Advertisement

ಸಕಲ ಸೌಲಭ್ಯದತ್ತ ಮಹಿಳಾ ಕಾಲೇಜು

03:07 PM Oct 14, 2019 | Team Udayavani |

ಕೋಲಾರ: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ನಗರದ ಸರ್ಕಾರಿ ಮಹಿಳಾ ಕಾಲೇಜು ದಾನಿಗಳ ನೆರವಿನಿಂದ ಸಕಲ ಸೌಲಭ್ಯ ಹೊಂದುತ್ತಿದ್ದು, ಇತರೆ ಕಾಲೇಜಿಗೆ ಮಾದರಿಯಾಗಿದೆ.

Advertisement

3423 ವಿದ್ಯಾರ್ಥಿನಿಯರನ್ನು ಒಳಗೊಂಡ ದೊಡ್ಡ ಕಾಲೇಜಿನ ಅಧಿ ಕಾರ ವಹಿಸಿಕೊಂಡ ಪ್ರಾಂಶುಪಾಲ ಫ್ರೋ.ರಾಜೇಂದ್ರ, ಒಂದೂವರೆ ವರ್ಷದಲ್ಲಿ ದಾನಿಗಳ ನೆರವಿನಿಂದ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ಕಾಲೇಜಿನಲ್ಲಿ ಕಲಾ, ವಿಜ್ಞಾನ, ವಾಣಿಜ್ಯ, ಬಿಬಿಎ, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗ, ವಾಣಿಜ್ಯ ವಿಭಾಗಗಳ ಜೊತೆಗೆ ಇದೀಗ ಬಿಸಿಎ ಮಂಜೂರಾಗಿದ್ದು, ಅನುಮೋದನೆಗೆ ಕಾಯಲಾಗುತ್ತಿದೆ.

ಸೌಲಭ್ಯಗಳ ವೃದ್ಧಿಗೆ ಕ್ರಮ: ಕುಡಿಯುವ ನೀರು, ಶೌಚಾಲಯ, ಕನಿಷ್ಠ ಸೌಲಭ್ಯ ಇಲ್ಲದೇ ಸೊರಗಿದ್ದ ಕಾಲೇಜಿಗೆ ಹೊಸ ರೂಪ ನೀಡಲಾಗುತ್ತಿದೆ. ವಿವಿಧ ಕಂಪನಿಗಳು, ದಾನಿಗಳ ನೆರವಿನಿಂದ ಕಾಲೇಜಿಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಸುಸಜ್ಜಿತ ಆಡಿಟೋರಿಯಂ: ಸರ್ಕಾರಿ ಕಾಲೇಜು ಎಂದರೆ ಮೂಗು ಮುರಿಯುವವರೇ ಹೆಚ್ಚಿರುವ ಸಂದರ್ಭದಲ್ಲೂ ಕಾಲೇಜಿನ ದಾಖಲಾತಿ 3500ಕ್ಕೆ ಏರಿಕೆಯಾಗಿದೆ.

ಹೋಂಡಾ ಮೋಟಾರ್ ಕಂಪನಿಯ ಸಹಕಾರ ಪಡೆದು 85 ಲಕ್ಷ ರೂ.ನಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಕೂರಬಹುದಾದ ಸಭಾಂಗಣ ನಿರ್ಮಾಣ ಅಂತಿಮ ಹಂತದಲ್ಲಿದೆ. ಇದರಿಂದ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳ ವೇದಿಕೆ ನಿರ್ಮಿಸಲು ತಗಲುತ್ತಿದ್ದ ವಾರ್ಷಿಕ 1 ಲಕ್ಷ ರೂ. ಉಳಿತಾಯವಾಗಿದೆ. ಹೋಂಡಾ ಸ್ಕೂಟರ್ ಆ್ಯಂಡ್‌ ಮೋಟಾರ್‌ ಸೈಕಲ್ಸ್‌ ಕಂಪನಿ 14 ಸುಸಜ್ಜಿತ ಶೌಚಾಲಯ. ಜೊತೆಗೆ 500 ಲೀಟರ್‌ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ವಿದ್ಯಾರ್ಥಿನಿಯರಿಗೆ ಪ್ರತಿನಿತ್ಯ ಶುದ್ಧ ನೀರು ಸಿಗುವಂತೆ ಮಾಡಲಾಗಿದೆ.

ಕಾಲೇಜಿಗೆ ದಾನಿಗಳ ನೆರವು: ನಗರದ ನಾಗರಾಜ ಸ್ಟೋರ್ ಅವರ ನೆರವು ಪಡೆದು ಗ್ರಂಥಾಲಯಕ್ಕೆ ಹೊಂದಿಕೊಂಡಂತೆ ಸುಸಜ್ಜಿತ ರೀಡಿಂಗ್‌ ರೂಂ ನಿರ್ಮಿಸಲಾಗಿದೆ. ಅದೇ ರೀತಿ ಸತ್ಯನಾರಾಯಣ ಜ್ಯುವೆಲರ್ನಿಂದ ಕ್ರೀಡಾ ಚಟುವಟಿಕೆ ಪ್ರೋತ್ಸಾಹಿಸಲು ಸುಸಜ್ಜಿತ ಜಿಮ್‌ ಕೊಠಡಿ ನವೀಕರಿಸಲಾಗಿದೆ. ನಗರದ ನ್ಪೋಕನ್‌ ಇಂಗ್ಲಿಷ್‌ ಅಕಾಡೆಮಿಯಿದ ಕಾಲೇಜಿನ ಕ್ಯಾಂಪಸ್‌ನಲ್ಲಿ ಆಕರ್ಷಕ ಸಸ್ಯೋದ್ಯಾನ, ಆರ್‌ಯುಎಸ್‌ಎ ಕಂಪನಿಯ ಆರ್ಥಿಕ ನೆರವಿನಿಂದ 2 ಸುಸಜ್ಜಿತ ಪ್ರಯೋಗಾಲಯ, 4 ಕೊಠಡಿ ನಿರ್ಮಿಸಿ ವಿದ್ಯಾರ್ಥಿನಿಯರ ಉಪಯೋಗಕ್ಕೆ ಒದಗಿಸಲಾಗಿದೆ.

Advertisement

ಆರ್ಥಿಕ ನೆರವು ಲಭ್ಯ: ಅಭಿವೃದ್ಧಿಗೆ ಮಾತ್ರವಲ್ಲ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೂ ದಾನಿಗಳಿಂದ ಆರ್ಥಿಕ ನೆರವು ಸಿಗುತ್ತಿದೆ. ಮಹಿಂದ್ರ ಫೈನಾನ್ಸ್‌ ಲಿ.ನವರು 30 ಪದವಿ ವಿದ್ಯಾರ್ಥಿನಿಯರಿಗೆ ತಲಾ 10 ಸಾವಿರ ರೂ., 15 ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ತಲಾ 25 ಸಾವಿರ ರೂ. ವೇತನ ನೀಡಿದ್ದಾರೆ. ಲಯನ್ಸ್‌ ಕ್ಲಬ್‌ ನೆರವಿನಿಂದ ಸ್ಯಾನಿಟರಿ ಪ್ಯಾಡ್‌ ಬರ್ನಿಂಗ್

ಯಂತ್ರ, ಪವರ್‌ ಗ್ರಿಡ್‌ ಸಂಸ್ಥೆ ನೆರವಿನಿಂದ ಸ್ಯಾನಿಟರಿ ಪ್ಯಾಡ್‌ ವೆಂಡಿಂಗ್‌ ಮಿಷನ್‌, ಪ್ಲಾಸ್ಟಿಕ್‌, ಕಸಮುಕ್ತ ಕ್ಯಾಂಪಾಸ್‌ ನಿರ್ಮಾಣ, ಅರಣ್ಯ ಇಲಾಖೆ ನೆರವಿನಿಂದ ಸಸಿ ನೆಟ್ಟು ಹಸಿರಾಗಿಸಲು ಪ್ರಯತ್ನ ನಡೆದಿದೆ.

ಕ್ರೀಡೆಗಳಲ್ಲೂ ಕಾಲೇಜು ಪ್ರಥಮ: ಸರ್ಕಾರಿ ಮಹಿಳಾ ಕಾಲೇಜು ಶೈಕ್ಷಣಿಕವಾಗಿ ಮಾತ್ರವಲ್ಲ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತನ್ನ ಛಾಪು ಮೂಡಿಸಿದೆ. ಕಾಲೇಜಿನ ವಿದ್ಯಾರ್ಥಿನಿಯರು ಅಂತರ ವಿವಿ ಹಂತದ ಕ್ರೀಡಾಕೂಟದಲ್ಲೂ ಭಾಗಿಯಾಗಿ ಸಾಧನೆ ಮಾಡಿದ್ದಾರೆ, ಕುಸ್ತಿಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗುವ ಮೂಲಕ ಜಿಲ್ಲೆಯ ಘನತೆ ಎತ್ತಿಹಿಡಿದಿದ್ದಾರೆ. ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಅಖೀಲ ಭಾರತ ವಿಶ್ವವಿದ್ಯಾಲಯ ಹಂತದಲ್ಲೂ ಕಾಲೇಜಿನ ವಿದ್ಯಾರ್ಥಿನಿಯರು ಸಾಧನೆ ಮಾಡಿದ್ದು, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲೂ ನಾವು ಯಾರಿಗೂ ಕಡಿಮೆಯಿಲ್ಲ ಎಂದು ಸಾ ಧಿಸಿ ತೋರಿಸಿದ್ದಾರೆ.

ಅಭಿವೃದ್ಧಿಗೆ ಸಹಕಾರ: ಕಾಲೇಜಿನ ಅಭಿವೃದ್ಧಿಗೆ ಸಹಕಾರ ನೀಡಿ ಬೆಂಬಲವಾಗಿ ನಿಂತ ಶಾಸಕ ಕೆ.ಶ್ರೀನಿವಾಸಗೌಡರು, ಕಾರ್ಯಾಧ್ಯಕ್ಷ ಪಂಡಿತ್‌ ಮುನಿವೆಂಕಟಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲ ರಾಜೇಂದ್ರ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next