Advertisement

ಎತ್ತರಕ್ಕೇರಿದರೂ ದಕ್ಕದ ಗರಿಮೆ

08:12 PM Mar 06, 2021 | Team Udayavani |

ಜಗತ್ತಿನ ಹಲವು ವಿಪರ್ಯಾಸಗಳಲ್ಲಿ ಅತ್ಯಂತ ಕಾಡುವುದು ಲಿಂಗತಾರತಮ್ಯ. ಹೆಣ್ಣೆಂಬ ಕಾರಣಕ್ಕೆ ಮಹಿಳೆ ಎದುರಿಸಬೇಕಾದ ಅಸಂಖ್ಯ ಸವಾಲುಗಳು ಮತ್ತು ಸಮಸ್ಯೆಗಳು. ಈ ನಡುವೆ ಅವಳಿಡುವ ಪ್ರತಿ ಪುಟ್ಟ ದಿಟ್ಟ ಹೆಜ್ಜೆಯೂ ದೊಡ್ಡ ಸಾಧನೆಯೇ.

Advertisement

ಇದರ ಮೂಲ ಮನುಷ್ಯನ ಆದಿವಾಸಿ ದಿನಗಳ ಪ್ರಾಣಿಗಳಂಥ ಪ್ರಪಂಚದಲ್ಲಿ ವಿಕಸನದ ಹಂತದ ಒಂದು ಘಟ್ಟವಾಗಿ ಆರಂಭವಾದದ್ದೇನೋ ಸರಿ. ಏಕೆಂದರೆ ಅರಣ್ಯ ನೀತಿಯಲ್ಲಿ ಬಲವಿದ್ದವರು ಆಳುವ ಮತ್ತು ಅಧಿಕಾರ ಚಲಾಯಿಸುವ ಮೇಲುಗೈ ಪಡೆಯುತ್ತಿದ್ದರು. ದೈಹಿಕ ವಾಗಿ ದುರ್ಬಲವಾಗಿದ್ದ ಹೆಂಗಸಿನ ಸ್ಥಾನ ಆಗ ಎರಡನೆ ಯದಾಯಿತು. ಆದರೆ ಮನುಷ್ಯ ಇಂದು ಅರಣ್ಯನೀತಿಗಳ ಆಧಾರದ ಮೇಲೆ ಬದುಕುತ್ತಿಲ್ಲ. ವ್ಯವಸ್ಥಿತ ಸಮಾಜ, ಕಾನೂನು, ಕಟ್ಟಳೆಗಳು, ವಿದ್ಯಾಭ್ಯಾಸ, ವಿಚಾರವಂತಿಕೆ ಇವನ್ನೆಲ್ಲ ಮೈ ಗೂಡಿಸಿಕೊಂಡಿದ್ದಾನೆ. ಹೆಂಗಸೊಬ್ಬಳು

ಈ ಪ್ರಪಂಚದಲ್ಲಿ ಅದೆಷ್ಟು ಮುಖ್ಯ ಎಂದು ಕೂಡ ಅರಿತಿದ್ದಾನೆ.  ಜಗತ್ತಿನ ಎಲ್ಲ ರಂಗಗಳಲ್ಲಿ ಇಂದು ಮಹಿಳೆಯರು ಅವನ ಸರಿಸಮಾನ ದುಡಿಯುತ್ತಿದ್ದಾರೆ. ಹಾಗಿದ್ದೂ ಅಗತ್ಯವಿರುವ ಎಲ್ಲ ವಿಚಾರಗಳ ಬಗ್ಗೆ ಪಾದದ ವರೆಗೆ ಬಗ್ಗಿ ಕಲಿಯಬಲ್ಲ ಪ್ರಪಂಚ ಇದೊಂದು ವಿಚಾರದಲ್ಲಿ ಮಾತ್ರ ಪೂರ್ಣ ವಿಕಸನ ತೋರದಿರುವುದು ತನ್ನ ಪುರುಷ ಪ್ರಧಾನ ಸಮಾಜದ ಅನುಕೂಲಕ್ಕಲ್ಲದೆ ಮತ್ತೂಂದು ಕಾರಣದಿಂದಲ್ಲ.

ಮುಂದುವರಿದ ಪಾಶ್ಚಾತ್ಯ ದೇಶಗಳಿಂದ ಹಿಡಿದು ಹೆಣ್ಣನ್ನು ಆದಿಶಕ್ತಿ, ಮಹಾಮಾತೆ ಎಂದು ಪೂಜಿಸುವ ಭಾರತದ ವರೆಗೆ ಹೆಣ್ಣು ಕಾಲದ ಪ್ರತಿಘಟ್ಟದಲ್ಲಿ ಸವಾಲುಗಳನ್ನು ಎದುರಿಸುತ್ತಲೇ ಬಂದಿದ್ದಾಳೆ. ಇಡೀ ಪ್ರಪಂಚವನ್ನು ಗಂಡಸರ ಪ್ರಪಂಚವನ್ನಾಗಿಸಿಕೊಂಡು ತನ್ನದೇ ಪ್ರಬೇಧದ ಏಕೈಕ ಭಿನ್ನರೂಪವಾದ ಮಹಿಳೆಯರ ಮೇಲೆ ಅತ್ಯಾಚಾರ, ದಬ್ಟಾಳಿಕೆ, ತಾರತಮ್ಯ ಮತ್ತು ವಿಕಟ ಕುಹಕಗಳನ್ನು ಮನುಷ್ಯ ಶತ ಶತಮಾನಗಳಿಂದ ತೋರಿಸುತ್ತಲೇ ಬಂದಿದ್ದಾನೆ. ಇದಕ್ಕೆ ಆಳುವವರ, ಸಾಮಾಜಿಕ ವ್ಯವಸ್ಥೆಗಳ, ಧರ್ಮಾಧಿಕಾರಿಗಳ, ಶ್ರೇಣೀಕೃತ ವ್ಯವಸ್ಥೆಗಳ ಕುಮ್ಮಕ್ಕು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಿಗುತ್ತಲೇ ಹೋಗುತ್ತಿದೆ. ಕೊನೆಗೆ ಹೆಂಗಸರು ಕೂಡ ಮತ್ತೂಬ್ಬ ಹೆಣ್ಣಿನ ಶೋಷಣೆಯಲ್ಲಿ ತೊಡಗುವಂತೆ ಅವರ ಯೋಚನಾಶಕ್ತಿಯನ್ನು ವ್ಯವಸ್ಥಿತವಾಗಿ ಮೊಟಕುಗೊಳಿಸಲಾಗಿದೆ.

ಈಗ ಮಹಿಳೆಯರು ಈ ವಿಚಾರದ ಬಗ್ಗೆ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಕುಟುಂಬ ವ್ಯವಸ್ಥೆ ಅಲ್ಪ-ಸ್ವಲ್ಪ ಮಾರ್ಪಾಡನ್ನು ಕಾಣುತ್ತಿದೆ. ಹೆಂಗಸರು ತಮ್ಮ ಹಕ್ಕುಗಳ ಬಗ್ಗೆ ಅರಿವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಜಾಗತೀಕರಣ, ತಂತ್ರ ಜ್ಞಾನ, ಸಾಮಾಜಿಕ ಜಾಲತಾಣಗಳು ಈ ನಿಟ್ಟಿನಲ್ಲಿ ಕ್ರಾಂತಿಯನ್ನೇ ಮಾಡುತ್ತಿವೆ. “ಮಿ ಟೂ’ ಎನ್ನುವ ಅಭಿಯಾನ ಅಮೆರಿಕದಲ್ಲಿ ಆರಂಭವಾದರೆ ಅದು ಅದೇ ದಿನ ಭಾರತದಲ್ಲಿಯೂ ಧ್ವನಿ ಪಡೆದು ಅನುರುಣಿಸುತ್ತದೆ. ಇದು ಅತ್ಯಂತ ದೊಡ್ಡ ಬದಲಾವಣೆ.

Advertisement

ಇಂದಿನ ಸಮಾಜ ನಾಗರಿಕತೆಯ ತುತ್ತ ತುದಿಯನ್ನು ತಲುಪಿದ್ದರೂ, ಕಾಲ ಬದಲಾಗಿದ್ದರೂ ಹೆಂಗಸರ ಮೇಲಿನ ತನ್ನ ಹತೋಟಿಯ ಗುಣವನ್ನು ಬಿಟ್ಟುಕೊಡಲು ಹಿಂತೆಗೆದಿರುವುದು ವೇದ್ಯವಾಗುತ್ತದೆ. ಅದು ಬಹುಶಃ ಬರೇ ಕೊಡುವ ಮತ್ತು ಪಡೆವ ವಿಚಾರವಲ್ಲ. ಸ್ತ್ರೀಯರು ಹೋರಾಡಿ ಗಳಿಸಬೇಕಾದ್ದು ಎನಿಸುತ್ತದೆ.

ಚರಿತ್ರೆಯನ್ನು ತಡಕಿದರೆ ಪಾಶ್ಚಿಮಾತ್ಯ ಮಹಿಳೆಯರು ಕೂಡ ತಮ್ಮ ಇಂದಿನ ಸ್ಥಿತಿಗೆ ತಲುಪಲು ಅವಿರತ ಹೋರಾಡಿದ್ದನ್ನು ನೋಡಬಹುದು. ಕೈಗಾರೀಕರಣ, ಯುದ್ಧ ಮತ್ತಿತರ ಕಷ್ಟಗಳ ರಣ ಕೆಂಡದಲ್ಲಿ ಹಾದು, ಆಹುತಿಗಳಾಗಿಯೇ ಇಂದಿನ ಹಂತವನ್ನು ತಲುಪಿದ್ದಾರೆ.

ಆಧ್ಯಾತ್ಮವನ್ನೇ ಬದುಕಿನ ಮಂತ್ರವಾಗಿಸಿಕೊಳ್ಳದ ಪಾಶ್ಚಾತ್ಯರ ಜೀವನ ಕ್ರಮ, ಪ್ರಶ್ನೆಗಳನ್ನು ಕೇಳುವ, ಸಮಾನತೆಯನ್ನು ಬೇಡುವ ಗುಣಗಳನ್ನು ಹೊಂದಿದ್ದ ಕಾರಣವೇ ಇಂದಿನ ಹಂತವನ್ನು ತಲುಪಿದೆ. ಇಂದಿನ ಜಾಗತಿಕ ಮಹಿಳೆಯರು ಗಂಡಸಿನ ಸರಿಸಮಾನವಾದ ಎಲ್ಲ ಹುದ್ದೆಗಳನ್ನು ಅಲಂಕರಿಸಿದ್ದಾರೆ ಅಥವಾ ತಮ್ಮ ಸಾಮರ್ಥ್ಯದ ಎಲ್ಲವನ್ನೂ ಅನ್ವೇಷಿಸುವ, ಅನುಭವಿಸುವ, ತಮ್ಮ ಮತಿಯನ್ನು ಜಗತ್ತಿಗೆ ಹಂಚುವ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಬದಲಾವಣೆಗಳಿಗೆ ಸ್ಪಂದಿಸುವ ಮತ್ತು ಸಹಕರಿಸುವ ಧಾರ್ಮಿಕ ಸಂಸ್ಥೆಗಳು, ಉದಾರವಾದ ಹೊಂದಿರುವ ಸರಕಾರಗಳು, ಭ್ರಷ್ಟಾಚಾರ ಕಡಿಮೆಯಿರುವ ರಾಜಕಾರಣಗಳ ಕಾರಣ ಮಹಿಳಾ ಕ್ರಾಂತಿಯೇ ನಡೆದು, ಹೆಂಗಸರು ಸಮಾಜದಲ್ಲಿ ಹಲವು ಸಮಾನತೆಗಳನ್ನು ಸೃಷ್ಟಿಸಿದ್ದಾರೆ.

ಉದಾಹರಣೆಗೆ, ಇಂಗ್ಲೆಂಡಿನಂಥ ಮುಂದುವರಿದ ದೇಶಗಳ ಲ್ಲಿಯೂ ಹಿಂದೆ ಮಹಿ ಳೆ ಯರು ಮತ ಚಲಾಯಿಸುವಂತಿರಲಿಲ್ಲ, ಚರ್ಚ್‌ಗಳಲ್ಲಿ ಉನ್ನತ ಪ್ರೀಸ್ಟ್‌ಗಳಾಗಲು ಸಾಧ್ಯವಿರಲಿಲ್ಲ. ಸಲಿಂಗೀಯ  ಮದುವೆಗಳನ್ನು ಚರ್ಚುಗಳು ಒಪ್ಪುತ್ತಿರಲಿಲ್ಲ. ಜನರ ಹೋರಾಟದ ಕಾರಣ ಈಗ ಎಲ್ಲವೂ ಬದಲಾಗಿವೆ. ಈಗ ಕಾನೂನುಗಳು ಎಲ್ಲ ಬಗೆಯ ಮನುಷ್ಯರ ನಡುವಿನ ಸಮಾನತೆಯನ್ನು ಗುರುತಿಸುತ್ತವೆ. ಧಾರ್ಮಿಕ ಸಂಸ್ಥೆಗಳು ಅವುಗಳನ್ನು ಗೌರವಿಸಿ, ಅಳವಡಿಸಿಕೊಂಡು ಜನರಿಗೆ ಹತ್ತಿರವಾಗುತ್ತಿವೆಯೇ ಹೊರತು ಲಿಂಗದ ಆಧಾರದ ಮೇಲೆ ಜನರ ನಡುವೆ ಭೇದವೆಣಿಸುತ್ತಿಲ್ಲ.

ಭಾರತದಲ್ಲಿ ಮಹಿಳೆಯರ ಪರವಾಗಿ ಹಲವು ಕಾನೂನು ಬದಲಾಗಿರುವುದು ಅತ್ಯಂತ ಸ್ವಾಗತಾರ್ಹ. ಆದರೆ ಇಂದಿಗೂ ಸಹ ನಮ್ಮ ಸಮಾಜ ಸ್ತ್ರೀ ಸಮಾನತೆಯನ್ನು ಪೂರ್ಣ ಅನುಷ್ಠಾನಕ್ಕೆ ತರಲು ಸಹಕರಿಸುವುದಿಲ್ಲ. ಸನಾತನ ಧರ್ಮ ಇತ್ಯಾದಿಗಳ ಹೆಸರಲ್ಲಿ ಸಮಾನತೆಯನ್ನು ಗುರುತಿಸಲು ಹಿಂತೆಗೆಯುತ್ತಿವೆ.

ಧರ್ಮವೆನ್ನುವುದು ಕಾನೂನಿಗಿಂತ ಮೇಲು ಎನ್ನುವವರಿದ್ದಾರೆ. ಹೀಗಾಗಿ ಹೆಣ್ಣು- ಗಂಡು ಸರಿ ಸಮಾನ ಎಂಬ ಸಿದ್ಧಾಂತಗಳಿದ್ದರೂ ಅದು ಊರ್ಜಿತ ವಾಗಲು ಸಾಧ್ಯವಾಗಿಲ್ಲ. ಆ ವಿಚಾರದಲ್ಲಿ ಭಾರತೀಯ ಮಹಿಳೆ ಕ್ರಮಿಸಬೇಕಾದ ಹಾದಿ ಬಹಳ ದೊಡ್ಡದು.

ಇಂಗ್ಲೆಂಡ್‌ನ‌ಲ್ಲಿ 2019ರಲ್ಲಿ ಕರೋಲಿನ್‌ ಕ್ರಯಡೊ ಪೆರೆಝ್  ಎಂಬಾಕೆ   “Invisible woman and Exposing Data Bias in a World Designed for Men” ಎನ್ನುವ ಪುಸ್ತಕವನ್ನು ಹೊರತಂದಳು. ಇದಕ್ಕೆ ರಾಯಲ್‌ ಸೊಸೈಟಿಯ ಇನ್‌ಸೈಟ್‌ ಇನ್ಷ್ಟ್ಮೆಂಟ್‌ ಸೈನ್ಸ್ ಪುಸ್ತಕ ಬಹುಮಾನವಾದ 25,000 ಪೌಂಡು ಮತ್ತು ವಾಟರ್‌ ಸ್ಟೋನ್‌ ಮತ್ತು ಫೈನಾನ್ಶಿಯಲ್‌ ಟೈಮ್ಸ್ ನ ಪ್ರಶಸ್ತಿಗಳೂ ದೊರಕಿದವು. ಇದ ರಲ್ಲಿ “ಹೆಣ್ಣು ಸಮಾನಳೇ ಅಥವಾ ಇಂದಿಗೂ ಅವಳು ಪ್ರತಿಯೊಂದು ರಂಗದಲ್ಲಿ ನಿರ್ಲಕ್ಷ್ಯ ಕ್ಕೊಳಗಾಗಿದ್ದಾಳೆಯೇ’ ಎನ್ನುವ ಬಗ್ಗೆ ಅಂಕಿ ಅಂಶಗಳನ್ನು ಈಕೆ ಕಲೆ ಹಾಕಿ ಸಾಕ್ಷಿ ಆಧಾರಗಳ ಸಮೇತ ಬರೆದಳು. ಉದಾಹರಣೆ- ಹೃದಯದ ಕಾಯಿಲೆ ಇರಬಹುದೇ ಎಂದು ವೈದ್ಯರ ಬಳಿ ಹೋದ ಹೆಂಗಸರಿಗೆ  ಗಂಡಸಿಗಿಂತ ಕಡಿಮೆ ತಪಾಸಣೆಗಳು, ಕಡಿಮೆ ಪರೀಕ್ಷೆಗಳು ನಡೆದವು. ಈ ಕಾರಣ ವೈದ್ಯರು ಶೇ. 50ರಷ್ಟು ಕಡಿಮೆ ಪ್ರಮಾಣದಲ್ಲಿ  ರೋಗವನ್ನು ಗುರುತಿಸಿದ ಅಂಶ ಹೊರಬಿತ್ತು.

ಪ್ರಪಂಚ ಏನನ್ನೇ ತಯಾರಿಸಲಿ; ಅದನ್ನು ಬಹುತೇಕ ಗಂಡಸಿನ ಅಗತ್ಯಕ್ಕೆಂದೇ ತಯಾರು ಮಾಡುತ್ತಿದೆ. ನಾವು ಚಲಾಯಿಸುವ ಮೋಟಾರು ವಾಹನಗಳ ವಿನ್ಯಾಸ ಗಂಡಸಿನ ಅಗತ್ಯಕ್ಕಿದೆಯೇ ಹೊರತು ಹೆಂಗಸಿನ ಅಗತ್ಯಕ್ಕಲ್ಲ. ಹೀಗಾಗಿ ಹೆಂಗಸರು ಗಂಭೀರವಾದ ಅಪಘಾತಗಳಿಗೆ ತುತ್ತಾಗುವ ಸಾಧ್ಯತೆ ಶೇ.47ರಷ್ಟು ಹೆಚ್ಚು ಎಂಬ ಅಂಶವನ್ನು ಈ ಪುಸ್ತಕ ಬಯಲು ಮಾಡಿದೆ.

ಅರ್ಧದಷ್ಟು ಸಂಖ್ಯೆಯಲ್ಲಿರುವ ಮಹಿಳೆಯನ್ನು ಗಣನೆಯಲ್ಲಿ ಇಟ್ಟುಕೊಳ್ಳದೆ ಗಂಡಸಿನ ಸರಾಸರಿ ಅಳತೆ, ಅಗತ್ಯಗಳ ಲೆಕ್ಕದಲ್ಲಿಯೇ ಎಲ್ಲವೂ ತಯಾರಾಗುತ್ತಿವೆ. ಉದಾಹರಣೆಗೆ ದಿನನಿತ್ಯ ಧರಿಸುವ ಫೇಸ್‌ ಮಾಸ್ಕ್ ಗಳು ಗಂಡಸರ ಲೆಕ್ಕಕ್ಕೆ ತಯಾರಾದವು. ಹೆಂಗಸರ ಮುಖದ ಮೇಲೆ ಅದು ದಿನ ನಿತ್ಯ ಕಂಡರೂ ಅದರಿಂದ ಅವರಿಗೆ ದೊರಕುವ ರಕ್ಷಣೆ ಅತ್ಯಂತ ಕಡಿಮೆ.

ಸರ ಕಾ ರಿ ನೀತಿಗಳು, ಉತ್ಪಾದಕ ವಸ್ತುಗಳ ವಿನ್ಯಾಸಗಳು, ಆರೋಗ್ಯ, ವಾಹನಗಳು, ಟೆಕ್ನಾಲಜಿ, ಅರ್ಬನ್‌ ಪಾಲಿಸಿಗಳು, ರಿಸರ್ಚ್‌ಗಳು, ನಮ್ಮ ಕೆಲಸದ ಸ್ಥಳಗಳು, ಮಾಧ್ಯಮಗಳು ಎಲ್ಲವೂ ಅತ್ಯಂತ ನಿಶ್ಯಬ್ದವಾಗಿ ಹೆಂಗಸರನ್ನು ಲೆಕ್ಕಕ್ಕಿಡದೆ ಕೈ ಬಿಟ್ಟಿವೆ ಎಂಬ ವಿಚಾರಗಳನ್ನು ಈ ಪುಸ್ತಕ ಪುರುಷ ಪ್ರಧಾನ ಪ್ರಪಂಚದ ಮುಂದೆ ರಾಚಿ ಹಿಡಿದಿದೆ.

ಗಂಡಸರು ಮಾಡುತ್ತಿದ್ದ ಕೆಲಸಗಳನ್ನು ಮಾಡುತ್ತಿದ್ದ  ಉದ್ಯೋಗ ಸ್ಥ ಮಹಿಳೆಯರ ಸಂಬಳ ಅವರ ಸಂಬಳಕ್ಕಿಂತ ಕಡಿಮೆಯಿದ್ದ ಸರಣಿ ಪ್ರಕರಣಗಳೇ ಇಂಗ್ಲೆಂಡ್‌ನ‌ಲ್ಲಿ ಇತ್ತೀಚೆಗೆ ಬೆಳಕಿಗೆ ಬಂದವು. ಹಲವು ಮಹಿಳೆಯರಿಗೆ ಸಂಸ್ಥೆಗಳು ತಪ್ಪೊಪ್ಪಿಗೆಯ ಜತೆ ಸರಿ ಸಮಾನ ವೇತನವನ್ನು ನಿಗದಿಪಡಿಸಿದ ಘಟನೆಗಳು ನಡೆದವು. ಇದು ಇಂಗ್ಲೆಂಡ್‌ನ‌ಲ್ಲಿ ಕಾನೂನು ರೀತಿಯ ಲಿಂಗ ಸಮಾನತೆಯ ರಕ್ಷಣೆ ಕೆಲಸ ಮಾಡಿತು. ಬಿ.ಬಿ.ಸಿ. ಬ್ರಾಡ್‌ಕಾಸ್ಟಿಂಗ್‌ ಸಂಸ್ಥೆಯಲ್ಲಿ ಕೆಲಸ ಮಾಡುವ ಸಮೀರ ಅಹಮದ್‌ ಎನ್ನುವ ಮಹಿಳೆ “ಈಕ್ವಲ್‌ ವರ್ಕ್‌, ಈಕ್ವಲ್‌ ಪೇ’ ಎನ್ನುವ ತನ್ನ ಹೋರಾಟದಲ್ಲಿ ಗಂಡಸರು ಮತ್ತು ಹೆಂಗಸರ ಕೆಲಸ ಸಮಾನವಾಗಿದ್ದಲ್ಲಿ ಸಮಾನ ವೇತನ ಸಿಗಬೇಕು ಎಂದು ಹೋರಾಡಿ ಗೆದ್ದಳು. ಈ ತಾರತಮ್ಯಗಳು ಭಾರತದಲ್ಲಿ ಸಾವಿರಾರು ಪಟ್ಟು ಹೆಚ್ಚಿವೆ. ಭಾರತೀಯ ಪ್ರಪಂಚದಲ್ಲಿ ಸೂ ಕ್ಷ್ಮವಾದ ಮತ್ತು ಎಲ್ಲ ವಿಚಾರಗಳ ಹಿಂದೆ ಅಡಗಿರುವ ದ್ರೋಹಗಳ ಬಗ್ಗೆ ಮಾತಾಡುವ, ಅರಿವು ಮೂಡಿಸುವ ಕೆಲಸ ಅತ್ಯಂತ ಅಗತ್ಯವಾಗಿ ನಡೆಯಬೇಕಿದೆ. ಪ್ರತೀ ಸವಾಲನ್ನೂ ತಮ್ಮ ಅಗಾಧ ಸಹನೆ, ತ್ಯಾಗ, ಅವಿರತ ದುಡಿಮೆಗಳ ಮೂಲಕ ಹೆಂಗಸರು ಸ್ವಲ್ಪ ಸ್ವಲ್ಪವಾಗಿ ಧೂಳೀಪಟ ಮಾಡುತ್ತ ಸಾಗಿದ್ದಾರೆ. ಇಂದು ಜಾಗತಿಕ ಮಟ್ಟದಲ್ಲಿ ಅಪಾರ ಸಾಧನೆ ಮಾಡಿದ ನೂರಾರು ಮಹಿಳೆಯರಿದ್ದಾರೆ. ಇಲ್ಲಿ ಅವರ ಪಟ್ಟಿ ಮಾಡು ವುದು ಅಸಾಧ್ಯ. ಆದರೆ ಅವ ರು ಎದುರಿಸುವ ಸಾಮಾನ್ಯ ಸವಾಲು, ಅವುಗಳ ಸ್ವರೂಪ ಮತ್ತು ಮಹಿಳಾ ಜಾಗೃತಿಯ ಮುಕ್ತ ಅಭಿವ್ಯಕ್ತಿಯ ಅವಕಾಶಗಳನ್ನು ಸೃಷ್ಟಿಸಿಕೊಂಡ ಅವಳ ಸಾಧನೆಗಳು ಪ್ರಶಂಸನೀಯ.

 

 

-ಡಾ| ಪ್ರೇಮಲತಾ ಬಿ., ಇಂಗ್ಲೆಂಡ್‌

Advertisement

Udayavani is now on Telegram. Click here to join our channel and stay updated with the latest news.

Next