ಚನ್ನರಾಯಪಟ್ಟಣ: ಮಹಿಳೆಯರು ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು ಎಂದು ಅಧಿಕ ಸಿವಿಲ್ ನ್ಯಾಯಾಧೀಶೆ ಎಂ.ವಿ.ಲಕ್ಷ್ಮೀ ಹೇಳಿದರು. ಪಟ್ಟಣದ ನೌಕರರ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ನಡೆದ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕುಟುಂಬದ ಗೌರವದ ಪ್ರಶ್ನೆ ಎಂದು ದೌರ್ಜನ್ಯಕ್ಕೆ ಒಳಗಾದ ಕುಟುಂಬವೇ ಸುಮ್ಮನಾಗುತ್ತಿದೆ ಇದರಿಂದ ದೌರ್ಜನ್ಯಗಳು ಹೆಚ್ಚು ನಡೆಯುತ್ತಿವೆ ಉದ್ಯೋಗ ಸ್ಥಳ, ಶಾಲಾ ಕಾಲೇಜು ಹಾಗೂ ಅಕ್ಕ ಪಕ್ಕದ ಮನೆಯವರಿಂದ ಹೆಚ್ಚು ಶೋಷಣೆ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕಲು ಮಹಿಳೆಯರು ಮುಂದಾಗಬೇಕು ಎಂದರು.
ಸಮಾಜದ ಕಡೆ ಕೈತೋರಿಸಬೇಡಿ: ಹಲವು ಮನೆಗಳಲ್ಲಿ ಕುಟುಂಬದಲ್ಲಿ ಇರುವ ಮಹಿಳೆಯರಲ್ಲಿ ಹೊಂದಾಣಿಕೆ ಕೊರತೆಯಿಂದ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಅಕ್ಕ-ತಂಗಿಯರ ನಡುವೆ ಆಸ್ತಿಗಾಗಿ ವ್ಯಾಜ್ಯ, ಅತ್ತೆ ಸೊಸೆಯಂದಿರ ನಡುವೆ ಹೊಂದಾಣಿಕೆ ಕೊರತೆಯಿಂದ ಕಾನೂನು ಹೋರಾಟ ಮಾಡುವ ಮೂಲಕ ಕುಟುಂಬದಲ್ಲಿನ ಮಹಿಳೆಯರಲ್ಲಿ ಶೋಷಣೆಗಳು ನಡೆಯುತ್ತಿವೆ. ಆದರೂ ಸಮಾಜದಲ್ಲಿ ಮಹಿಳೆಗೆ ರಕ್ಷಣೆ ಇಲ್ಲ ಎಂದು ಕೈ ತೋರುತ್ತಿದ್ದಾರೆ.
ಹೆಣ್ಣಿಗೆ ರಕ್ಷಣೆ ಇಲ್ಲ ಎಂದು ಸಮಾಜದ ಕಡೆ ಕೈತೋರುವ ಮಹಿಳೆಯರು ಮೊದಲು ತಮ್ಮ ಮನೆಯಲ್ಲಿ ಎಷ್ಟು ರಕ್ಷಣೆ ಇದೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳ ಬೇಕು ಎಂದರು ತಿಳಿಸಿದರು. ಮಹಿಳೆ ತನಗೆ ಹೆಣ್ಣು ಮಗು ಬೇಡ ಎನ್ನುವ ಮನಸ್ಥಿತಿಯಲ್ಲಿದ್ದಾರೆ ಇದರಿಂದ ಹೊರಬರಬೇಕಿದೆ ಹೆಣ್ಣು ಹೆಣ್ಣನ್ನು ರಕ್ಷಣೆ ಮಾಡದ ಹೊರತು ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ರಕ್ಷಣೆ ಇರುವುದಿಲ್ಲ ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ: ಕಾರ್ಯಕ್ರಮ ಉದ್ಘಾಟಿಸಿದ ಜೆಎಂಎಫ್ಸಿ ಅಧಿಕ ಸಿವಿಲ್ ನ್ಯಾಯಾಧೀಶೆ ಎಚ್.ಸುಜಾತ ಮಾತನಾಡಿ, ಮಹಿಳೆಗೆ ದೂರ ದೃಷ್ಟಿ ಇದೆ ಹಾಗಾಗಿ ತಾಳ್ಮೆಯಿಂದ ಇರುತ್ತಾಳೆ. ಸಮಾಜದಲ್ಲಿ ಹೆಣ್ಣು ಗಂಡಿನ ನಡುವೆ ಭೇದಭಾವವಿಲ್ಲ. ಮಹಿಳೆಯರು ಶಿಕ್ಷಣದಿಂದ ವಂಚಿತರಾಗಬಾರದು. ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವುದು ಅಗತ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಧರ್ಮಪ್ಪ, ಕಾರ್ಯದರ್ಶಿ ಪಿ.ದಿನೇಶ್, ಶಿಶು ಅಭಿವೃದ್ದಿ ಸಹಾಯ ನಿರ್ದೇಶಕ ಪಾಪಬೋವಿ, ಯೋಜಾನ ನಿರ್ದೇಶಕ ವಿಜಯಕುಮಾರ. ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪಲತಾ ಮೊದಲಾದವರು ಉಪಸ್ಥಿತರಿದ್ದರು.
ಆಸ್ತಿ ಹಕ್ಕಿನ ಬಗ್ಗೆ ತಿಳಿಯಿರಿ: ಹಿರಿಯ ಸಿವಿಲ್ ನ್ಯಾಯಾಧೀಶ ಓಂಕಾರಮೂರ್ತಿ ಮಾತನಾಡಿ, ಆಸ್ತಿ ಹಕ್ಕಿನ ಬಗ್ಗೆ ಮಹಿಳೆಯರು ತಿಳಿದುಕೊಂಡಿದ್ದಾರೆ ಅದರೆ ಇತರ ಹಕ್ಕಿನ ಬಗ್ಗೆ ಮಾಹಿತಿ ಪಡೆಯಲು ಹೆಚ್ಚು ಆಸಕ್ತಿ ತೋರಬೇಕಿದೆ. ಸಮಾನತೆಯನ್ನು ಹಕ್ಕಿನಿಂದ ಪಡೆಯುವ ಬದಲಾಗಿ ಪ್ರೀತಿಯಿಂದ ಪಡೆಯುವುದು ಒಳಿತು, ಹಿಂಸೆಯಿಂದ ಎಂದಿಗೂ ಸಮಾನತೆ ದೊರೆಯುವುದಿಲ್ಲ, ದೇಶಕ್ಕಾಗಿ ಬದುಕುವುದನ್ನು ಮಹಿಳೆ ಕಲಿತು ತನ್ನ ಮಕ್ಕಳಿಗೆ ಕಲಿಸಬೇಕಾಗಿದ ಎಂದು ಹೇಳಿದರು.
ಧೈರ್ಯದಿಂದ ಮುನ್ನುಗ್ಗಿ: ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಚಿನ್ನಸ್ವಾಮಿ ಮಾತನಾಡಿ, ಮಹಿಳೆಯರಲ್ಲಿ ಹಿಂಜರಿಕೆ ಮನೋಭಾವ ಇರುವುದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ದೈರ್ಯದಿಂದ ಮುಂದೆ ನುಗ್ಗುವವರು ಸಾಧಕರಾಗುತ್ತಾರೆ. ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿಸಬೇಕು. ಮಹಿಳೆಯರು ಸಾಮಾಜಿಕ ಜಾಲತಾಣದ ಗೀಳಿನಿಂದ ಹೊರಬಂದು ಕುಟುಂಬದವರನ್ನು ಪ್ರೀತಿಸಬೇಕು ಎಂದರು.