Advertisement

ಏರೋ ಇಂಡಿಯಾದಲ್ಲಿ ಮಹಿಳಾ ದಿನ

10:43 AM Feb 24, 2019 | Team Udayavani |

ಬೆಂಗಳೂರು: ಏರೋ ಇಂಡಿಯಾ-2019 ವೈಮಾನಿಕ ಪ್ರದರ್ಶನದ ನಾಲ್ಕನೇ ದಿನವಾದ ಶನಿವಾರ ಮಹಿಳಾ ದಿನವಾಗಿ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್‌ಎಎಲ್‌, ಎನ್‌ಎಎಲ್‌ ಹಾಗೂ ಡಿಆರ್‌ಡಿಒ ಪ್ರದರ್ಶನದಲ್ಲಿ ಭಾಗವಹಿಸಿದ್ದ ಬಹುತೇಕ ಸಂಸ್ಥೆಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಹಾಗೂ ಮಹಿಳಾ ಪೈಲೆಟ್‌ಗಳಿಗೆ ಸನ್ಮಾನ, ಅಭಿನಂದನೆ ಮೂಲಕ ಗೌರವ ಸಲ್ಲಿಸಿದವು.

Advertisement

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ತನ್ನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಮಹಿಳಾ ಉದ್ಯೋಗಿಗಳನ್ನು ಒಗ್ಗೂಡಿಸಿತ್ತು. ಈ ವೇಳೆ ಸಂಸ್ಥೆಯಲ್ಲಿ ವಿಮಾನ ವಿನ್ಯಾಸದ ನಕ್ಷೆ ಹಾಕುವವರಿಂದ ಹಿಡಿದು ವಿಮಾನ ಹಾರಾಟ, ನಿಯಂತ್ರಣ, ಬಿಡಿಭಾಗ ಉತ್ಪಾದನೆ ಸೇರಿದಂತೆ 10ಕ್ಕೂ ಹೆಚ್ಚು ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು. ಸಂಸ್ಥೆಯ ಅಧ್ಯಕ್ಷ ಸತೀಶ್‌ರೆಡ್ಡಿ ಅವರು ಸಾಧನೆಗೈದ ಮಹಿಳಾ ಸಿಬ್ಬಂದಿಗೆ ಗೌರವಿಸಿದರು.

ಮಹಿಳಾ ಉದ್ಯೋಗಿಗಳ ಹೆಚ್ಚಳ: ಈ ವೇಳೆ ಉದಯವಾಣಿಯೊಂದಿಗೆ ತಮ್ಮ ಅನುಭವ ಹಂಚಿಕೊಂಡ ಅಗ್ನಿ ಪ್ರಶಸ್ತಿ ವಿಜೇತ ಡಿಆರ್‌ಡಿಒ, ವೈಮಾನಿಕ ಅಭಿವೃದ್ಧಿ ಸಂಸ್ಥೆಯ(ಎಡಿಎ) ಅತ್ಯುನ್ನತ ಶ್ರೇಣಿ (ಒಎಸ್‌) ವಿಜ್ಞಾನಿ ಪದ್ಮಾವತಿ ಅವರು, ಡಿಆರ್‌ಡಿಒದಲ್ಲಿ ಈ ಹಿಂದೆ ಮಹಿಳಾ ಉದ್ಯೋಗಿಗಳ ಸಂಖ್ಯೆ ತೀರಾ ಕಡಿಮೆ ಇತ್ತು. 1986ರ ವೇಳೆಗೆ ಒಬ್ಬರೇ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ವರ್ಷ ಕಳೆದಂತೆ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಾ ಬಂದಿತು. ಇನ್ನು ಕಳೆದ 2 ವರ್ಷದಲ್ಲಿ ಶೇ.15ರಷ್ಟು ಮಹಿಳಾ ಉದ್ಯೋಗಿಗಳು ಹೆಚ್ಚಾಗಿದ್ದಾರೆ. ಪ್ರಸ್ತುತ ಡಿಆರ್‌ಡಿಒ ಅಧೀನ ಸಂಸ್ಥೆಯಾಗಿರುವ ಎಡಿಎದಲ್ಲಿ ಒಟ್ಟು 430 ಉದ್ಯೋಗಿಗಳಲ್ಲಿ 59 ಮಹಿಳಾ ಉದ್ಯೋಗಿಗಳಿದ್ದಾರೆ. ಯಂತ್ರೋಪಕರಣ ತಯಾರಿಸುವ ಚಿಕ್ಕ ವಿಭಾಗದಿಂದ ಹಿಡಿದು ಉನ್ನತ ಮಟ್ಟದ ವಿಜ್ಞಾನಿಗಳಾಗಿಯು ಕೆಲಸ ಮಾಡುತ್ತಿದ್ದಾರೆ.

ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳು ಛಾಪು ಮೂಡಿಸುತ್ತಿದ್ದು, ಅದರಂತೆ ವೈಮಾನಿಕ ಸಂಸ್ಥೆ, ವಾಯುಪಡೆಯಲ್ಲಿಯೂ ದಾಪುಗಾಲಿಡುತ್ತಿದ್ದಾರೆ. ಆದರೆ, ಈ ಕುರಿತು ಸಾಕಷ್ಟು ಜನರಿಗೆ ಮಾಹಿತಿ ಇಲ್ಲ. ಇನ್ನೂ ಈ ಕ್ಷೇತ್ರದಲ್ಲಿ ಮಹಿಳಾ ಮತ್ತು ಪುರುಷ ಸಿಬ್ಬಂದಿ ಎಂಬ ಬೇಧ ಭಾವವಿಲ್ಲ. ಅರ್ಹತೆ ಮತ್ತು ಕೌಶಲ್ಯವಿದ್ದರೆ ಉನ್ನತ ಸ್ಥಾನವನ್ನೇರಬಹುದು. ಇಲ್ಲಿ ಮಹಿಳಾ ಉದ್ಯೋಗಿಗಳು ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕಚೇರಿ ಕೆಲಸಕ್ಕೆ ಸೀಮಿತವಾಗಿರುವುದಿಲ್ಲ. ವೈಮಾನಿಕ ಪರೀಕ್ಷೆ ವೇಳೆ ಮರುಭೂಮಿಯಲ್ಲಿಯೂ ಕೆಲಸ ನಿರ್ವಹಿಸುತ್ತೇವೆ ಎಂದರು.

ತೇಜಸ್‌ ಹಾರಾಟದಲ್ಲಿ ನಮ್ಮ ಶ್ರಮವಿದೆ: ಡಿಆರ್‌ ಡಿಒದ ವೈಮಾನಿಕ ಅಭಿವೃದ್ಧಿ ಸಂಸ್ಥೆಯು (ಎಡಿಎ) ಮೊದಲು ಯುದ್ಧ ವಿಮಾನಗಳ ವಿನ್ಯಾಸ ಸಿದ್ಧಪಡಿಸುತ್ತದೆ. ಆ ನಂತರ ಎಚ್‌ಎಎಲ್‌ ನಿರ್ಮಾಣ ಮಾಡುತ್ತದೆ. ಪ್ರಸ್ತುತ ಹಾರಾಟ ನಡೆಸಿ ಏರೋ ಇಂಡಿಯಾಗೆ ಆಗಮಿಸಿರುವರನ್ನು ನಿಬ್ಬೆರಗಾಗಿಸುತ್ತಿರುವ ಲಘು ಯುದ್ಧ ವಿಮಾನ ತೇಜಸ್‌ ಹಿಂದೆ ನಮ್ಮ ಶ್ರಮವಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ. ಅದೇ ರೀತಿ ಬಹುತೇಕ ಎಚ್‌ಎಎಲ್‌ನಲ್ಲಿ ನಿರ್ಮಾಣವಾಗುವ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳ ಹಿಂದೆ ಎಡಿಎ ಎಲ್ಲಾ ಮಹಿಳಾ ಉದ್ಯೋಗಿಗಳ ಶ್ರಮವಿದೆ. ಮಹಿಳೆಯರು ಕೂಡ ವೈಮಾನಿಕ ತಂತ್ರಜ್ಞಾನಕ್ಕೆ ಪುರುಷರಷ್ಟೇ ಸಮಾನ ಕೊಡುಗೆ ನೀಡುತ್ತಿದ್ದೇವೆ ಎಂದರು.

Advertisement

ಕೆಲಸ ನಮಗೆ ಸವಾಲಿನದ್ದು, ಸಾಧನೆಗೆ ದಾರಿಯಾಗಿದೆ. ಯುವತಿಯರು ವೈಮಾನಿಕ ಕ್ಷೇತ್ರಕ್ಕೆ ಬರಬೇಕು. ಪಿಯುಸಿ ವಿಜ್ಞಾನ ವಿಷಯ ಬಳಿಕ ಯಾವುದಾದರೂ ಪದವಿಯೊಂದಿಗೆ ವಾಯುಪಡೆ ಸೇರಬಹುದು. ಯಾವುದೇ ವಿಭಾಗದ ಇಂಜಿನಿಯರಿಂಗ್‌ ಪದವಿ ಪಡೆದವರು ವೈಮಾನಿಕ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಬಹುದು ವಾಯುಪಡೆ ಸೇರಲಿಚ್ಛಿಸುವ ಯುವಪಡೆಗೆ ಸಲಹೆ ನೀಡಿದರು.

ವೈಮಾನಿಕ ಕ್ಷೇತ್ರವು ಮಹಿಳೆಯರಿಗೆ ಅತ್ಯಂತ ಸುಭದ್ರವಾಗಿದ್ದು, ಉದ್ಯೋಗ ಅಷ್ಟೇ ಅಲ್ಲ ಪ್ರತಿಷ್ಠೆ ಹಾಗೂ ಸವಾಲಿನಿಂದ ಕೂಡಿರುತ್ತದೆ. ವಾಯುಸೇನೆಯಲ್ಲಿ ಪೈಲಟ್‌ ಆಗುವ ಜತೆಗೆ ವಿಮಾನ ನಿರ್ಮಾಣ ಹಂತದ ಏರೋಡೈನಮಿಕ್ಸ್‌, ಏರೋ ಸ್ಟ್ರಕ್ಚರ್‌, ಮೆಕಾನಿಕಲ್‌ ಸಿಸ್ಟಂ, ಎಲೆಕ್ಟ್ರಾನಿಕ್ಸ್‌, , ಪ್ರೋಡಕ್ಷನ್‌ ಸೇರಿ ವಿವಿಧ ವಿಭಾಗದಲ್ಲಿ ಸ್ತ್ರೀಯರು ಕೆಲಸ ಮಾಡುತ್ತಿದ್ದಾರೆ. ಇವೆಲ್ಲವೂ ದೇಶ ಸೇವೆಯೇ.
 ● ಪದ್ಮಾವತಿ, ಒಎಸ್‌ ವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next