Advertisement

ರಾಜಧಾನಿಯಲ್ಲಿ ಮಹಿಳಾ ದರ್ಬಾರ್‌!

01:13 PM Dec 02, 2017 | |



Advertisement

ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ನಗರದ ಮಹಿಳೆಯರು ಇನ್ನುಮುಂದೆ ಯಾವುದೇ ಕಿರಿಕಿರಿ ಅನುಭವಿಸುವ ಪ್ರಮೇಯ ಬಾರದು. ಏಕೆಂದರೆ ಮಹಿಳೆಯರಿಗಾಗಿ ವಿಷೇಷ ಬಸ್ಸು, ಮೆಟ್ರೋನಲ್ಲಿ ಪ್ರತ್ಯೇಕ ಬೋಗಿ ಮುಂತಾದ ಸವಲತ್ತುಗಳನ್ನು ನೀಡಲು ಸರ್ಕಾರ ಮುಂದಾಗಿದೆ.

ರಾಜ್ಯ ಪೊಲೀಸ್‌ ಮಹಾನಿರ್ದೆಶಕ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಯಂತಹ ಉನ್ನತ ಹುದ್ದೆಗಳನ್ನು ಮಹಿಳಾ ಅಧಿಕಾರಿಗಳು ಅಲಂಕರಿಸಿದ ನಂತರ ರಾಜಧಾನಿ ಮಹಿಳೆಯರಿಗೂ “ಲಕ್‌’ ಕುದುರಿದಂತಾಗಿದೆ. ಬಿಎಂಟಿಸಿಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ “ಇಂದಿರಾ ಸಾರಿಗೆ’, ಎಲ್ಲ ಬಸ್‌ಗಳಲ್ಲೂ ಮಹಿಳೆಯರ ಆಸನಕ್ಕೆ “ಪಿಂಕ್‌’ ಹೊದಿಕೆ, ಗಾರ್ಮೆಂಟ್ಸ್‌ ಹಾಗೂ ಕಟ್ಟಡ ಕೆಲಸ ಮಾಡುವ ಮಹಿಳೆಯರಿಗೆ ರಿಯಾಯಿತಿ ದರದ ಮಾಸಿಕ ಪಾಸ್‌, ಮೆಟ್ರೋದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೋಗಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಹಾಗೂ ಬಿಎಂಆರ್‌ಸಿಎಲ್‌ ಮುಂದಾಗಿವೆ. ಪರಿಣಾಮ, ರಾಜಧಾನಿಯಲ್ಲಿ “ಮಹಿಳಾ ದರ್ಬಾರ್‌’ಪ್ರಾರಂಭವಾಗಲಿದೆ. 

ಮೆಟ್ರೋದಲ್ಲಿ ದಟ್ಟಣೆ ಹೆಚ್ಚಾಗಿದ್ದು, ಮಹಿಳೆಯರು ಪ್ರಯಾಣಿಸುವುದು ಕಷ್ಟವಾಗುತ್ತಿದೆ. ಜತೆಗೆ ಬಿಎಂಟಿಸಿಯಲ್ಲೂ ಮಹಿಳೆಯರಿಗೆ ಮೀಸಲಿಟ್ಟ ಆಸನಗಳನ್ನೂ ಪುರುಷರು ಆಕ್ರಮಿಸುತ್ತಾರೆ ಎಂಬಿತ್ಯಾದಿ ದೂರುಗಳ ಹಿನ್ನೆಲೆಯಲ್ಲಿ ಸದ್ಯದಲ್ಲೇ ಮಹಿಳೆಯರಿಗಾಗಿ ಪ್ರತ್ಯೇಕ ಬಸ್‌, ಪ್ರತ್ಯೇಕ ಬೋಗಿ ಬರಲಿದೆ. ಮಹಿಳೆಯರ ಭದ್ರತೆ ಸುರಕ್ಷತೆಯಷ್ಟೇ ಇದರ ಉದ್ದೇಶ.

ಇದರ ಜೊತೆಗೇ, ಅಷ್ಟೇ ಆಲ್ಲ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಚಾಲಕಿಯಾಗಿ ಕೆಲಸ ಮಾಡಲು ಬಯಸುವ ಮಹಿಳೆಯರಿಗೆ ಇಲಾಖೆ ವತಿಯಿಂದಲೇ ಡ್ರೈವಿಂಗ್‌ ಲೈಸೆನ್ಸ್‌ ಕೊಡಿಸಿ ಚಾಲನೆ ತರಬೇತಿಯನ್ನೂ ಕೊಟ್ಟು ಉದ್ಯೋಗ ಕೊಡುವ ನಿಟ್ಟಿನಲ್ಲೂ ಯೋಜನೆ ರೂಪಿಸಲಾಗಿದೆ. ಇಂದಿರಾ ಬಸ್‌ಗಳಿಗೆ ಮಹಿಳೆಯರನ್ನೇ ಚಾಲಕರನ್ನಾಗಿ ನೇಮಿಸುವುದು ಇದರ ಉದ್ದೇಶ. ಈ ಯೋಜನೆಯಿಂದಾಗಿ ಕನಿಷ್ಠ 1 ಸಾವಿರ ಮಹಿಳೆಯರಿಗೆ ಬಿಎಂಟಿಸಿಯಲ್ಲಿ ನೌಕರಿ ಸಿಗುವ ಅಂದಾಜಿದೆ. 

Advertisement

ರಿಯಾಯಿತಿ ಬಸ್‌ ಪಾಸ್‌ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಉದ್ಯೋಗ ನೀಡಿರುವ ಗಾರ್ಮೆಂಟ್ಸ್‌ ಕಾರ್ಖಾನೆ ಮಾಲೀಕರ ಜತೆ ಸಾರಿಗೆ ಸಚಿವರು ಈಗಾಗಲೇ ಚರ್ಚಿಸಿದ್ದು ಶೇ.50 ರಷ್ಟು ರಿಯಾಯಿತಿ ದರದಲ್ಲಿ ಬಸ್‌ ಪಾಸ್‌ ಒದಗಿಸಲು ತೀರ್ಮಾನಿಸಲಾಗಿದೆ.ಇದೇ ಕಾರಣಕ್ಕಾಗಿ ಆಧಿಕಾರಿಗಳ ಜತೆ ಚರ್ಚೆ ನಡೆಸುತ್ತಿದ್ದು,

ಹೊಸ ವರ್ಷಕ್ಕೆ ಕೊಡುಗೆಯಾಗಿ ಬಸ್‌ ಪಾಸ್‌ ಭಾಗ್ಯ ಸಿಗಲಿದೆ. ಇಂದಿರಾ ಬಸ್‌ ಸೇವೆಯಡಿ ಉತ್ತಮ ಸ್ಥಿತಿಯಲ್ಲಿರುವ ಬಸ್‌ಗಳನ್ನೇ ಅಗತ್ಯ ಇರುವ ಕಡೆ ಸಂಚಾರಕ್ಕೆ ಬಿಡಲು ತೀರ್ಮಾನಿಸಲಾಗಿದೆ. ಆ ಬಸ್‌ಗಳಲ್ಲಿ ಇತರೆ ಮಹಿಳೆಯರಿಗೂ ಸ್ವಲ್ಪ ಮಟ್ಟಿನ ರಿಯಾಯಿತಿ ಸಿಗಲಿರುವುದು ವಿಶೇಷ. ಇದರಿಂದ ಮಹಿಳೆಯರು ಓಲಾ , ಊಬರ್‌ ಕ್ಯಾಬ್‌ ಅಥವಾ ಸ್ವಂತ ವಾಹನದಲ್ಲಿ ಪ್ರಯಾಣಿಸುವ ಕಿರಿಕಿರಿ ತಪ್ಪಲಿದೆ. 

ಈಗಾಗಲೇ ಬಿಎಂಟಿಸಿ ವತಿಯಿಂದ ವಿದ್ಯಾರ್ಥಿಗಳು, ಹಿರಿಯ ನಾಯಕರು, ಅಂಗವಿಕಲರಿಗೆ ರಿಯಾಯಿತಿ ಬಸ್‌ ಪಾಸ್‌ ನೀಡಲಾಗುತ್ತಿದೆ. ಆದೇ ರೀತಿ ಮಹಿಳೆಯರಿಗೆ ಅದರಲ್ಲೂ ಗಾರ್ಮೆಂಟ್ಸ್‌ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ಬಸ್‌ ಪಾಸ್‌ ನೀಡುವುದು ನಮ್ಮ  ಉದ್ದೇಶ ಎನ್ನುತ್ತಾರೆ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ. ಬಸ್‌ಗಳಲ್ಲಿ ಮಹಿಳೆಯರ ಸೀಟು ಆಕ್ರಮಿಸಿ ಸಂಘರ್ಷಕ್ಕೆ ಕಾರಣವಾಗುವ ಸಂದರ್ಭಗಳೂ ಬರುತ್ತವೆ.

ಹೀಗಾಗಿ, ಅದನ್ನು ತಪ್ಪಿಸಲು ಪಿಂಕ್‌ ಸೀಟ್‌ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಚಾಲ್ತಿಯಲ್ಲಿರುವ ಬಸ್‌ಗಳಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಆಸನಗಳು ಪಿಂಕ್‌ ಸೀಟ್‌ಗಳಾಗಿ ಪರಿವರ್ತನೆಯಾಗಲಿವೆ. ಜತೆಗೆ ಹೊಸದಾಗಿ ಖರೀದಿಸಲಿರುವ ಬಸ್‌ಗಳಲ್ಲಿ ಮ್ಯಾನುಫ್ಯಾಕ್ಚರ್‌ ಹಂತದಲ್ಲೇ ಪಿಂಕ್‌ ಕವರ್‌ ಸಮೇತ ಬರಲು ಸೂಚನೆ ನೀಡಲಾಗಿದೆ ಎಂದೂ ಅವರು ವಿವರಿಸುತ್ತಾರೆ. 

ಉತ್ತಮ ಸೇವೆಯ ಗುರಿ
ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಕಟ್ಟಡ ಕೂಲಿ ಕೆಲಸ ಮಾಡುವ ಮಹಿಳೆಯರು ದಿನನಿತ್ಯ ಬಸ್‌ಗಳಲ್ಲಿ ಪ್ರಯಾಣಿಸಬೇಕಾಗುತ್ತದೆ. ಆವರಿಗೆ ಕೂಲಿ ಹಾಗೂ ವೇತನವೂ ಕಡಿಮೆ ಇರುತ್ತದೆ. ಹೀಗಾಗಿ, ಅವರಿಗೆ ರಿಯಾಯಿತಿ ದರದಲ್ಲಿ ಪಾಸ್‌ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ರಾಜಧಾನಿಯಲ್ಲಿ ಮಹಿಳೆಯರಿಗೆ ಉತ್ತಮ ಸೇವೆ ದೊರಕುವಂತಾಗಬೇಕು. ಅದು ಬಸ್‌ ಇರಲಿ, ಮೆಟ್ರೋ ಇರಲಿ, ಮಹಿಳೆಯರು ಮತ್ತು ಮಕ್ಕಳು ನೆಮ್ಮದಿಯಿಂದ ಸಂಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next