Advertisement
ಹೌದು, ಬಿಸಿ ರೊಟ್ಟಿ ಹಸಿ ಖಾರಾ ಉತ್ತರ ಕರ್ನಾಟಕದ ಪ್ರಮುಖ ಆಹಾರ. ಜಾಗತೀಕರಣದ ಈ ಜಮಾನಾದಲ್ಲಿ ರೊಟ್ಟಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಉತ್ತರ ಕರ್ನಾಟಕ ಅದರಲ್ಲೂ ಹುಬ್ಬಳ್ಳಿ-ಧಾರವಾಡ ಕೇಂದ್ರವಾಗಿಟ್ಟುಕೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ಶುದ್ಧವಾದ ರೊಟ್ಟಿ ತಟ್ಟಿ ಇಂದು ಯಶಸ್ವಿ ಮಹಿಳಾ ಉದ್ಯಮಿಗಳು ಗೆದ್ದು ನಿಂತಿದ್ದಾರೆ.
ಲಕ್ಷ ಲಕ್ಷ ಸಂಖ್ಯೆಯಲ್ಲಿ ರೊಟ್ಟಿ ಸುಡುವುದು ಈಗ ಕಷ್ಟ. ತಟ್ಟುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಈಗ ರೊಟ್ಟಿ ಸಿದ್ಧಗೊಳಿಸುವ ಯಂತ್ರಗಳು ಬಂದಿವೆ. ಇದನ್ನೇ ಬಳಸಿಕೊಂಡು ಮಹಿಳಾ ಉದ್ಯಮಿ ಗಳು ಚಿಕ್ಕ ಚಿಕ್ಕ ಗ್ರಾಮಗಳಿಂದ ಹಿಡಿದು ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬೆಂಗಳೂರು ಸಿಟಿವರೆಗೂ ಬೇಡಿಕೆಗೆ ತಕ್ಕಂತೆ ರೊಟ್ಟಿ ಪೂರೈಕೆ ಮಾಡುತ್ತಿದ್ದಾರೆ. 10 ವರ್ಷಗಳ ಹಿಂದೆ ತಟ್ಟಿದ ರೊಟ್ಟಿಗೆ ಮಾತ್ರ ಸೀಮಿತವಾಗಿದ್ದ ಈ ಉದ್ಯಮ ಇಂದು ಯಂತ್ರಗಳಾಧಾರಿತವಾಗಿ ಬೆಳೆಯುತ್ತಿದೆ.
Related Articles
ರೊಟ್ಟಿ ಉದ್ಯಮಕ್ಕೆ ಆರಂಭದಲ್ಲಿ ಅಷ್ಟಾಗಿ ಯಶಸ್ಸು ಸಿಕ್ಕಿರಲಿಲ್ಲ. ತಟ್ಟಿದ ರೊಟ್ಟಿ ಕೊಳ್ಳದೆ ಹೋದಾಗ ಹಾನಿಯಾಗುತ್ತಿತ್ತು. ಅನೇಕರು ನಷ್ಟ ಅನುಭವಿಸಿದರು. ಆದರೆ ಇಂದು ಧಾರವಾಡ, ಹಾವೇರಿ, ಗದಗ, ರಾಯಚೂರು, ವಿಜಯಪುರ, ಕಲಬುರಗಿ ಮತ್ತು ಬೆಳಗಾವಿ ಸೇರಿ 18 ಜಿಲ್ಲೆಗಳಲ್ಲಿ ರೊಟ್ಟಿ ಭರ್ಜರಿ ಮಾರಾಟವಾಗುತ್ತಿದೆ. ಪ್ರತೀ ಜಿಲ್ಲಾ ಕೇಂದ್ರಗಳಲ್ಲೂ ಕನಿಷ್ಠ 25 ರೊಟ್ಟಿ ಮಾರಾಟ ಕೇಂದ್ರಗಳು ಹುಟ್ಟಿಕೊಂಡಿವೆ. ಈ ಎಲ್ಲ ಕೇಂದ್ರಗಳ ರೂವಾರಿಗಳು ಮಹಿಳೆಯರೇ ಆಗಿದ್ದು ವಿಶೇಷ. ವಿಧವೆಯರು, ಆರ್ಥಿಕವಾಗಿ ಹಿಂದುಳಿದವರು, ನಷ್ಟಕ್ಕೆ ಸಿಲುಕಿದವರೆಲ್ಲರೂ ರೊಟ್ಟಿ ಉದ್ಯಮವನ್ನು ಗಟ್ಟಿಯಾಗಿ ಹಿಡಿದು ಯಶಸ್ವಿಯಾಗುತ್ತಿದ್ದಾರೆ.
Advertisement
ರುಡ್‌ಸೆಟ್ ಕಸರತ್ತುಧಾರವಾಡದಲ್ಲಿರುವ ಧರ್ಮಸ್ಥಳ ಸಂಸ್ಥೆ ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಿತ ರುಡ್‌ಸೆಟ್ ಸಂಸ್ಥೆ (ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಕೇಂದ್ರ) ಈವರೆಗೂ ಅಂದಾಜು 18 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ರೊಟ್ಟಿ ತಟ್ಟುವುದು, ಚಟ್ನಿ, ಬೇಕರಿ ಉತ್ಪನ್ನ ಸೇರಿ ಎಲ್ಲ ಬಗೆಯ ಆಹಾರ ಉತ್ಪನ್ನಗಳನ್ನು ಸಿದ್ಧಗೊಳಿಸಿ ಮಾರುವುದು, ಬ್ಯೂಟಿ ಪಾರ್ಲರ್, ಕಂಪ್ಯೂಟರ್ ಸೇರಿ ಅನೇಕ ಬಗೆಯ ತರಬೇತಿ ನೀಡಿದೆ. ಈ ಸಂಸ್ಥೆಯಲ್ಲಿ ಒಟ್ಟು 250ಕ್ಕೂ ಅಧಿಕ ಮಹಿಳೆಯರು ರೊಟ್ಟಿ ಉದ್ಯಮದ ತರಬೇತಿ ಪಡೆದುಕೊಂಡು ಇಂದು ಯಶಸ್ವಿಯಾಗಿ ರೊಟ್ಟಿ ಮಾರಾಟ ಮಾಡುತ್ತಿದ್ದಾರೆ. ಪ್ರತಿದಿನ 3.5 ಲಕ್ಷ ರೊಟ್ಟಿ ಮಾರಾಟ
ಸದ್ಯ ಉತ್ತರ ಕರ್ನಾಟಕದಲ್ಲಿನ ಅಂದಾಜು 250 ಮಹಿಳೆಯರು ವಿವಿಧ ಜಿಲ್ಲೆಗಳಲ್ಲಿ ಸತತ ಉರಿಯುತ್ತಿರುವ ರೊಟ್ಟಿ ಸುಡುವ ಒಲೆಗಳಿಗೆ ಜ್ಯೋತಿಯಾಗಿದ್ದಾರೆ. ಇಲ್ಲಿ ಪ್ರತೀದಿನ 3.5 ಲಕ್ಷ ರೊಟ್ಟಿಗಳು ಮಾರಾಟವಾಗುತ್ತಿವೆ. ಒಂದು ರೊಟ್ಟಿಗೆ 5 ರೂ.ಬೆಲೆ., ಅಂದರೆ ಪ್ರತಿದಿನ 17.5 ಲಕ್ಷ ರೂ., ತಿಂಗಳಿಗೆ 5.25 ಕೋಟಿ, ವರ್ಷಕ್ಕೆ 63 ಕೋಟಿ ರೂ. ವಹಿವಾಟು ದಾಖಲಾಗುತ್ತಿದೆ. ಜಿಲ್ಲೆಯಿಂದ ಜಿಲ್ಲೆಗೆ ಮಾರಾಟವಾಗುತ್ತಿರುವ ಖಡಕ್ ರೊಟ್ಟಿಗಳು ರಾಜ್ಯವಷ್ಟೇ ಅಲ್ಲ, ದೇಶ-ವಿದೇಶಿಯರಿಗೂ ಪ್ರಿಯವಾಗುತ್ತಿದೆ. ಯಾವ ಮಹಿಳೆಯರು ರೊಟ್ಟಿ ತಟ್ಟುತ್ತಿದ್ದಾರೋ ಅವರ ರಟ್ಟಿ ಬಲಿಯುತ್ತಿವೆ (ಆರ್ಥಿಕವಾಗಿ ಸಬಲರಾಗಿದ್ದಾರೆ.) ಹೊಟ್ಟಿ ತುಂಬುತ್ತಿವೆ. ಇವರೆಲ್ಲ ರೊಟ್ಟಿ ತಟ್ಟಿ ಯಶಸ್ವಿಯಾದ ಗಟ್ಟಿ ಮಹಿಳೆಯರ ಸಾಲಿನಲ್ಲಿ ನಿಂತಿದ್ದಾರೆ. – ಬಸವರಾಜ್ ಹೊಂಗಲ್