ಕೆಲವೊಂದು ಜನ ಎಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ಇಂಡೋನೇಷಿಯಾದ ಸಫಾರಿ ಪಾರ್ಕ್ ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ.
ಪ್ರಾಣಿಗಳನ್ನು ಉಳಿಸಬೇಕು, ಬೆಳೆಸಬೇಕು ಎಂಬ ಕೂಗುಗಳು ಕೇಳುತ್ತಿರುವ ನಡುವೆ, ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ಎಂತಹ ಆಹಾರವನ್ನು ಕೊಡಬೇಕು ಎಂಬ ಸಣ್ಣ ಪರಿಜ್ಞಾನ ಜನಕ್ಕೆ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಸಣ್ಣ ವಿಡಿಯೋ ಒಂದು ಹರಿದಾಡುತ್ತಿದೆ.
ಇಂಡೋನೇಷಿಯದ ಬೋಗರ್ ಪ್ರದೇಶದಲ್ಲಿ ಇರುವ ಸಫಾರಿ ಪಾರ್ಕ್ ನಲ್ಲಿ ಘೇಂಡಾಮೃಗವನ್ನು ಸಾಕಲಾಗಿದೆ. ಇಲ್ಲಿಗೆ ಬಂದ ಪ್ರವಾಸಿಗರೊಬ್ಬರು ಪ್ಲಾಸ್ಟಿಕ್ ಬಾಟಲ್ ಅನ್ನು ಆ ಪ್ರಾಣಿಯ ಬಾಯಿಗೆ ಹಾಕಿದ್ದಾರೆ. ಈ ಅಮಾನವೀಯ ದೃಶ್ಯವನ್ನು ಹಿಂದೆ ಇದ್ದ ಮತ್ತೊಬ್ಬ ಪ್ರವಾಸಿಗರು ವಿಡಿಯೋ ಮಾಡಿಕೊಂಡಿದ್ದಾರೆ.
ವಿಡಿಯೋ ಮಾಡಿಕೊಂಡವರನ್ನು ಸಿಂಟಿಯಾ ಅಯು ಎಂದು ಹೇಳಲಾಗಿದ್ದು, ಆ ಮಹಿಳೆ ಪ್ಲಾಸ್ಟಿಕ್ ಬಾಟಲ್ ಅನ್ನು ಪ್ರಾಣಿಯ ಬಾಯಿಗೆ ಹಾಕುವುದನ್ನು ತಡೆಯಬೇಕೆಂದು ಹೋದರಂತೆ. ಅಷ್ಟೊತ್ತಿಗಾಗಲೇ ಮುಂದೆ ಕಾರಿನಲ್ಲಿ ಇದ್ದವರು ಬಾಟಲ್ ಅನ್ನು ಎಸೆದಿದ್ದಾಗಿ ತಿಳಿಸಿದ್ದಾರೆ.
ಅದೃಷ್ಟವಶಾತ್ ‘ಅರಿ’ ಹೆಸರಿನ ಆ ಪ್ರಾಣಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈ ರೀತಿ ದುರ್ನಡತೆ ಎಸಗಿದ ಪ್ರವಾಸಿಗರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಸಫಾರಿ ಮೂಲಗಳು ತಿಳಿಸಿವೆ. ಅಲ್ಲದೆ ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆ ಮಹಿಳೆಯನ್ನು ಜನ ಶಪಿಸುತ್ತಿದ್ದಾರೆ.