Advertisement
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡೆಲಿನಾ ಕೊಂಗಡುಪ್ ನೇತೃತ್ವದ ತಂಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಹಿಳೆಗೆ ಸಾಂತ್ವನ ಹೇಳಿತು. ಅನಂತರ ಸಂತ್ರಸ್ತೆಯ ಧ್ವಂಸಗೊಂಡ ಮನೆಯನ್ನು ಪರಿಶೀಲಿಸಿತು. ಸಂತ್ರಸ್ತೆಯ ಕುಟುಂಬಸ್ಥರು, ಸಂಬಂಧಿಕರು ಹಾಗೂ ನೆರೆಹೊರೆಯವರು ಘಟನೆ ಬಗ್ಗೆ ವಿವರವಾಗಿ ವಿವರಿಸಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಕಮಿಷನರ್ ಎಸ್.ಎನ್. ಸಿದ್ದರಾಮಪ್ಪ, ಡಿಸಿಪಿ ರೋಹನ್ ಜಗದೀಶ ಸಹಿತ ಹಿರಿಯ ಅಧಿಕಾರಿಗಳು ಇದ್ದರು. ಬಿಜೆಪಿ ಸಮಿತಿ ಭೇಟಿ
ಅನಂತರ ನಾಲ್ವರು ಬಿಜೆಪಿಯ ಮಹಿಳಾ ಸಂಸದೆಯರ ನೇತೃತ್ವದ ಸತ್ಯ ಶೋಧನೆ ಸಮಿತಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯಿತು. ಸುಮಾರು 20 ನಿಮಿಷಕ್ಕೂ ಹೆಚ್ಚು ಹೊತ್ತು ಆಸ್ಪತ್ರೆಯಲ್ಲಿದ್ದು ಮಹಿಳೆಗೆ ಧೈರ್ಯ ಹೇಳಿದ ನಿಯೋಗದಲ್ಲಿ ಸಂಸದೆಯರಾದ ಅಪರಾಜಿತಾ ಸಾರಂಗಿ, ಲಾಕೆಟ್ ಚಟರ್ಜಿ, ಸುನೀತಾ ದುಗ್ಗಲ್, ರಂಜಿತಾ ಕೋಲಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರ ಇದ್ದರು.
Related Articles
Advertisement
ಪ್ರಕರಣದ ಮಾಹಿತಿ ಕಲೆ ಹಾಕಲು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಮ್ಮನ್ನು ಕಳುಹಿಸಿದ್ದಾರೆ. ಸಮಗ್ರ ಮಾಹಿತಿ ಪಡೆದು ವರದಿ ಸಲ್ಲಿಸಲಾಗುವುದು. ಪ್ರಕರಣವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ವಿಧಾನಮಂಡಲ ಅ ಧಿವೇಶನ ನಡೆಯುತ್ತಿದ್ದಾಗಲೇ ಈ ಘಟನೆ ಆಗಿದೆ. ಮುಖ್ಯಮಂತ್ರಿ, ಸಚಿವರು ಇಲ್ಲೇ ಇದ್ದರೂ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಗೆ ಸಾಂತ್ವನ ಹೇಳದಿರುವುದು ದುರ್ದೈವ ಎಂದರು.
ಸಮಿತಿಯ ಇತರ ಸದಸ್ಯರೂ ಮಾತನಾಡಿದರು.
ಸಂಸದರಾದ ಮಂಗಲಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಶಶಿಕಲಾ ಜೊಲ್ಲೆ, ಅಭಯ ಪಾಟೀಲ್, ಮೇಯರ್ ಶೋಭಾ ಸೋಮನಾಚೆ ಮುಂತಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಬುಡಕಟ್ಟು ಆಯೋಗ ಭೇಟಿರಾಷ್ಟ್ರೀಯ ಬುಡಕಟ್ಟು ಆಯೋಗದ ಉಪ ನಿರ್ದೇಶಕರ ಮೂವರ ತಂಡ ಜಿಲ್ಲಾಸ್ಪತ್ರೆಯಲ್ಲಿರುವ ಮಹಿಳೆಯನ್ನು ಭೇಟಿ ಮಾಡಿ, ಬಳಿಕ ಗ್ರಾಮದ ಸಂತ್ರಸ್ತೆಯ ಮನೆಗೆ ಬಂದು ಸಂತ್ರಸ್ತೆಯ ಪತಿ ಸಹಿತ ಕುಟುಂಬದವರಿಂದ ವಿವರ ಪಡೆಯಿತು. ಗ್ರಾಮದ ವಿವಿಧೆಡೆಗೆ ತೆರಳಿ ಘಟನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿತು. ದೌರ್ಜನ್ಯ ಘಟನೆಗೆ ಬಿಜೆಪಿ ರಾಜಕೀಯ ಬಣ್ಣ: ಸಿಎಂ ಕಿಡಿ
ಹುಬ್ಬಳ್ಳಿ: ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯ ಘಟನೆಗೆ ರಾಜಕೀಯ ಬಣ್ಣ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದವರು ಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ಸಂಬಂಧಿಸಿ ರಾಜ್ಯ ಸರಕಾರ ಎಲ್ಲ ರೀತಿಯ ಕಠಿನ ಕ್ರಮ ಕೈಗೊಂಡಿದೆ. ಗೃಹ ಸಚಿವರು ತತ್‌ಕ್ಷಣ ಹೋಗಿ ಮಹಿಳೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಆದರೆ ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದರು. ಬಿಜೆಪಿಯವರು ಎನ್‌ಸಿಆರ್‌ಬಿ ವರದಿ ತರಿಸಿಕೊಂಡು ನೋಡಲಿ. ಅವರ ಕಾಲದಲ್ಲಿ ರಾಜ್ಯದಲ್ಲಿ ಎಷ್ಟು ಮಹಿಳೆಯರ ಮೇಲೆ ದೌರ್ಜನ್ಯ ಆಗಿತ್ತೆಂಬುದು ತಿಳಿಯುತ್ತದೆ ಎಂದೂ ಸಿದ್ದರಾಮಯ್ಯ ಕುಟುಕಿದರು. ಅಪ್ತಾಪ್ತೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ ನಿನ್ನೆಯಷ್ಟೇ 25 ವರ್ಷಗಳ ಜೈಲುವಾಸ ಶಿಕ್ಷೆಯಾಗಿದೆ. ಅದಕ್ಕೆ ನಡ್ಡಾ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಏನು ಹೇಳುತ್ತಾರೆ? ಹೆಣ್ಣು ಮಕ್ಕಳ ಮೇಲೆ ಯಾರೇ ದೌರ್ಜನ್ಯ ನಡೆಸಿದರೂ ಅವರಿಗೆ ಕಠಿನ ಶಿಕ್ಷೆ ಆಗಲೇಬೇಕು. ನಾಗರಿಕ ಸಮಾಜದಲ್ಲಿ ಇದೆಲ್ಲ ನಡೆಯಬಾರದು ಎಂದರು. ಸಂತ್ರಸ್ತೆಗೆ 2.03 ಎಕ್ರೆ ಭೂಮಿ ಮಂಜೂರು: ಸತೀಶ್
ದೌರ್ಜನ್ಯಕ್ಕೊಳಗಾಗಿರುವ ಮಹಿಳೆಗೆ ಸರಕಾರ 2.03 ಎಕ್ರೆ ಜಮೀನು ಮಂಜೂರು ಮಾಡಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ ವಂಟಮೂರಿ ಗ್ರಾಮದ ಸಂತ್ರಸ್ತ ಮಹಿಳೆಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ “ಭೂ ಒಡೆತನ” ಯೋಜನೆಯಡಿ ಜಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರು ವಿಶೇಷ ಪ್ರಕರಣವೆಂದು ಪರಿಗಣಿಸಿ ತತ್‌ಕ್ಷಣವೇ ಜಮೀನು ಮಂಜೂರಾತಿಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ನೊಂದ ಮಹಿಳೆಗೆ ಆರ್ಥಿಕ ಸ್ಥಿರತೆ ಒದಗಿಸುವ ದೃಷ್ಟಿಯಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮಹಿಳೆ ವಿವಸ್ತ್ರ ಪ್ರಕರಣ: ಮತ್ತೆ ಮೂವರ ಸೆರೆ
ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 11ಕ್ಕೆ ಏರಿದೆ. ಗ್ರಾಮದ ಲಕ್ಕಪ್ಪ ನಾಯಕ, ಲಕ್ಕವ್ವ ನಾಯಕ ಹಾಗೂ ಶೋಭಾ ನಾಯಕ ಬಂದಿತರು. ಬೆಳಗಾವಿ ಗ್ರಾಮೀಣ ಠಾಣೆ ಎಸಿಪಿ ಗಿರೀಶ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.