ಫಿಲಿಪೈನ್ಸ್: ಎಲ್ಲರೂ ದೂರದೂರಿಗೆ ಪ್ರಯಾಣ ಮಾಡುವಾಗ ಚಂದದ, ಮೈಗೆ ಫಿಟ್ ಆಗುವಂತಹ ಉಡುಗೆ ತೊಟ್ಟು ಹೋಗಬೇಕೆಂದು ಬಯಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಬಟ್ಟೆಗಳ ಮೇಲೆ ಕಾಳಜಿ ತುಸು ಜಾಸ್ತಿಯೇ ಎನ್ನಬಹುದು. ಆದರೆ ಇಲ್ಲೊಬ್ಬಳು ಯುವತಿ ಬಟ್ಟೆಗಳ ರಾಶಿಯನ್ನೇ ತೊಟ್ಟು ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಅವಳ ಅವತಾರ ಕಂಡು ಏರ್ ಪೋರ್ಟ್ ಅಧಿಕಾರಿಗಳು ದಂಗಾಗಿದ್ದರು. ಅಷ್ಟಕ್ಕೂ ಆಕೆ ಧರಿಸಿದ್ದು ಬರೋಬ್ಬರಿ 2.5 ಕೆಜಿ ಬಟ್ಟೆ!
ಫಿಲಿಪೈನ್ಸ್ ಜೆಲ್ ರೋಡ್ರಿಗಸ್ ಹೀಗೆ ವಿಚಿತ್ರ ಅವತಾರದಲ್ಲಿ ಏರ್ ಪೋರ್ಟ್ ಗೆ ಆಗಮಿಸಿದ ಯುವತಿ.
ವಿಮಾನ ಪ್ರಯಾಣ ಮಾಡುವ ವೇಳೆ ನಾವು ತೆಗೆದುಕೊಂಡು ಹೋಗುವ ಲಗೇಜ್ ನ ಭಾರಕ್ಕೆ ಮಿತಿಯಿದೆ. ಅದಕ್ಕೆ ಮೀರಿದ ಭಾರವಿದ್ದರೆ ಅಧಿಕಾರಿಗಳು ಅನುಮತಿ ನೀಡುವುದಿಲ್ಲ. ಜೆಲ್ ಪ್ರಯಾಣಿಸಬೇಕಾಗಿದ್ದ ವಿಮಾನ ನಿಲ್ದಾಣದಲ್ಲಿ 7 ಕೆಜಿ ಲಗೇಜ್ ಬ್ಯಾಗ್ ಗೆ ಅವಕಾಶವಿತ್ತು. ಆದರೆ ಜೆಲ್ ತಂದಿದ್ದ ಬ್ಯಾಗ್ ನಲ್ಲಿ 9 ಕೆಜಿ ಇತ್ತು.
ಇದಕ್ಕೆ ಉಪಾಯ ಕಂಡುಕೊಂಡ ಜೆಲ್ ರೋಡ್ರಿಗಸ್, ಬ್ಯಾಗ್ ನಲ್ಲಿದ್ದ ಒಂದಷ್ಟು ಬಟ್ಟೆಗಳನ್ನು ತೊಟ್ಟುಕೊಂಡರು. ಬಟ್ಟೆಯ ಮೇಲೆ ಬಟ್ಟೆ, ಹೀಗೆ ಸುಮಾರು 2.5 ಕೆಜಿ ಭಾರದಷ್ಟು ಬಟ್ಟೆಯನ್ನು ಜೆಲ್ ಉಟ್ಟಿದ್ದರು. ನಂತರ 6.5 ಕೆಜಿ ಲಗೇಜ್ ಬ್ಯಾಗ್ ನೊಂದಿಗೆ ಪ್ರಯಾಣ ಮಾಡಿದರು.
ಈ ಬಗ್ಗೆ ತನ್ನ ಫೇಸ್ ಬುಕ್ ಖಾತೆಯಲ್ಲಿ ಫೋಟೋ ಹಾಕಿರುವ ಜೆಲ್ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ.