ಡಂಬುಲ: ಶ್ರೀಲಂಕಾದ ನಾಯಕಿ ಚಾಮರಿ ಅತ್ತಪಟ್ಟು ವನಿತಾ ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಸೆಂಚುರಿ ಬಾರಿಸಿದ ಮೊದಲ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಮವಾರ ಮಲೇಷ್ಯಾ ವಿರುದ್ಧ ನಡೆದ “ಬಿ’ ವಿಭಾಗದ ಮುಖಾಮುಖಿಯಲ್ಲಿ ಅವರು 119 ರನ್ ಹೊಡೆದರು. ಇದರೊಂದಿಗೆ 144 ರನ್ನುಗಳ ಅಮೋಘ ಗೆಲುವು ಸಾಧಿಸಿದ ಲಂಕಾ ಸೆಮಿಫೈನಲ್‌ಗೆ ಒಂದು ಕಾಲಿರಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 4 ವಿಕೆಟಿಗೆ 184 ರನ್ ಮಾಡಿದರೆ, ಮಲೇಷ್ಯಾ 19.5 ಓವರ್‌ಗಳಲ್ಲಿ 40 ರನ್ನಿಗೆ ಸರ್ವಪತನ ಕಂಡಿತು.
ಚಾಮರಿ ಅತ್ತಪಟ್ಟು 69 ಎಸೆತಗಳಿಂದ 119 ರನ್ ಬಾರಿಸಿದರು. ಇದರೊಂದಿಗೆ ಏಷ್ಯಾ ಕಪ್‌ನಲ್ಲಿ ಅತ್ಯಧಿಕ 97 ರನ್ ಮಾಡಿದ ಮಿಥಾಲಿ ರಾಜ್ ಅವರ ದಾಖಲೆಯನ್ನು ಮುರಿದರು. ಮಿಥಾಲಿ 2018ರಲ್ಲಿ ಮಲೇಷ್ಯಾ ವಿರುದ್ಧವೇ ಈ ಅಜೇಯ ಪ್ರದರ್ಶನ ನೀಡಿದ್ದರು.
ಚಾಮರಿ 14 ಬೌಂಡರಿ ಹಾಗೂ 7 ಸಿಕ್ಸರ್ ಬಾರಿಸಿದರು. ವನಿತಾ ಏಷ್ಯಾ ಕಪ್ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್ ಹೊಡೆದ ದಾಖಲೆಯೂ ಚಾಮರಿ ಪಾಲಾಯಿತು. ಶಫಾಲಿ ವರ್ಮ ಅವರ 3 ಸಿಕ್ಸರ್ ದಾಖಲೆಯನ್ನು ಅಳಿಸಿದರು.
ಮಲೇಷ್ಯಾ ಪರ ಎಲ್ಸಾ ಹಂಟರ್ 10 ರನ್ ಗಳಿಸಿದ್ದೇ ಹೆಚ್ಚಿನ ವೈಯಕ್ತಿಕ ಗಳಿಕೆ. ನಾಲ್ವರು ಖಾತೆ ತೆರೆಯಲಿಲ್ಲ. ಲಂಕಾ ಪರ ಎಲ್ಲ ಆರು ಬೌಲರ್ ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-4 ವಿಕೆಟಿಗೆ 184 (ಚಾಮರಿ 119, ಅನುಷ್ಕಾ 31, ಹರ್ಷಿತಾ 26, ವಿನಿಫ್ರೆಡ್ 34ಕ್ಕೆ 2). ಮಲೇಷ್ಯಾ-19.5 ಓವರ್‌ಗಳಲ್ಲಿ 40 (ಹಂಟರ್ 10, ಶಾಶಿನಿ 9ಕ್ಕೆ 3, ಕವಿಶಾ 4ಕ್ಕೆ 2, ಕಾವ್ಯಾ 7ಕ್ಕೆ 2). ಪಂದ್ಯಶ್ರೇಷ್ಠ: ಚಾಮರಿ ಅತ್ತಪಟ್ಟು.
ಬಾಂಗ್ಲಾದೇಶಕ್ಕೆ 7 ವಿಕೆಟ್ ಜಯ
ಸೋಮವಾರದ ದ್ವಿತೀಯ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್‌ಗಳಿಂದ ಥಾಯ್ಲೆಂಡನ್ನು ಮಣಿಸಿತು. ಥಾಯ್ಲೆಂಡ್ 9 ವಿಕೆಟಿಗೆ 96 ರನ್ ಗಳಿಸಿದರೆ, ಬಾಂಗ್ಲಾ 17.3 ಓವರ್‌ಗಳಲ್ಲಿ 3 ವಿಕೆಟಿಗೆ 100 ರನ್ ಮಾಡಿತು. ಓಪನರ್ ಮುರ್ಷಿದಾ ಖಾತುನ್ 50 ರನ್ ಹೊಡೆದರು.
ಬಾಂಗ್ಲಾ ಬೌಲಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ರಬೇಯಾ ಖಾನ್ (14ಕ್ಕೆ 4), ರಿತು ಮೋನಿ (10ಕ್ಕೆ 2) ಮತ್ತು ಸಬಿಕ್ ಉನ್ ನಹರ್ (28ಕ್ಕೆ 2).