Advertisement

ಬೋಗೂರ ಮತ್ತು ಮಾದನಭಾವಿ ಗ್ರಾಮಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಭೇಟಿ

02:45 PM Aug 13, 2020 | keerthan |

ಧಾರವಾಡ: ತಾಲೂಕಿನ ಬೋಗೂರ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ  ಬಾಲಕಿಯ ಮನೆಗೆ ಹಾಗೂ ಮಾದನಭಾವಿ ಪ್ರಕರಣದ ಸಂತ್ರಸ್ತರ ಮನೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಇಂದು ಭೇಟಿ ನೀಡಿ ಬಾಲಕಿಯ ಕುಟುಂಬದ ಅಳಲು ಆಲಿಸಿ, ಆತ್ಮಸ್ಥೈರ್ಯ ತುಂಬಿದರು.

Advertisement

ಬೋಗೂರಿನಲ್ಲಿ ಮೃತ ಬಾಲಕಿಯ ತಾಯಿ ಲಲಿತಾ, ತಂದೆ ಪೂರ್ಣಾನಂದ ಕಂಬಿಮಠ ಅವರು ಮಗಳ ದುಸ್ಥಿತಿ ಮತ್ತು ಆತ್ಮಹತ್ಯೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದರು.

ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಮಾತನಾಡಿ,  ಧಾರವಾಡ ತಾಲೂಕಿನ ಬೋಗೂರ ಮತ್ತು ಮಾದನಭಾವಿ ಗ್ರಾಮಗಳಲ್ಲಿ ಪ್ರತ್ಯೇಕವಾಗಿ ನಡೆದಿರುವ ಎರಡು ವಿಕೃತ ಕೃತ್ಯಗಳಲ್ಲಿ ನೊಂದ ಕುಟುಂಬಗಳೊಂದಿಗೆ ಆಯೋಗ, ಸರ್ಕಾರ ಇದೆ. ಸೂಕ್ತ ಕಾನೂನು ನೆರವು, ಆಪ್ತ ಸಮಾಲೋಚನೆಯ ಮೂಲಕ ಆತ್ಮಸ್ಥೈರ್ಯ ತುಂಬಿ ನ್ಯಾಯ ಒದಗಿಸಲಾಗುವುದು. ಕುಟುಂಬದ ಸದಸ್ಯರು ಧೃತಿಗೆಡಬಾರದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಮಾತನಾಡಿ, ನೊಂದ ಕುಟುಂಬದ ಭದ್ರತೆಯ ಜವಾಬ್ದಾರಿ ಪೊಲೀಸ್ ಇಲಾಖೆಗೆ ಸೇರಿದೆ, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ. ಮಾದನಭಾವಿ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಸಹ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.ಇನ್ನುಳಿದ ಆರೋಪಿಗಳನ್ನು ಕೂಡಲೇ ವಶಕ್ಕೆ ಪಡೆಯಲಾಗುವುದು ಎಂದರು.

ಬೋಗೂರಿನ ಬಾಲಕಿಯ ಕುಟುಂಬಕ್ಕೆ ತುರ್ತು ವೆಚ್ಚವಾಗಿ 10 ಸಾವಿರ ರೂಪಾಯಿಗಳ ನೆರವಿನ ಚೆಕ್ ಹಸ್ತಾಂತರಿಸಲಾಯಿತು. ಮೃತ ಬಾಲಕಿಯ ಪಾಲಕರು ಮತ್ತು ಕುಟುಂಬದ ಸದಸ್ಯರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು.

Advertisement

ಮಾಜಿ ಶಾಸಕಿ ಸೀಮಾ ಮಸೂತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ್, ಡಿವೈಎಸ್ ಪಿ ರವಿ ನಾಯಕ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲಲಿತಾ, ರಾಜೇಶ್ವರಿ ಅಳಗವಾಡಿ, ಸಿಪಿಐ ಎಸ್.ಸಿ.ಪಾಟೀಲ, ಪಿಎಸ್ ಐ ಪ್ರಸಾದ ಫಣಿಕರ್ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next