ಹೊಸದಿಲ್ಲಿ: ಕೊರಿಯಾದಲ್ಲಿ ಮೇ 13ರಿಂದ ಆರಂಭವಾಗಲಿರುವ ವನಿತಾ “ಏಶ್ಯನ್ ಚಾಂಪಿಯನ್ಸ್ ಟ್ರೋಫಿ’ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಅನುಭವಿ ಡಿಫೆಂಡರ್ ಸುನಿತಾ ಲಾಕ್ರಾ ಅವರಿಗೆ ಲಭಿಸಿದೆ. ನಾಯಕಿ ರಾಣಿ ರಾಮ್‌ಪಾಲ್ ಅವರಿಗೆ ವಿಶ್ರಾಂತಿ ನೀಡಿದ್ದರಿಂದ ಸುನಿತಾ ಅವರಿಗೆ ತಂಡದ ನಾಯಕತ್ವ ವಹಿಸಲಾಯಿತು. ಗೋಲ್‌ಕೀಪರ್ ಸವಿತಾ ಉಪನಾಯಕಿ ಆಗಿದ್ದಾರೆ. 18 ಸದಸ್ಯರ ತಂಡವನ್ನು ಬುಧವಾರ ಪ್ರಕಟಿಸಲಾಯಿತು.
ಕಳೆದ ಗೋಲ್ಡ್‌ಕೋಸ್ಟ್ ಗೇಮ್ಸ್ ಹಾಕಿ ಕೂಟದಲ್ಲಿ ಭಾರತದ ವನಿತೆಯರು ಪದಕವಿಲ್ಲದೆ ಮರಳಿದರೂ “ಏಶ್ಯನ್ ಚಾಂಪಿಯನ್ಸ್ ಟ್ರೋಫಿ’ ಯಲ್ಲಿ ಭಾರತ ಹಾಲಿ ಚಾಂಪಿ ಯನ್ ಎಂಬುದನ್ನು ಮರೆಯುವಂತಿಲ್ಲ. 2016ರ ಫೈನಲ್‌ನಲ್ಲಿ ಚೀನವನ್ನು ಮಣಿಸುವ ಮೂಲಕ ಭಾರತ ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು.
ಭಾರತ ತನ್ನ ಮೊದಲ ಪಂದ್ಯವನ್ನು ಮೇ 13ರಂದು ಜಪಾನ್ ವಿರುದ್ಧ ಆಡಲಿದೆ. ವನಿತಾ ತಂಡದ ನೂತನ ಕೋಚ್ ಆಗಿರುವ ಹಾಲೆಂಡಿನ ಸೋರ್ಡ್ ಮರಿನ್ ಪಾಲಿಗೆ ಇದು ಮೊದಲ “ಟೆಸ್ಟ್’ ಆಗಲಿದೆ.
“ಗೇಮ್ಸ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ ಸೋತದ್ದು ಬಹಳ ನೋವಿನ ಸಂಗತಿ. ಈಗಿನ ತಂಡ ಹೆಚ್ಚಿನ ಅನುಭವದಿಂದ ಕೂಡಿದೆ. ಏಶ್ಯನ್ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಗರಿಷ್ಠ ಪ್ರಯತ್ನ ಸಾಗಲಿದೆ’ ಎಂದು ನೂತನ ನಾಯಕಿ ಸುನಿತಾ ಲಾಕ್ರಾ ಪ್ರತಿಕ್ರಿಯಿಸಿದ್ದಾರೆ.
ಭಾರತ ತಂಡ
ಗೋಲ್‌ಕೀಪರ್: ಸವಿತಾ, ಸ್ವಾತಿ.
ಡಿಫೆಂಡರ್: ದೀಪಿಕಾ, ಸುನಿತಾ ಲಾಕ್ರಾ (ನಾಯಕಿ), ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ಸುಮನ್ ದೇವಿ ತೌದಾಮ್.
ಮಿಡ್ ಫೀಲ್ಡರ್: ಮೋನಿಕಾ, ನಮಿತಾ ಟೊಪ್ಪೊ, ನಿಕ್ಕಿ ಪ್ರಧಾನ್, ನೇಹಾ ಗೋಯೆಲ್, ಲಿಲಿಮಾ ಮಿಂಜ್, ನವಜೋತ್ ಕೌರ್, ಉದಿತಾ.
ಫಾರ್ವರ್ಡ್ಸ್: ವಂದನಾ ಕಟಾರಿಯ, ಲಾಲ್ರೆಮಿಯಾಮಿ, ನವನೀತ್ ಕೌರ್, ಅನುಪಾ ಬಾರ್ಲಾ.