Advertisement
ಮಹಿಳಾ ಹೂಡಿಕೆ ಸಮಾಜದ ತುರ್ತು
Related Articles
Advertisement
ಆರ್ಥಿಕ ಬಲ ಎಷ್ಟು ಮುಖ್ಯ?
ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಆರ್ಥಿಕವಾಗಿ ಅವರಿಗೆ ಬಲ ತುಂಬಬೇಕಿದೆ. ನಮ್ಮ ಈಗಿನ ಆರ್ಥಿಕತೆಯು ಲಾಭವನ್ನೇ ನೋಡುತ್ತದೆ. ಹೂಡಿಕೆದಾರರ ಆಸಕ್ತಿಗಳು ಹಾಗೂ ಮಹಿಳೆಯ ಆದ್ಯತೆಗಳು ಹೊಂದಿಕೆಯಾಗದಿದ್ದಲ್ಲಿ ಇದು ದುಬಾರಿಯೂ ಆಗಬಹುದು. ಜಾಗತಿಕವಾಗಿ ಲಿಂಗ ಸಮಾನತೆಯನ್ನು ಸಾಧಿಸಲು ಆರ್ಥಿಕ ಸಂಪನ್ಮೂಲದ ಬೇಡಿಕೆಯಿದೆ. ಅಂದಾಜಿನ ಪ್ರಕಾರ ಲಿಂಗ ಸಮಾನತೆಯನ್ನು ಸಾಧಿಸಲು ವಾರ್ಷಿಕವಾಗಿ 360 ಬಿಲಿಯನ್ ಡಾಲರ್ ಬೇಕಾಗಬಹುದು.
ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣು ಕಡಿಮೆ ಸಂಬಳದ ಅಥವಾ ಮನೆ ಕೆಲಸದಲ್ಲಿಯೇ ಹೆಚ್ಚು ತೊಡಗಿಕೊಂಡಿರುತ್ತಾರೆ. ಪುರುಷರಗಿಂತ ಮಹಿಳೆಯರು ಮೂರು ಪಟ್ಟು ಹೆಚ್ಚಿನ ಸಂಬಳವಿಲ್ಲದ ಕೆಲಸದಲ್ಲಿ ತೊಡಗಿರುತ್ತಾರೆ. ಆದರೆ ಜಿಡಿಪಿಯಲ್ಲಿ ಇದು ಒಳಗೊಳ್ಳದೇ ಇರುವ ಕಾರಣ ಇದು ಆರ್ಥಿಕವಾಗಿ ಮೌಲ್ಯವನ್ನು ಹೊಂದುತ್ತಿಲ್ಲ. ಅಲ್ಲದೇ ಮಹಿಳೆಯರು ಪುರುಷರಿಗಿಂತ ಶೇ.20ರಷ್ಟು ಕಡಿಮೆ ಸಂಬಳವನ್ನು ಪಡೆಯುತ್ತಿದ್ದಾರೆ, ಕೆಲವೊಂದು ದೇಶಗಳಲ್ಲಿ ಶೇ.35ರಷ್ಟು ಅಂತರವಿದೆ. ಈ ಎಲ್ಲ ವಿಷಯಗಳೂ ಮಹಿಳೆಯರು ಇನ್ನೂ ಅಸಮಾನತೆಯ ಸುಳಿಯಲ್ಲಿ ಸಿಲುಕುವಂತೆ ಮಾಡಿವೆ.
ಆರ್ಥಿಕತೆಯ ಜತೆಜತೆಗೆ ತಂತ್ರಜ್ಞಾನ, ಮಾಹಿತಿ, ಭೂಮಿ, ನೈಸರ್ಗಿಕ ಸಂಪನ್ಮೂಲಗಳ ಸೌಲಭ್ಯವು ಮಹಿಳೆಗೆ ಸಿಗುವಂತಾಗಬೇಕು. 2022ರಲ್ಲಿ 2.7 ಬಿಲಿಯನ್ ಮಹಿಳೆಯರು ಇಂಟರ್‌ನೆಟ್ ಸೌಲಭ್ಯದಿಂದ ವಂಚಿತರಾಗಿರುವುದು ಕಂಡುಬಂದಿದೆ. ಇದು ಅವರಿಗೆ ಉದ್ಯೋಗವನ್ನು ಪಡೆಯುವುದರಿಂದ ವಂಚಿತರನ್ನಾಗಿ ಮಾಡುತ್ತದೆ. ಹವಾಮಾನ ಬದಲಾವಣೆಯು ಹೆಣ್ಣು ಮಕ್ಕಳ ಆರೋಗ್ಯ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದೆ. ಮಹಿಳೆಯ ಆರೋಗ್ಯವನ್ನು ಬಲವರ್ಧಿಸುವ ಕೆಲಸವಾಗಬೇಕಿದೆ.
ಸಶಕ್ತ ಮಹಿಳೆಯಿಂದ ಸದೃಢ ಸಮಾಜ:
ಪ್ರತೀ ವರ್ಷ ಶೇ.99ರಷ್ಟು ಬಾಣಂತಿಯರ ಸಾವಿನ ಪ್ರಕರಣಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲೇ ದಾಖಲಾಗುತ್ತಿವೆ. ಮಹಿಳೆಯರ ಆರೋಗ್ಯ ಯೋಜನೆಗಳಿಗೆ ಮಾಡುವ ಹೂಡಿಕೆಯು ಮಹಿಳಾ ಆರೋಗ್ಯದಲ್ಲಿ ಸುಧಾರಣೆಯಾಗುವುದರ ಜತೆಯಲ್ಲಿ ಭವಿಷ್ಯದ ಆರೋಗ್ಯವಂತ ಮತ್ತು ಸಶಕ್ತ ಸಮಾಜ ರೂಪಣೆಗೆ ಬುನಾದಿಯಾಗಬಲ್ಲದಾಗಿದೆ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ 5ರಲ್ಲಿ 1 ಹೆಣ್ಣು ಮಗು ಪ್ರಾಥಮಿಕ ಶಿಕ್ಷಣವನ್ನೇ ಪೂರೈಸುತ್ತಿಲ್ಲ. ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಹೂಡಿಕೆ ಮಾಡಿದರೆ ದೇಶದ ಒಟ್ಟಾರೆ ಪ್ರಗತಿಯಲ್ಲಿ ಧನಾತ್ಮಕ ಬೆಳವಣಿಗೆ ಸಾಧ್ಯ. ಶೇ.10ರಷ್ಟು ಹೆಚ್ಚು ಹೆಣ್ಣು ಮಕ್ಕಳು ಶಿಕ್ಷಣ ಪಡೆದಲ್ಲಿ ದೇಶದ ಜಿಡಿಪಿಯು ಶೇ.3ರಷ್ಟು ಏರಿಕೆ ಕಾಣಬಲ್ಲುದು.
7 ರಲ್ಲಿ 1 ಹೆಣ್ಣು ಮಗುವಿಗೆ 15 ವರ್ಷದೊಳಗೆ ವಿವಾಹ ಮಾಡಲಾಗುತ್ತಿದೆ. ಅದೇ 7 ವರ್ಷಕ್ಕಿಂತ ಹೆಚ್ಚು ವರ್ಷ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳು, 20 ವಯಸ್ಸಿನ ಬಳಿಕ ವಿವಾಹವಾಗಿ 2ಕ್ಕಿಂತ ಕಡಿಮೆ ಮಕ್ಕಳನ್ನು ಪಡೆಯುತ್ತಿದ್ದಾರೆ.
ಜಾಗತಿಕವಾಗಿ ಎಚ್‌ಐವಿ ಸೋಂಕಿಗೆ ಒಳಗಾಗಿರುವವರಲ್ಲಿ ಶೇ.52ರಷ್ಟು ಮಹಿಳೆಯರಿದ್ದಾರೆ. ಇದಕ್ಕೆ ಪರಿಹಾರವಾಗಿ ತಾಯಿಯಿಂದ ಮಕ್ಕಳಿಗೆ ಎಚ್‌ಐವಿ ಸೋಂಕನ್ನು ತಡೆಗಟ್ಟುವ ಆರೋಗ್ಯ ಉಪಕ್ರಮಗಳು ಶೇ.98ರಷ್ಟು ಪರಿಣಾಮಕಾರಿಯಾಗಿವೆ.
ಕೃಷಿಕರಲ್ಲಿ ಶೇ.43ರಷ್ಟು ಮಾತ್ರ ಮಹಿಳೆಯರಿದ್ದಾರೆ. ಅದರಲ್ಲೂ ಭೂ ಮಾಲಕತ್ವವನ್ನು ಹೊಂದಿರುವ ಸಂಖ್ಯೆಯು ಕಡಿಮೆಯಿದೆ. ಒಂದುವೇಳೆ ಪುರುಷರಂತೆ ಮಹಿಳೆಯರು ಭೂ ಮಾಲಕತ್ವವನ್ನು ಪಡೆದರೆ ಕೃಷಿಯಲ್ಲಿ ಶೇ.10ರಷ್ಟು ವೃದ್ಧಿಯಾಗಲಿದೆ.
ಇಡೀ ವಿಶ್ವದ ರಾಜಕೀಯ ಕ್ಷೇತ್ರವನ್ನು ಪರಿಗಣಿಸಿದರೆ ಶೇ.18.9ರಷ್ಟು ಮಾತ್ರ ಮಹಿಳೆಯರು ಸಕ್ರಿಯರಾಗಿದ್ದಾರೆ. ರಾಜಕಾರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಸಿಕೊಂಡ ದೇಶಗಳಲ್ಲಿ ಪ್ರಜಾಸತ್ತೆ ಶೇ.30ರಷ್ಟು ಹೆಚ್ಚು ಬಲಯುತವಾಗಿದೆ.
ಸವಾಲು ಮೆಟ್ಟಿನಿಂತ ಮಾನಿನಿಯರು:
ಸಾಧನೆಯ ಸಾಹಸಕ್ಕೆ ಹೊರಟಾಗ ಹೆಜ್ಜೆಗೊಂದು ಸಂಕಷ್ಟ ಜತೆಯಾಗುತ್ತದೆ. ಅಂಥ ಸವಾಲುಗಳನ್ನು ದಾಟಿಕೊಂಡು ನಾಲ್ಕು ಜನಕ್ಕೆ ರೋಲ್‌ಮಾಡೆಲ್ ಆಗುವಂಥ ಸಾಧನೆ ಮಾಡಿದ ದಿಟ್ಟೆಯರ ಬದುಕಿನ ಸಂಕ್ಷಿಪ್ತ ಕಥನ ಇಲ್ಲಿದೆ.
ಬಾಳು ಬೆಳಗಿದ ಸಿರಿಧಾನ್ಯ :
ಹಾವೇರಿಯ ದೊಡ್ಡ ಗುಬ್ಬಿಯ ಜಯಮ್ಮ ಮಗುವಾಗಿದ್ದಾಗಲೇ ಅವರ ತಂದೆ ಮನೆ ಬಿಟ್ಟು ಹೋದವರು ವಾಪಸ್ ಬಂದದ್ದು 35 ವರ್ಷಗಳ ಅನಂತರ. ತಾಯಿ ಕಷ್ಟಪಟ್ಟು ಮಕ್ಕಳನ್ನು ಸಾಕಿದರು. ಕುಟುಂಬಕ್ಕೆ ನೆಲೆ ಒದಗಿಸಲು ಜಯಮ್ಮ, ನರ್ಸಿಂಗ್ ಹೋಂನಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡಿದರು. ಮದುವೆಯಾದ ಬಳಿಕ ಮಹಿಳೆಯರನ್ನು ಒಟ್ಟುಗೂಡಿಸಿ “ಶ್ರೀ ಬಸವೇಶ್ವರ ಮಹಿಳಾ ಕೃಷಿ ಸಂಘ’ ಆರಂಭಿಸಿದರು. ರೈತ ಶಕ್ತಿ ಗುಂಪುಗಳನ್ನು ರಚಿಸಿ, ಕೃಷಿ ಮತ್ತು ಮೌಲ್ಯವರ್ಧನೆಯ ತರಬೇತಿ ಕೊಡಿಸಿದರು. ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದ “ಸಹಜ ಸಮೃದ್ಧ’ ಸಂಸ್ಥೆಯ ಜತೆ ಸೇರಿ, ತಮ್ಮ ನೆರೆಹೊರೆಯ ಗ್ರಾಮಗಳ ರೈತರನ್ನು ಆಹಾರ ಬೆಳೆ ಬೆಳೆಯುವಂತೆ ಮನವೊಲಿಸಿದರು. ಈಗ “ಗಗನ್ ಎಂಟರ್ ಪ್ರೈಸಸ್’ ಎಂಬ ಕಂಪೆನಿಯನ್ನು ನೋಂದಾ ಯಿಸಿ ಸಿರಿಧಾನ್ಯ ಮೂಲದ ಮೌಲ್ಯವರ್ಧಿತ ಪದಾರ್ಥಗಳ ಉತ್ಪಾದನೆ ಆರಂಭಿಸಿ ಈಗ ದೊಡ್ಡ ಪ್ರಮಾಣದಲ್ಲಿ ವಿವಿಧ ಮಳಿಗೆ, ಕಂಪೆನಿಗಳಿಗೆ ಸರಬರಾಜು ಮಾಡುತ್ತಿದ್ದಾರೆ.
ವಿಜಯಕ್ಕನ ವಿಜಯದ ಹಾದಿ…:
“2002ರಲ್ಲಿ ದುಡಿಯುವ ತಾಯಂದಿರನ್ನು ದೃಷ್ಟಿಯಲ್ಲಿಟ್ಟು ಪ್ರಾರಂಭಿಸಿದ್ದು ಅಜ್ಜಿಮನೆ. ದುಡಿಯಲು ಹೋಗುವ ಅಪ್ಪ-ಅಮ್ಮ, ತಮ್ಮ ಮಕ್ಕಳನ್ನು ನಿಶ್ಚಿಂತೆಯಿಂದ ಬಿಟ್ಟು ಹೋಗಬಹುದಾದ ತಾಣವೇ-ಅಜ್ಜಿಮನೆ. ಮಕ್ಕಳಿಲ್ಲದ ಕೊರಗನ್ನು ಸಂಪೂರ್ಣವಾಗಿ ಮರೆಸಿ 18 ವರ್ಷಗಳ ಕಾಲ ಸಾವಿರಾರು ಮಕ್ಕಳೊಂದಿಗೆ ಕಳೆದ ಆ ದಿನಗಳು ನನ್ನ ಉಳಿದ ಬದುಕಿಗೆ ಗಟ್ಟಿಯಾದ ಆಶ್ರಯ ಕೊಟ್ಟಿವೆ’ ಎನ್ನುತ್ತಾರೆ ಬೆಂಗಳೂರಿನ ಅಜ್ಜಿಮನೆ ವಿಜಯಕ್ಕ. ಅನಂತರ ಅಜ್ಜಿಮನೆಯನ್ನು ಬೇರೆಯವರ ಸುಪರ್ದಿಗೆ ಒಪ್ಪಿಸಿದರು. ಕೊರೊನಾ ಬಾಧಿಸಿ ಒಂಟಿಯಾದಾಗ ಜತೆಯಾದದ್ದು ರಾಯಲ್ ಸ್ವೀಟ್. ಇದು ತುಪ್ಪದಿಂದ ಮಾಡಿದ ಸಿಹಿ ಮತ್ತು ಖಾರಾ ತಿನಿಸುಗಳ ಸಣ್ಣ ಉದ್ಯಮ. ಆನ್‌ಲೈನ್‌ನಲ್ಲಿ ಪ್ರಾರಂಭವಾದ ಈ ಬಿಸಿನೆಸ್ ನನ್ನಲ್ಲಿ ಬದುಕಿನ ಬಗ್ಗೆ ಅತೀ ಭರವಸೆ ಹುಟ್ಟು ಹಾಕಿದ ಪರಿಣಾಮ, ಈಗ ನಡೆಸುತ್ತಿರುವ ಟೇಕ್‌ಅವೇ ಫುಡ್ ಜಾಯಿಂಟ್ “ಪುಳ್ಚಾರ್’ ಆರಂಭಿಸಿದೆ. ವಿಶೇಷವೇನೆಂದರೆ, ಪ್ರತೀ ಸಂದರ್ಭದಲ್ಲೂ ನಾನು ಗೆದ್ದಿದ್ದೇನೆ.
ಟೀ ಮಾರುತ್ತಲೇ ವಕೀಲೆಯಾದ ಛಲಗಾತಿ! :
ಮಂಡ್ಯ ಸಮೀಪದ ಹಳ್ಳಿಯವರಾದ ರೇಖಾ ಆರಾಧ್ಯ ತನ್ನ 12ನೇ ವಯಸ್ಸಿನಲ್ಲಿ ತನಗಿಂತ 20 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಬೇಕಾಯಿತು. ಗಂಡನಿಂದಾಗುತ್ತಿದ್ದ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ಮನನೊಂದ ರೇಖಾ, ಹಸುಗೂಸನ್ನು ಎದೆಗವಚಿಕೊಂಡು ಮನೆಯಿಂದ ಹೊರಬಿದ್ದರು. ಆಸ್ಪತ್ರೆಯಲ್ಲಿ ದಾದಿಯಾಗಿ, ನ್ಯಾಯಾಧೀಶರೊಬ್ಬರ ಮನೆಯ ಕೆಲಸದಾಕೆಯಾಗಿ ಹೊತ್ತಿನ ಊಟಕ್ಕೆ ದಾರಿ ಹುಡುಕಿಕೊಂಡರು. ಈ ಮಧ್ಯೆ ಪಿಯುಸಿ ಪರೀಕ್ಷೆ ಕಟ್ಟಿ ಪಾಸಾದರು. ಮಂಡ್ಯ ಕೋರ್ಟ್ ಮುಂದೆ ಟೀ ಅಂಗಡಿ ಹಾಕಿಕೊಂಡು, ವಕೀಲರೊಬ್ಬರಲ್ಲಿ “ವಕೀಲರಾಗುವುದು ಹೇಗೆ?’ ಎಂದಿದ್ದರಂತೆ. ಅನಂತರ ನಡೆದಿದ್ದೆಲ್ಲ ಪವಾಡ. ಮಗನ ಜತೆಗೆ ತಾನೂ ಓದುತ್ತಾ, ಕೆಲಸವನ್ನೂ ಮಾಡುತ್ತಾ ವಕೀಲೆಯಾಗಿದ್ದರು. ಯಾವ ಕೋರ್ಟ್ ಮುಂದೆ ಟೀ ಅಂಗಡಿ ಇಟ್ಟು ನಿಂತಿದ್ದರೋ, ಇಂದು ಅಲ್ಲೇ ನೊಂದವರ ಪರ ವಾದ ಮಂಡಿಸುತ್ತಿದ್ದಾರೆ.
ಬದುಕಿಗೆ ಹಾದಿ ಕಲ್ಪಿಸಿದ ಸೀರೆ ಮಾರಾಟ:
ವಿನುತಾ ಕಾರ್ತಿಕೇಯನ್ ಮೂಲತಃ ಮೈಸೂರಿನವರು. 4 ವರ್ಷದ ಹಿಂದೆ ಮೈಸೂರಿನ ಮಳಿಗೆ ಒಂದರಲ್ಲಿ ತಮ್ಮ ಕೈಮಗ್ಗದ ಸೀರೆ ಮಾರಾಟದ ವ್ಯಾಪಾರ ಶುರುಮಾಡಿದರು. 7 ತಿಂಗಳ ಬಳಿಕ ಕೊರೊನಾ ಕಾರಣದಿಂದ ವ್ಯಾಪಾರವನ್ನು ನಿಲ್ಲಿಸಬೇಕಾಯ್ತು. ಇದ್ದಕ್ಕಿದ್ದಂತೆ ಎದುರಾದ ಕಷ್ಟದಿಂದ ಕಂಗೆಟ್ಟ ವಿನುತಾ ಅವರು ಒಮ್ಮೆ ಫೇಸುºಕ್‌ನಲ್ಲಿ ಹೀಗೇ ಹುಡುಕುತ್ತಾ ಇರುವಾಗ ಅವರಿಗೆ ಧೃತಿ ಆನ್‌ಲೈನ್ ಮಾರುಕಟ್ಟೆಯ ಪರಿಚಯ ಆಯಿತು. ಅದರ ಮೂಲಕ ಅವರ ಉದ್ಯಮಕ್ಕೆ ಒಳ್ಳೆಯ ವೇದಿಕೆ ದೊರೆಯಿತು. ಅವರು ಮಾರುವ ಕೈಮಗ್ಗದ ಸೀರೆಗಳಿಗೆ ಈಗ ಸಾಕಷ್ಟು ಬೇಡಿಕೆ ಇದೆ. ಇಂದು ವಿನುತಾ ಅವರು ಎಲ್ಲೆ ಸೀರೆ ಮಳಿಗೆ ಇಟ್ಟರೂ ಹುಡುಕಿ ಬಂದು ಕೊಳ್ಳುವವರಿದ್ದಾರೆ.
-ವಿಧಾತ್ರಿ ಭಟ್, ಉಪ್ಪುಂದ