Advertisement
ಬಾಂಗ್ಲಾದೇಶ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗಗಳೆರಡರಲ್ಲೂ ಭಾರತವನ್ನು ಮೀರಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 7 ವಿಕೆಟಿಗೆ 141 ರನ್ ಗಳಿಸಿದರೆ, ಬಾಂಗ್ಲಾ 19.4 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 142 ರನ್ ಬಾರಿಸಿ ಗೆದ್ದು ಬಂದಿತು. ಇದು ಭಾರತದ ವಿರುದ್ಧ ಬಾಂಗ್ಲಾ ಸಾಧಿಸಿದ ಮೊದಲ ಟಿ20 ಗೆಲುವು. ಭಾರತ, ಶ್ರೀಲಂಕಾ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ತಂಡಗಳು 3 ಪಂದ್ಯಗಳಲ್ಲಿ 2 ಜಯ ಹಾಗೂ ಒಂದು ಸೋಲಿನೊಂದಿಗೆ 4 ಅಂಕ ಹೊಂದಿವೆ. ರನ್‌ರೇಟ್‌ನಲ್ಲಿ ಮುಂದಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ರುಮಾನಾ ಅಹ್ಮದ್ ಅವರ ಆಲ್‌ರೌಂಡ್ ಪ್ರದರ್ಶನ ಹಾಗೂ ಫರ್ಗಾನಾ ಹಕ್ ಅವರ ಅಜೇಯ ಅರ್ಧ ಶತಕ ಬಾಂಗ್ಲಾ ಜಯದಲ್ಲಿ ಮಹತ್ವದ ಪಾತ್ರ ವಹಿಸಿತು. ಗೂಗ್ಲಿ ಬೌಲಿಂಗ್ ದಾಳಿಯ ವೇಳೆ 21ಕ್ಕೆ 3 ವಿಕೆಟ್ ಉರುಳಿಸಿದ ರುಮಾನಾ, ಬ್ಯಾಟಿಂಗ್ ವೇಳೆ 42 ರನ್ ಬಾರಿಸಿ ಅಜೇಯರಾಗಿ ಉಳಿದರು. 34 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್ 6 ಬೌಂಡರಿಗಳನ್ನು ಒಳಗೊಂಡಿತ್ತು. ಈ ಪಂದ್ಯಕ್ಕಾಗಿ ಭಾರತ ಪೂರ್ಣ ಸಾಮರ್ಥ್ಯದ ತಂಡವನ್ನೇ ಕಣಕ್ಕಿಳಿಸಿತ್ತು. ಸ್ಮತಿ ಮಂಧನಾ (2) ಅವರನ್ನು ಬೇಗನೇ ಕಳೆದುಕೊಂಡ ಭಾರತಕ್ಕೆ ಉಳಿದವರಿಂದ ಉತ್ತಮ ನೆರವು ಲಭಿಸಿತು. ಮಿಥಾಲಿ ರಾಜ್ 15, ಪೂಜಾ ವಸ್ತ್ರಾಕರ್ 20, ದೀಪ್ತಿ ಶರ್ಮ 32, ಹರ್ಮನ್‌ಪ್ರೀತ್ ಕೌರ್ ಸರ್ವಾಧಿಕ 42 ರನ್ (37 ಎಸೆತ, 6 ಬೌಂಡರಿ) ಮಾಡಿದರು.
Related Articles
ಬಾಂಗ್ಲಾದೇಶ 8ನೇ ಓವರ್ ವೇಳೆ ಆರಂಭಿಕರಾದ ಶಮಿಮಾ ಸುಲ್ತಾನಾ (33), ಅಯಾಶಾ ರೆಹಮಾನ್ (12) ಮತ್ತು ನಿಗರ್ ಸುಲ್ತಾನಾ (1) ಅವರ ವಿಕೆಟ್ ಕಳೆದುಕೊಂಡಿತು. ಆಗ ಕೇವಲ 49 ರನ್ ಮಾಡಿತ್ತು. ಈ ಹಂತದಲ್ಲಿ ಭಾರತದ ಗೆಲುವು ಬಹುತೇಕ ಖಚಿತವಾಗಿತ್ತು. ಆದರೆ 4ನೇ ವಿಕೆಟಿಗೆ ಜತೆಗೂಡಿದ ಫರ್ಗಾನಾ ಹಕ್ ಮತ್ತು ರುಮಾನಾ ಅಹ್ಮದ್ ಬೇರೂರಿ ನಿಂತು ಪಂದ್ಯದ ಗತಿಯನ್ನೇ ಬದಲಾಯಿಸಿದರು. ಅಜೇಯ 93 ರನ್ ಜತೆಯಾಟ ನಡೆಸಿ ಭಾರತದ ಆಸೆಗೆ ತಣ್ಣೀರೆರಚಿದರು. ಇವರಿಬ್ಬರ ಅಮೋಘ ಆಟದ ವೇಳೆ ಭಾರತದ ಯಾವುದೇ ರೀತಿಯ ಬೌಲಿಂಗ್ ಆಕ್ರಮಣ ಫಲ ನೀಡಲಿಲ್ಲ. ಫರ್ಗಾನಾ 46 ಎಸೆತಗಳಿಂದ 52 ರನ್ (5 ಬೌಂಡರಿ, 1 ಸಿಕ್ಸರ್) ಹಾಗೂ ರುಮಾನಾ 34 ಎಸೆತಗಳಿಂದ 42 ರನ್ ಮಾಡಿ (6 ಬೌಂಡರಿ) ಔಟಾಗದೆ ಉಳಿದರು.
Advertisement
ಸಂಕ್ಷಿಪ್ತ ಸ್ಕೋರ್: ಭಾರತ-20 ಓವರ್‌ಗಳಲ್ಲಿ 7 ವಿಕೆಟಿಗೆ 142 (ಹರ್ಮನ್‌ಪ್ರೀತ್ 42, ದೀಪ್ತಿ 32, ಪೂಜಾ 20, ರುಮಾನಾ 21ಕ್ಕೆ 3, ಸಲ್ಮಾ 21ಕ್ಕೆ 1). ಬಾಂಗ್ಲಾದೇಶ-19.4 ಓವರ್‌ಗಳಲ್ಲಿ 3 ವಿಕೆಟಿಗೆ 142 (ಫರ್ಗಾನಾ ಔಟಾಗದೆ 52, ರುಮಾನಾ ಔಟಾಗದೆ 42, ಶಮಿಮಾ 33, ಪೂಜಾ 21ಕ್ಕೆ 1, ಪೂನಂ 21ಕ್ಕೆ 1, ರಾಜೇಶ್ವರಿ 26ಕ್ಕೆ 1).ಪಂದ್ಯಶ್ರೇಷ್ಠ: ರುಮಾನಾ ಅಹ್ಮದ್.