ಬಾಗಲಕೋಟೆ: ಮಹಿಳೆಯರು ದುರ್ಬಲರು, ಅಬಲೆಯರು ಎಂಬ ಕಾಲ ಇದಲ್ಲ, ಇಂದು ಪುರುಷರಿಗೆ ಸಮಾನಾಗಿ ಅಭಿವೃದ್ಧಿ ಹೊಂದುತ್ತಿದ್ದಾಳೆ ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸ್ತ್ರೀಶಕ್ತಿ ಸಮಾವೇಶ ಹಾಗೂ ಪೋಷಣ್ ಪಕ್ವಾಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಗೆ ಯಾವ ಸಮಾಜ ಹಾಗೂ ಕುಟುಂಬಗಳಲ್ಲಿ ಗೌರವ ಸಿಗುತ್ತದೆಯೋ ಅಲ್ಲಿ ನೆಮ್ಮದಿ, ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಎಷ್ಟೇ ಕಷ್ಟ ಬಂದರೂ ಎದುರಿಸುವ ಶಕ್ತಿ ಮಹಿಳೆಯರಲ್ಲಿದ್ದು, ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗಿರದೇ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಮಹಿಳೆಯರು ತಾವು ಬೆಳೆಯುವ ಮೂಲಕ ಇತರರಿಗೆ ಸ್ಫೂರ್ತಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸರಕಾರ ಮಹಿಳೆ ಪುರುಷರೆನ್ನದೇ ಸಮಾನ ಅವಕಾಶ ಕಲ್ಪಿಸಿದ್ದು, ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಯೋಜನೆ ರೂಪಿಸಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಮಾತನಾಡಿ, ಮಹಿಳೆ ಸಬಲೆಯಾಗಿದ್ದು, ಅವರಿಗೆ ನೀಡಿರುವ ಸಮಾನತೆ, ಸೌಲಭ್ಯ ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ಸರಕಾರ ಮಹಿಳೆಗೆ ಶೇ. 50 ಮೀಸಲಾತಿ ನೀಡಿದೆ. ಮಹಿಳೆಯು ಸಂಕುಚಿತ ಮನೋಭಾವ ಹೊಂದಿದ್ದು, ಅದರಿಂದ ಹೊರಬರಲು ಗ್ರಾಮ ಮಟ್ಟ, ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳುವುದು ಅವಶ್ಯವಾಗಿದೆ ಎಂದು ತಿಳಿಸಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಇಳಕಲ್ಲಿನ ವಿಜಯ ಮಹಾಂತೇಶ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಸುಮಂಗಲಾ ಮೇಟಿ ಮಾತನಾಡಿ, ಪುರುಷರಲ್ಲಿ ಅಂತಕರಣದ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಇಂದಿನ ಮಹಿಳೆಯರು ಶಿಕ್ಷಣವಂತರಾಗುವ ಮೂಲಕ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಮಕ್ಕಳ ಅಭಿವೃದ್ಧಿಗೆ ಹಾಗೂ ಪೌಷ್ಟಿಕಾಂಶ ಹೆಚ್ಚಳಕ್ಕೆ ಇಲಾಖೆ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದರು.
ವಕೀಲರಾದ ಮಳಿಯಮ್ಮ ಕೆಂಚನ್ನವರ ಮಹಿಳೆ ಮತ್ತು ಕಾನೂನು ಹಾಗೂ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ಜಯಶ್ರೀ ಎಮ್ಮಿ ಭ್ರೂಣ ಹತ್ಯೆ ನಿಷೇಧ ಕಾಯ್ದೆ ಹಾಗೂ ಮಹಿಳೆ ಕುರಿತು ಉಪನ್ಯಾಸ ನೀಡಿದರು. ಸಾಧಕ ಮಹಿಳೆಯರು ಹಾಗೂ ಪ್ರಸಕ್ತ ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ತೋರಿದ ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಎ.ಜಿ.ತೋಟದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎ.ಎನ್.ದೇಸಾಯಿ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಜಾನಪದ ಕಲಾವಿದೆ ಗೌರಮ್ಮ ಸಂಕಿನ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಸ್ವಾಗತಿಸಿದರು. ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಆಸ್ಪತ್ರೆಯಲ್ಲಿರುವ ಮಹಿಳಾ ರೋಗಿಗಳಿಗೆ ಸಿಹಿ ನೀಡಿ ಶುಭಾಶಯ ಕೋರಿದರು.
ಸಾಧನೆಗೈದ ಮಹಿಳೆಯರಿಗೆ ಪುರಸ್ಕಾರ : ಕಾಶೀಬಾಯಿ ಭೂತಪ್ಪಗೋಳ (ಜಾನಪದ), ಅನುಸೂಯಾ ಕಾಖಂಡಕಿ (ಕೃಷಿ), ಸರೋಜಾ ಹಾದಿಮನಿ (ಸಾಮಾಜಿಕ), ಯಲ್ಲವ್ವ ರೊಡ್ಡೆಪ್ಪನ್ನವರ (ಜಾನಪದ), ಪ್ರಾಚಿ ಜಿಂಗಾಡಿ (ಸ್ವಯಂ ಉದ್ಯೋಗ), ಪೂಜಾ ಜಿಂಗಾಡಿ (ಸ್ವಯಂ ಉದ್ಯೋಗ), ಪರಿಮಳಾ ಮನಗೂಳಿ (ಪತ್ರಿಕೋದ್ಯಮ), ಅನಿತಾ ಪಾಟೀಲ, (ಕೃಷಿ) ಸುನೀತಾ ಮೇಟಿ (ಜಾನಪದ ಸಾಹಿತ್ಯ), ಸಿಸ್ಟರ್ ಸಿಂತಿಯಾ ಸಿಕ್ವೇರಾ (ಸಾಮಾಜಿಕ ಸೇವೆ), ಅರ್ಚನಾ ದಡ್ಡೇನ್ನವರ (ವೈದ್ಯಕೀಯ), ರಿಯಾನಾ ಮಕಾಂದರ, ವೀಣಾ (ಸ್ವಯಂ ಉದ್ಯೋಗ), ದಾನಮ್ಮಾ ಚಿಚಕಂಡಿ (ಸೈಕ್ಲಿಂಗ್), ಕವಿತಾ ಲಮಾಣಿ, ಹಾಸಿಂಬಿ ಫಕಾಲಿ (ಕ್ರೀಡೆ), ತಾಯಕ್ಕ ಮಾದರ (ಕನ್ನಡ ವ್ಯಾಸಂಗ), ಸವಿತಾ ನಲವಡೆ (ಸೇವೆ), ಹೊನ್ನಕಟ್ಟಿ, ಲಕ್ಷ್ಮೀ ಗೌಡರ (ಸೇವೆ), ರೂಪಶ್ರೀ ಹಂಜಗಿ (ಫೋಟೊಗ್ರಾಫರ್), ಅಸಾಧಾರಣ ಪ್ರತಿಭೆ ತೋರಿದ ಆನಂದ ಜಗದಾಳ, ಪ್ರಗತಿ ಜರಾಳಿ, ವಾಝೀದ್ ಸುತ್ತಾರ (ಕ್ರೀಡೆ), ನಿತ್ಯಾ ಕುಲಕರ್ಣಿ, ಶ್ರೇಯಾ ಶಿರೂರ, ಶಾಲಿನಿ ಪವಾರ (ಶೈಕ್ಷಣಿಕ), ಅಭಿನವ ಕರಡಿ (ಸಾಂಸ್ಕೃತಿಕ-ಜಾನಪದ), ಶ್ರೇಯಾ ಕುಲಕರ್ಣಿ(ನೃತ್ಯ) ಶ್ವೇತಾ ದಾಸರ ಅವರನ್ನು ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸನ್ಮಾನಿಸಿದರು.