ಜೈಪುರ: ವನಿತಾ ಟಿ20 ಚಾಲೆಂಜ್ ಸರಣಿಯ ಗುರುವಾರದ ಮುಖಾಮುಖೀಯಲ್ಲಿ ಸೂಪರ್‌ನೋವಾ ತಂಡದ ಜೆಮಿಮಾ ಸೂಪರ್ ಪ್ರದರ್ಶನವೊಂದನ್ನು ನೀಡಿದ್ದಾರೆ. ಇದರೊಂದಿಗೆ ವೆಲೊ ಸಿಟಿ ತಂಡದ ವಿರುದ್ಧ ಸೂಪರ್‌ನೋವಾ 3 ವಿಕೆಟಿಗೆ 142 ರನ್ ಪೇರಿಸಿದೆ.
ವನ್‌ಡೌನ್‌ನಲ್ಲಿ ಬ್ಯಾಟ್ ಹಿಡಿದು ಬಂದ ಜೆಮಿಮಾ ರೋಡ್ರಿಗಸ್, ವೆಲೋಸಿಟಿ ಬೌಲರ್‌ಗಳ ಮೇಲೆ ಸವಾರಿ ಮಾಡಿ ಅಜೇಯ 77 ರನ್ ಬಾರಿಸಿದರು. 48 ಎಸೆತಗಳ ಈ ಇನ್ನಿಂಗ್ಸ್ ನಲ್ಲಿ 10 ಬೌಂಡರಿ ಹಾಗೂ ಇನ್ನಿಂಗ್ಸಿನ ಏಕೈಕ ಸಿಕ್ಸರ್ ಸೇರಿತ್ತು.
ಸೂಪರ್‌ನೋವಾ ತಂಡದ ಆರಂಭ ಸಾಮಾನ್ಯ ಮಟ್ಟದಲ್ಲಿತ್ತು. ಪ್ರಿಯಾ ಪೂನಿಯಾ ಮತ್ತು ಚಾಮರಿ ಅತ್ತಪಟ್ಟು 4.4 ಓವರ್‌ಗಳಿಂದ 29 ರನ್ ಒಟ್ಟುಗೂಡಿಸಿದರು. ಎಸೆತಕ್ಕೊಂದರಂತೆ 16 ರನ್ ಮಾಡಿದ ಪ್ರಿಯಾ ವಿಕೆಟ್ ಕೀಳುವ ಮೂಲಕ ಶಿಖಾ ಪಾಂಡೆ ಮೊದಲ ಯಶಸ್ಸು ತಂದಿತ್ತರು.
ದ್ವಿತೀಯ ವಿಕೆಟಿಗೆ ಜತೆಗೂಡಿದ ಚಾಮರಿ ಅತ್ತಪಟ್ಟು-ಜೆಮಿಮಾ ರೋಡ್ರಿಗಸ್ 13ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು 55 ರನ್ ಪೇರಿಸಿದರು. ಚಾಮರಿ ಗಳಿಕೆ 38 ಎಸೆತಗಳಿಂದ 31 ರನ್ (5 ಬೌಂಡರಿ).
ಸೋಫಿ ಡಿವೈನ್ (9) ವಿಕೆಟ್ ಬೇಗನೇ ಬಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಒಂದು ರನ್ ಮಾಡಿ ಔಟಾಗದೆ ಉಳಿದರು. ವೆಲೋಸಿಟಿ ಪರ ಅಮೇಲಿಯಾ ಕೆರ್ 21 ರನ್ ವೆಚ್ಚದಲ್ಲಿ 2 ವಿಕೆಟ್ ಕಿತ್ತರು.