ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.

ಲಕ್ಷ್ಮಮ್ಮ ಕಲಾ ಪ್ರದರ್ಶನ ;

ಅನೇಕ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಪುರಸ್ಕರಿಸಿದೆ. ಕೈವಾರ ಮತ್ತು ಧರ್ಮಸ್ಥಳದಲ್ಲಿ ಪ್ರತಿ ವರ್ಷ ನಡೆಯುವ ಪ್ರಮುಖ ಸಂಗೀತ ಕಾರ್ಯಕ್ರಮದವೇದಿಕೆಯಲ್ಲಿ ಲಕ್ಷ್ಮಮ್ಮ ಕಲಾ ಪ್ರದರ್ಶನ ಇದ್ದೇ ಇರುತ್ತದೆ. ಇವರ ಉತ್ಸಾಹದ ಚಿಲುಮೆ ಮತ್ತಷ್ಟು ಜನರ ಬಾಳಲ್ಲಿ ಬೆಳಕಾಗಲಿ.

 

-ಅಕ್ಷಯ್‌ ವಿ.ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next