ಕನಕಪುರ: ಇಂದಿನ ಪುರುಷ ಪ್ರಧಾನ ಸಮಾಜ ದಲ್ಲಿ ಮಹಿಳೆ ಸಮಾಜದ ಎಲ್ಲ ರಂಗದಲ್ಲಿಯೂ ಬೆಳೆದರೂ, ನಮ್ಮನ್ನು ನಿರ್ಲಕ್ಷಿಸುತ್ತಿರುವುದು ದೌರ್ಭಾಗ್ಯವೆಂದು ಉಪನ್ಯಾಸಕಿ ಜ್ಯೋತಿ ವಿಷಾದ ವ್ಯಕ್ತಪಡಿಸಿದರು.
ನಗರಸಭೆ ಆವರಣದಲ್ಲಿ ನಡೆದ ವಿಶ್ವ ಮಹಿಳಾ ದಿನ ಆಚರಣೆ ಕಾರ್ಯಕ್ರದಲ್ಲಿ ಮಾತ ನಾಡಿದ ಅವರು, ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸಬೇಕಾದ ಮಹಿಳೆ ಇಂದು ಉತ್ತಮ ಸಂಬಂಧಗಳನ್ನು ಮರೆಯುತ್ತಿರುವುದು ಸಮಾಜಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದು ಎಚ್ಚರಿಸಿದರು.
ಅವಿಭಕ್ತ ಕುಟುಂಬಗಳಲ್ಲಿ ರಕ್ತ ಸಂಬಂಧ ಗಳನ್ನು ದೂರ ಮಾಡುತ್ತಾ, ಇಡೀ ಸಂಬಂಧಗಳೇ ಶಿಥಿಲವಾಗುತ್ತಾ ಬಂದಿವೆ. ಇದು ನಮ್ಮ ಮುಂದಿನ ಯುವ ಪೀಳಿಗೆಗೆ ಮಾಡುತ್ತಿರುವ ಘೋರ ಅಪರಾಧ ಇದನ್ನು ಪ್ರತಿಯೊಬ್ಬ ಪ್ರಜಾn ವಂತ ಮಹಿಳೆಯು ತಡೆಯದೇ ಹೋದರೆ ಕುಟುಂಬದ ಸಂಬಂಧಗಳೇ ಕಣ್ಮರೆಯಾಗಿ ಹೋಗುವ ಭೀತಿ ಎದುರಾಗಲಿದೆ. ಈ ಅನಿಷ್ಠ ಪದ್ದತಿಯನ್ನು ತಡೆಯಲು ಪ್ರತಿಯೊಬ್ಬ ಮಹಿಳೆಯರೂ ಸಬಲೆಯಾಗಿ ದೇಶದ ಉನ್ನತಿ ಹಾಗೂ ಸಂಸ್ಕೃತಿಯನ್ನು ಗಟ್ಟಿಗೊಳಿಸಲು ಸದಾ ಪ್ರಯತ್ನಿ ಸಬೇಕೆಂದು ಕರೆ ನೀಡಿದರು.
ಮಾಜಿ ನಗರಸಭಾ ಅಧ್ಯಕ್ಷ ಹಾಗೂ ವಕೀಲ ರಾಮಚಂದ್ರ ಮಾತನಾಡಿ, ನಮ್ಮ ದೇಶದ ಹೆಣ್ಣು ಮಕ್ಕಳಿಗೆ ಪೂಜ್ಯ ಸ್ಥಾನವಿದೆ. ಇಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ರಕ್ತ ಸಂಬಂಧಗಳು ಕಡಿದು ಹೋಗುತ್ತಿರುವುದು ಶೋಚನೀಯ ಸಂಗತಿ. ಪ್ರತಿ ಕುಟುಂಬದಲ್ಲೂ ಹೆಣ್ಣಿನ ಜವಾಬ್ದಾರಿ ಹೆಚ್ಚಿದೆ, ಹೆಣ್ಣು ಮನಸ್ಸು ಮಾಡಿದರೆ, ತನ್ನ ಕುಟುಂಬ ಹಾಗೂ ದೇಶವನ್ನು ಮುನ್ನಡೆಸಲು ಕಷ್ಟಸಾಧ್ಯವೆಂದು ತಿಳಿಸಿದರು.
ನಗರಸಭೆ ಸಮುದಾಯ ಸಂಘಟಕ ಬಿ.ನಟರಾಜು, ಲೆಕ್ಕ ಅಧೀಕ್ಷಕ ಶಿವಣ್ಣ, ಪರಿಸರ ಎಂಜಿನಿಯರ್ ಪಾರ್ವತಿ, ಆರೋಗ್ಯ ಶಾಖಾ ಅಧಿಕಾರಿಗಳು, ನಗರಸಭಾ ಸದಸ್ಯರಾದ ಹೇಮ ರಾಜು, ಲಕ್ಷ್ಮಿಗೋವಿಂದಪ್ಪ, ಸ್ಟೂಡಿಯೋ ಚಂದ್ರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.