ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇನ್ಮುಂದೆ ಮಹಿಳಾ ಮಣಿಗಳದ್ದೇ ದರ್ಬಾರು. ಕಾರಣ ಮೇಯರ್ ಮತ್ತು ಉಪ ಮೇಯರ್ ಇಬ್ಬರೂ ಮಹಿಳೆಯರೇ. ಎರಡೂ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿರುವುದು ಪಾಲಿಕೆ ಇತಿಹಾಸದಲ್ಲಿ ಇದು ಎರಡನೇ ಬಾರಿ.
ಎರಡು ದಶಕಗಳ ಹಿಂದೆ ಜನತಾದಳದಿಂದ ಮಹಿಳೆಯರೇ ಮೇಯರ್ ಮತ್ತು ಉಪ ಮೇಯರ್ ಆಗಿದ್ದರು. ಆದರೆ ಬಿಬಿಎಂಪಿ ರಚನೆಯಾದ ನಂತರ ಇದೇ ಮೊದಲ ಬಾರಿ ಎರಡೂ ಸ್ಥಾನಗಳನ್ನು ಮಹಿಳೆಯರು ಅಲಂಕರಿಸಿದ್ದಾರೆ. ಹಾಗೇ ಪಾಲಿಕೆಯ 198 ಸದಸ್ಯರ ಪೈಕಿ 101 ಮಂದಿ ಮಹಿಳಾಮಣಿಗಳಿದ್ದಾರೆ.
1996ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಮೇಯರ್ ಮತ್ತು ಉಪ ಮೇಯರ್ ಮಹಿಳೆಯರಾಗಿದ್ದರು. ಆ ಸಂದರ್ಭದಲ್ಲಿ ಯಾವುದೇ ಮೀಸಲಾತಿ ಇರಲಿಲ್ಲ. ಆದರೆ, ಆಯಾ ಸಂದರ್ಭಗಳಿಗೆ ಅನುಗುಣವಾಗಿ ರಾಜಕೀಯ ಲೆಕ್ಕಾಚಾರದ ಮೇಲೆ ಆಯ್ಕೆ ಮಾಡಲಾಗುತ್ತಿತ್ತು.
ಅದರಂತೆ ಅಂದು ಮೇಯರ್ ಹುದ್ದೆಗೆ ಒಕ್ಕಲಿಗ ಸಮುದಾಯದ ಪದ್ಮಾವತಿ ಗಂಗಾಧರಗೌಡ ಮತ್ತು ಪರಿಶಿಷ್ಟ ಜಾತಿಯ ವೆಂಕಟಲಕ್ಷ್ಮೀ ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು. ಇದಾದ ನಂತರ 2000ದಿಂದ ಈಚೆಗೆ ನ್ಯಾಯಾಲಯದ ಸೂಚನೆ ಮೇರೆಗೆ ಮೀಸಲಾತಿ ಅನ್ವಯವಾಗಿದೆ.
ಅದರಂತೆ ಪ್ರತಿ ವರ್ಷ ಮೇಯರ್ ಮತ್ತು ಉಪ ಮೇಯರ್ ಸ್ಥಾನದ ಮೀಸಲಾತಿ ಬದಲಾಗುತ್ತದೆ. ಆದರೆ, ಈ ಅವಧಿಯಲ್ಲಿ ಒಮ್ಮೆಯೂ ಎರಡೂ ಸ್ಥಾನಗಳಿಗೆ ಮಹಿಳೆಯರು ಆಯ್ಕೆಯಾಗಿರಲಿಲ್ಲ. ಈ ಬಾರಿ ಮೇಯರ್ ಹುದ್ದೆ ಮಹಿಳಾ ಸಾಮಾನ್ಯ ಮತ್ತು ಉಪ ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿ ಮೂರೂ ಪಕ್ಷಗಳಿಂದ ಮಹಿಳೆಯರನ್ನೇ ಕಣಕ್ಕಿಳಿಸಲಾಗಿತ್ತು. ಶುಕ್ರವಾರ ನಡೆದ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಗಂಗಾಂಬಿಕೆ ಮೇಯರ್ ಮತ್ತು ರಮೀಳಾ ಉಮಾಶಂಕರ್ ಉಪ ಮೇಯರ್ ಆದರು.