Advertisement

ಮಹಿಳಾ ದಿನಾಚರಣೆಯ ವಿಶೇಷ : ಬಹುಮುಖ ಪ್ರತಿಭೆಯ ಕಲಾವಿದೆ ಚಿಮ್ಮಡದ ಸುಂದ್ರವ್ವ ಮೇತ್ರಿ

01:32 PM Mar 08, 2022 | Team Udayavani |

ರಬಕವಿ-ಬನಹಟ್ಟಿ: ಉತ್ತರ ಕರ್ನಾಟಕದ ವಿಶೇಷತೆಗಳಲ್ಲಿ ಬಯಲಾಟ ಅತ್ಯಂತ ಪ್ರಸಿದ್ಧವಾದುದು. ಅದರಲ್ಲೂ ಈ ಭಾಗದ ಪ್ರತಿಯೊಂದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶ್ರೀಕೃಷ್ಣ ಪಾರಿಜಾತ ಕಂಪನಿಯೊಂದು ಇರಲೇಬೇಕು.

Advertisement

ಬೆಳಗಾವಿಯಲ್ಲಿ ಶ್ರೀಕೃಷ್ಣ ಪಾರಿಜಾತ ಹುಟ್ಟಿದರೆ, ನಂತರ ಅದು ಬೆಳೆದು ಹೆಮ್ಮರವಾದುದು ವಿಜಯಪುರ ಬಾಗಲಕೋಟೆ ಜಿಲ್ಲೆಯಲ್ಲಿ. ಈ ಭಾಗದ ನನದಿ ರಾಮಯ್ಯ ರಾಚಯ್ಯ ಬರಗಿಯವರು, ಅಪ್ಪಾಲಾಲ ನದಾಫ್, ವಿಠ್ಠಲರಾವ ಟಕ್ಕಳಕಿ, ಹಿಡಕಲ್ ಭೀಮಪ್ಪ, ಮಲ್ಲಯ್ಯಸ್ವಾಮಿ ಅಥಣಿ, ಮಹಾದೇವಿ ಅಥಣಿ, ಚಂದ್ರವ್ವ ಗುಡ್ಲಮನಿ, ಲೋಕಾಪುರದ ದೇಶಪಾಂಡೆಯವರು, ನಿಂಗನೂರೆ ಹೆಳವಪ್ಪ, ಸವದಿಯ ಮಲ್ಲಯ್ಯ ಸೇರಿದಂತೆ ಹತ್ತಾರು ಜನರು ಈ ಕಲೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತುಂಗಕ್ಕೆ ಏರಿಸಿದ್ದಾರೆ.

ಈ ಸಾಲಿನಲ್ಲಿ ನಿಲ್ಲಬಹುದಾದ ಮತ್ತೊಬ್ಬ ಮಹಿಳಾ ಕಲಾವಿದೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಸುಂದ್ರವ್ವ ಕಲ್ಲಪ್ಪ ಮೇತ್ರಿ ಕೂಡಾ ಒಬ್ಬರು. ಐವತ್ತೈದು ವರ್ಷ ಆಸುಪಾಸಿನ ಸುಂದ್ರವ್ವ ಎಲೆ ಮರೆಯ ಕಾಯಿಯಂತೆ ಈ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ತಮ್ಮ ಹತ್ತನೆಯ ವಯಸ್ಸಿನಲ್ಲಿಯೇ ಪಾರಿಜಾತವನ್ನು ಚಿಮ್ಮಡ ಗ್ರಾಮದ ಪಾರಿಜಾತ ಮಾಸ್ತರರಾದ ದುಂಡಪ್ಪ ಸುಣಧೋಳಿ ಅವರಿಂದ ಕಲಿತರು. ನಂತರ ತಮ್ಮ ಹದಿನೈದ ವಯಸ್ಸಿನಲ್ಲಿ ಕಲೆಯನ್ನು ಪ್ರದರ್ಶನ ಮಾಡಲು ಆರಂಭಿಸಿದ ಸುಂದ್ರವ್ವ ನಾಲ್ಕು ದಶಕಗಳಿಂದ ನಿರಂತರವಾಗಿ ಶ್ರೀ ಕೃಷ್ಣ ಪಾರಿಜಾತ ಕಲೆಯನ್ನು ಪ್ರದರ್ಶನ ಮಾಡುತ್ತ ಬಂದಿದ್ದಾರೆ. ಶ್ರೀಕೃಷ್ಣ ಪಾರಿಜಾತದ ಗೊಲ್ಲತಿ, ರುಕ್ಮಿಣಿ, ಸತ್ಯಭಾಮಾ, ನಾರದ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದವರು.

ಶ್ರೀಕೃಷ್ಣ ಪಾರಿಜಾತವೇ ಅವರಿಗೆ ಎರಡು ಹೊತ್ತಿನ ಊಟಕ್ಕೆ ಆಸರೆಯಾಗಿದೆ. ಮೊದಲು ತಿಂಗಳಿಗೆ ಹದಿನೈದರಿಂದ ಇಪ್ಪತ್ತು ಪಾರಿಜಾತಗಳು ನಡೆಯುತ್ತಿದ್ದವು. ಆಗ ಪ್ರತಿ ಆಟಕ್ಕೆ ರೂ.150 ರಿಂದ 200 ಕೊಡುತ್ತಿದ್ದರು. ದೂರದ ಊರುಗಳಿಗೆ ಹೋದರೆ ಸ್ವಲ್ಪ ಹೆಚ್ಚಿಗೆ ಸಂಭಾವನೆಯನ್ನು ಕೊಡುತ್ತಿದ್ದರು. ಆದರೆ ಈಗ ಪಾರಿಜಾತದ ಪ್ರದರ್ಶನಗಳೇ ಕಡಿಮೆಯಾಗಿವೆ. ಈಗ ಒಂದು ಪ್ರದರ್ಶನಕ್ಕೆ ರೂ.800 ನೀಡುತ್ತಾರೆ ಎನ್ನುತ್ತಾರೆ ಸುಂದ್ರವ್ವ.

Advertisement

ದಾದನಟ್ಟಿ ಕಾಶಿಬಾಯಿಯವರ ಕಂಪನಿಯಲ್ಲಿ ಎರಡು ದಶಕಗಳ ಕಾಲ, ಅದೇ ರೀತಿಯಾಗಿ ಮಲ್ಲಯ್ಯಸ್ವಾಮಿ ಹಾಗೂ ಮಹಾದೇವಿ ಅಥಣಿ ಕಂಪನಿಯಲ್ಲೂ ಕೂಡಾ ಪಾರಿಜಾತ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ.

ಇದನ್ನೂ ಓದಿ : ಮಹಿಳಾ ದಿನಾಚರಣೆ ವಿಶೇಷ: ಸಾವಯವ ಕೃಷಿ ಸಾಧಕಿ ಲಕ್ಷ್ಮೀ ಶಿರಮಗೊಂಡ

ಬೆಂಗಳೂರು, ದಾವಣಗೇರಿ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಬೀದರ, ಕಲಬುರಗಿ, ಕರ್ನಾಟಕ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಾಗೂ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಪ್ರತಿಯೊಂದು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ತಮ್ಮ ಪಾರಿಜಾತ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಧಾರವಾಡ ಆಕಾಶವಾಣಿ ಕೇಂದ್ರವೂ ಕೂಡಾ ಇವರ ಪ್ರದರ್ಶನವನ್ನು ಪ್ರಸಾರ ಮಾಡಿದೆ.

ಇದುವರೆಗೆ ಐದಾರು ಸಾವಿರ ಪ್ರದರ್ಶನ ಮಾಡಿರುವ ಸುಂದ್ರವ್ವ ಶಾಲೆಯ ಕಟ್ಟೆಯನ್ನು ಹತ್ತಿದವರಲ್ಲ. ಆದರೂ ಅವರು ಪಾರಿಜಾತದ ಎಲ್ಲ ಪಾತ್ರಗಳ ಸಂಭಾಷಣೆಯನ್ನು ಸಲೀಸಲಾಗಿ ಹೇಳುತ್ತಾರೆ.

ಸಾಹೇಬ್ರ ಇದು ಶ್ರೀಕೃಷ್ಣ ಪರಮಾತ್ಮನ ಆಟರಿ, ಅವನ ಎಲ್ಲಾ ನುಡಸ್ತಾನ್ರಿ ಮತ್ತು ಆಡಸತಾನರಿ ಎನ್ನುತ್ತಾರೆ ಸುಂದ್ರವ್ವ. ಪಾರಿಜಾತದ ಜೊತೆಗೆ ಸುಂದ್ರವ್ವ ಚೌಡಕಿ ಪದಗಳ ಕಲಾವಿದೆಯೂ ಹೌದು. ಇದನ್ನು ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ದೇವರ ಸೇವೆಯ ಸಂದರ್ಭದಲ್ಲಿ ಮಾತ್ರ ಪ್ರದರ್ಶನ ಮಾಡುತ್ತಾರೆ.

ಇವರ ಸೇವೆಯನ್ನು ಗಮನಿಸಿದ ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಅದೇ ರೀತಿಯಾಗಿ 2017-18 ರಲ್ಲಿ ಬಾಗಲಕೋಟೆ ಜಿಲ್ಲೆಯ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಅದೇ ರೀತಿಯಾಗಿ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿವೆ. ಕರ್ನಾಟಕ ಸರ್ಕಾರ ಕಲಾವಿದರೆಗೆ ನೀಡುವ ಪಿಂಚಣಿ ಅವರಿಗೆ ಮತ್ತಷ್ಟು ಆಸರೆಯನ್ನು ನೀಡಿದೆ.

ಈಗಲೂ ಸುಂದ್ರವ್ವ ಮೇತ್ರಿಯವರ ಕಾಲುಗಳಲ್ಲಿಯ ಮತ್ತು ಧ್ವನಿಯಲ್ಲಿಯ ಶಕ್ತಿ ಇನ್ನೂ ಕಡಿಮೆಯಾಗಿಲ್ಲ. ಈಗಲೂ ಅವರು ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ. ನಾಲ್ಕು ದಶಕಗಳಿಂದ ಶ್ರೀಕೃಷ್ಣ ಪಾರಿಜಾತ ಪಾರಿಜಾತ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಸುಂದ್ರವ್ವ ಮೇತ್ರಿಯವರಿಗೆ ಇನ್ನಷ್ಟು ಪ್ರಶಸ್ತಿಗಳು ದೊರೆಯಲಿ ಎಂಬುದು ನಮ್ಮೆಲ್ಲರ ಶುಭ ಹಾರೈಕೆ.

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next