Advertisement
2004ರಲ್ಲಿ ವನಿತಾ ಏಷ್ಯಾ ಕಪ್ ಪಂದ್ಯಾವಳಿ ಆರಂಭವಾದಂದಿ ನಿಂದಲೂ ಭಾರತವೇ ಪ್ರಭುತ್ವ ಸ್ಥಾಪಿಸುತ್ತ ಬಂದಿರುವುದು ಉಲ್ಲೇಖನೀಯ. ಸತತ 6 ಸಲ ಪ್ರಶಸ್ತಿ ಎತ್ತಿ ಹಿಡಿದದ್ದು ಭಾರತೀಯ ಮಹಿಳೆಯರ ಅಸಾಮಾನ್ಯ ಸಾಧನೆಯಾಗಿದೆ. 4 ಏಕದಿನ, 2 ಟಿ20 ಪ್ರಶಸ್ತಿಗಳು ಭಾರತದ ಶೋಕೇಸನ್ನು ಅಲಂಕರಿಸಿವೆ. ಆದರೆ 2018ರ ಟೂರ್ನಿ ಸತತ 7ನೇ ಪ್ರಶಸ್ತಿಗೆ ಅಡ್ಡಿಯಾಯಿತು. ಇಲ್ಲಿ ಬಾಂಗ್ಲಾದೇಶ 3 ವಿಕೆಟ್‌ಗಳಿಂದ ಗೆದ್ದು ದೊಡ್ಡದೊಂದು ಏರುಪೇರಿಗೆ ಕಾರಣವಾಯಿತು.
ಶ್ರೀಲಂಕಾವನ್ನು 41 ರನ್ನುಗಳಿಂದ ಮಣಿಸುವ ಮೂಲಕವೇ ಹರ್ಮನ್‌ಪ್ರೀತ್ ಕೌರ್ ಬಳಗ ತನ್ನ ಏಷ್ಯಾ ಕಪ್ ಅಭಿಯಾನ ಆರಂಭಿಸಿತ್ತು. ರೌಂಡ್ ರಾಬಿನ್ ಲೀಗ್‌ನಲ್ಲಿ ಪಾಕಿಸ್ಥಾನ ವಿರುದ್ಧ ಆಘಾತ ಅನುಭವಿಸಿದ್ದನ್ನು ಹೊರತು ಪಡಿಸಿದರೆ ಭಾರತದ ಸಾಧನೆ ಉನ್ನತ ಮಟ್ಟದಲ್ಲಿಯೇ ಇದೆ. ಒಟ್ಟು ಬಲಾಬಲ ಹಾಗೂ ನಿರ್ವಹಣೆಯ ಲೆಕ್ಕಾಚಾರದಲ್ಲಿ ಕೌರ್ ಪಡೆಯೇ ಫೈನಲ್ ಪಂದ್ಯದ ಫೇವರಿಟ್. ಶ್ರೀಲಂಕಾ ಡಾರ್ಕ್ ಹಾರ್ಸ್.
Related Articles
Advertisement
ಕೂಟದಲ್ಲಿ ಭಾರತದ ಸ್ಟಾರ್ ಆಟಗಾರ್ತಿಯರಾಗಿ ಮೂಡಿಬಂದ ವರೆಲ್ಲ ಕಿರಿಯರೇ. 18 ವರ್ಷದ ಶಫಾಲಿ ವರ್ಮ (161 ರನ್, 3 ವಿಕೆಟ್), 22 ವರ್ಷದ ಜೆಮಿಮಾರೋಡ್ರಿಗಸ್ (215 ರನ್), 25 ವರ್ಷದ ಆಲ್‌ರೌಂಡರ್ ದೀಪ್ತಿ ಶರ್ಮ (94 ರನ್, 13 ವಿಕೆಟ್) ಇವರಲ್ಲಿ ಪ್ರಮುಖರು.
ಸ್ಪಿನ್ ಆಕ್ರಮಣದ ಮೂಲಕ ಭಾರತ ಬೌಲಿಂಗ್ ವಿಭಾಗದಲ್ಲಿ ಮೇಲುಗೈ ಸಾಧಿಸಿದೆ. ದೀಪ್ತಿ, ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ್ ರಾಣಾ ಬಹುತೇಕ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಹೀಗಾಗಿ ವೇಗಿಗಳಾದ ರೇಣುಕಾ ಸಿಂಗ್, ಮೇಘನಾ ಸಿಂಗ್ ಅವರ ಅಗತ್ಯ ಹೆಚ್ಚು ಕಂಡುಬರಲಿಲ್ಲ.
ಅದೃಷ್ಟದಿಂದ ಬಂದ ಲಂಕಾಸೆಮಿಫೈನಲ್ನಲ್ಲಿ ಪಾಕಿಸ್ಥಾನ ವಿರುದ್ಧ ಇನ್ನೇನು ಸೋತಾಯಿತು ಎಂಬ ಸ್ಥಿತಿಯಲ್ಲಿದ್ದ ಶ್ರೀಲಂಕಾ ಅದೃ ಷ್ಟದ ಬಲದಿಂದ ಪ್ರಶಸ್ತಿ ಸುತ್ತಿಗೆ ಬಂದ ತಂಡ. ಇಲ್ಲಿಯೂ ಅದೃಷ್ಟವನ್ನು ನಂಬಿ ಕೂರುವಂತಿಲ್ಲ. ಲಂಕನ್ನರ ಬ್ಯಾಟ್ ಮಾತಾಡುವುದು ಅಗತ್ಯ. ಕೇವಲ ಹರ್ಷಿತಾ ಮಾಧವಿ (201) ಮತ್ತು ನೀಲಾಕ್ಷಿ ಡಿ ಸಿಲ್ವ (124) ನೂರರ ಗಡಿ ದಾಟಿದ್ದಾರೆ. ನಾಯಕಿ ಚಾಮರಿ ಅತಪಟ್ಟು ಗಳಿಸಿದ್ದು 96 ರನ್ ಮಾತ್ರ. ಬೌಲಿಂಗ್‌ನಲ್ಲಿ ಎಡಗೈ ಸ್ಪಿನ್ನರ್ ಇನೋಕಾ ರಣವೀರ 12 ವಿಕೆಟ್ ಕಿತ್ತು ಘಾತಕವಾಗಿ ಪರಿಣಮಿಸಿದ್ದಾರೆ. ಫೈನಲ್‌ನಲ್ಲಿ ತಂಡವಾಗಿ ಆಡಿದರಷ್ಟೇ ಲಂಕಾ ಮೇಲುಗೈ ಸಾಧಿಸೀತು. ಲೀಗ್‌ನಲ್ಲಿ ಪಾಕಿಸ್ಥಾನ ವಿರುದ್ಧ ಅನು ಭವಿಸಿದ ಸೋಲಿಗೆ ಲಂಕಾ ಸೆಮಿಫೈನಲ್‌ನಲ್ಲಿ ಸೇಡು ತೀರಿಸಿಕೊಂಡಿದೆ. ಭಾರತ ವಿರುದ್ಧ ಇಂಥದೊಂದು ಸೇಡಿನ ಆಟ ಸಾಧ್ಯವೇ ಎಂಬುದೊಂದು ಪ್ರಶ್ನೆ. ಶಿಲೆಟ್ ಟ್ರ್ಯಾಕ್ ನಿಧಾನ ಗತಿಯಿಂದ ಕೂಡಿದ್ದು, ದೊಡ್ಡ ಹೊಡೆತಗಳು ಸಾಧ್ಯವಾಗುತ್ತಿಲ್ಲ. ಹೀಗಾಗಿ ಟಾಸ್ ನಿರ್ಣಾಯಕ. ಮೊದಲು ಬ್ಯಾಟಿಂಗ್ ನಡೆಸಿ ನೂರೈವತ್ತರ ಗಡಿ ತಲುಪಿದರೆ ಆ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು. ಭಾರತ-ಶ್ರೀಲಂಕಾ 5ನೇ ಫೈನಲ್
ಇದು ಭಾರತ-ಶ್ರೀಲಂಕಾ ನಡುವಿನ 5ನೇ ಏಷ್ಯಾ ಕಪ್ ಫೈನಲ್ ಹಣಾಹಣಿ. ಟಿ20 ಮಾದರಿಯಲ್ಲಿ ಮೊದಲನೆಯದು. ಏಷ್ಯಾ ಕಪ್ ಇತಿಹಾಸದ ಮೊದಲ ನಾಲ್ಕೂ ಫೈನಲ್‌ಗಳಲ್ಲಿ ಭಾರತ-ಶ್ರೀಲಂಕಾ ತಂಡಗಳೇ ಎದುರಾಗಿದ್ದವು. ಎಲ್ಲದರಲ್ಲೂ ಭಾರತವೇ ಜಯಭೇರಿ ಮೊಳಗಿಸಿತ್ತು. ಇವೆಲ್ಲವೂ ಏಕದಿನ ಪಂದ್ಯಗಳಾಗಿದ್ದವು. 2012ರಲ್ಲಿ ಈ ಪಂದ್ಯಾವಳಿಯನ್ನು ಟಿ20 ಮಾದರಿಗೆ ಪರಿವರ್ತಿಸಲಾಯಿತು. ಇಲ್ಲಿನ ಮೊದಲೆರಡು ಫೈನಲ್‌ಗಳಲ್ಲಿ ಮುಖಾಮುಖೀಯಾದ ತಂಡಗಳೆಂದರೆ ಭಾರತ-ಪಾಕಿಸ್ಥಾನ. ಇಲ್ಲಿಯೂ ಭಾರತವೇ ಚಾಂಪಿಯನ್ ಪಟ್ಟ ಅಲಂಕರಿಸಿತು. 2018ರಲ್ಲಿ ನಡೆದ ಕೊನೆಯ ಪಂದ್ಯಾವಳಿಯಲ್ಲಿ ಭಾರತ-ಬಾಂಗ್ಲಾದೇಶ ಎದುರಾಗಿದ್ದವು. ಇಲ್ಲಿ ಭಾರತದ ವನಿತೆಯರಿಗೆ ಅದೃಷ್ಟ ಕೈಕೊಟ್ಟಿತು. ಬಾಂಗ್ಲಾ 3 ವಿಕೆಟ್‌ಗಳಿಂದ ಗೆದ್ದು ಮೊದಲ ಸಲ ಚಾಂಪಿಯನ್ ಆಯಿತು. ಭಾರತವನ್ನು ಹೊರತುಪಡಿಸಿದರೆ ಪ್ರಶಸ್ತಿ ಗೆದ್ದ ಏಕೈಕ ತಂಡವೆಂಬುದು ಬಾಂಗ್ಲಾದ ಹೆಗ್ಗಳಿಕೆ. ಪಾಕಿಸ್ಥಾನ, ಶ್ರೀಲಂಕಾ ಇನ್ನೂ ಏಷ್ಯಾ ಕಪ್ ಎತ್ತಿಲ್ಲ. ಭಾರತ-ಶ್ರೀಲಂಕಾ
ಆರಂಭ: 1.00
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವನಿತಾ ಏಷ್ಯಾ ಕಪ್ ಚಾಂಪಿಯನ್ಸ್ ವರ್ಷ (ಮಾದರಿ) ಚಾಂಪಿಯನ್ ರನ್ನರ್ ಅಪ್ ಅಂತರ
2004 (ಏಕದಿನ) ಭಾರತ ಶ್ರೀಲಂಕಾ 5-0 ಜಯ
2005 (ಏಕದಿನ) ಭಾರತ ಶ್ರೀಲಂಕಾ 97 ರನ್ ಜಯ
2006 (ಏಕದಿನ) ಭಾರತ ಶ್ರೀಲಂಕಾ 8 ವಿಕೆಟ್ ಜಯ
2008 (ಏಕದಿನ) ಭಾರತ ಶ್ರೀಲಂಕಾ 177 ರನ್ ಜಯ
2012 (ಟಿ20) ಭಾರತ ಪಾಕಿಸ್ಥಾನ 18 ರನ್ ಜಯ
2016 (ಟಿ20) ಭಾರತ ಪಾಕಿಸ್ಥಾನ 17 ರನ್ ಜಯ
2018 (ಟಿ20) ಬಾಂಗ್ಲಾದೇಶ ಭಾರತ 3 ವಿಕೆಟ್ ಜಯ