ಶಿರಸಿ: ರಾಜ್ಯ, ದೇಶದಲ್ಲಿ ಅಡುಗೆ ಅನಿಲ ಹಾಗೂ ಅಡುಗೆ ಎಣ್ಣೆ ದರ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ವಿಶೇಷವಾಗಿ ಸಾಮಾನ್ಯ ಮಹಿಳೆಯರಿಗೆ ಬಹಳ ಸಂಕಷ್ಡ ಎದುರಾಗಿದೆ. ಜೀವನ ನಿರ್ವಹಣೆಯೇ ಸವಾಲಾಗಿದೆ ಎಂದು ಡಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಲೀಗಲ್ ಸೆಲ್ ಕಾರ್ಯದರ್ಶಿ ಜ್ಯೋತಿ ಪಾಟೀಲ ಹೇಳಿದ್ಧಾರೆ.
ಅಡುಗೆ ಅನಿಲವು ಮತ್ತೆ 50 ರೂ ಏರಿದ್ದು 1000ರೂ ಸಮೀಪಿಸಿದೆ. ಇದರಿಂದ ಬಡವರು,ಮಧ್ಯಮ ವರ್ಗದವರಿಗೆ ದೊಡ್ಡ ಹೊರೆಯಾಗಿದೆ. ಕೊರೊನ ಸಂಕಟದಿಂದ ಎರಡು ವರುಷ ಬಳಲಿದ ಜನರಿಗೆ ದೊಡ್ಡ ಹೊರೆಯಾಗಿದೆ ಎಂದರು.
ಮುಖ್ಯವಾಗಿ ಎರಡು ತಿಂಗಳಲ್ಲಿ ಅಡುಗೆ ಎಣ್ಣೆ ಬಹಳ ಏರಿದ್ದು, ಬಡಜನರ, ಹೊಟೆಲ್ ಸಣ್ಣ ಅಂಗಡಿಕಾರರಿಗೆ ಕಷ್ಟವಾಗಿದೆ. ಹೊಟೆಲಗಳಲ್ಲೂ ತಿಂಡಿ ದರ ಏರಿಕೆಯಾಗುವಂತಾಗಿದೆ. ರಾಜ್ಯ ಸರಕಾರವು ಅಡುಗೆ ಅನಿಲ, ಅಡುಗೆ ಎಣ್ಣೆ ದರ ಇಳಿಸಿದರೆ ಜನರಿಗೆ ಆಗುವ ಹೊರೆ ತಪ್ಪಿಸಬಹುದಾಗಿದೆ. ಚುನಾವಣೆ ಬಂದಾಗ ಸ್ವಲ್ಪ ಇಳಿಸಿ ಜನರಿಗೆ ದಾರಿ ತಪ್ಪಿಸುವ ಕಾರ್ಯ ನಿಲ್ಲಬೇಕು ಎಂದು ಹೇಳಿದರು.
ಇದನ್ನೂ ಓದಿ:ಆರೋಗ್ಯ ಕೇಂದ್ರದ ಸುತ್ತ ಅನಾರೋಗ್ಯ ವಾತಾವರಣ: ಕೇಂದ್ರದ ಸುತ್ತಲೂ ಕುಡುಕರ ಹಾವಳಿ
ಮುಖ್ಯವಾಗಿ 2 ತಿಂಗಳಿನಿಂದ ಡೀಸೆಲ್ ಪೆಟ್ರೊಲ್ ದರ ಒಮ್ಮೆಲೆ 15-20 ರೂ ಏರಿಸಿ ಜನರಿಗೆ ಆಘಾತ ನೀಡಿದ್ದ ಎರಡು ಸರಕಾರಗಳು ಐದು ರಾಜ್ಯದ ಚುನಾವಣೆ ಕಾರಣಕ್ಕೆ ಸ್ವಲ್ಪ ಇಳಿಸಿದಂತೆ ಮಾಡಿದರು. ಫಲಿತಾಂಶ ಬಂದನಂತರ ಏರಿಸುವ ಕಾರ್ಯ ಆರಂಭಿಸಿದ್ದಾರೆ. ಪರೋಕ್ಷವಾಗಿ ನಿತ್ಯ ಬಳಕೆ ವಸ್ತುಗಳು, ಅಹಾರ ವಸ್ತುಗಳ ಬೆಲೆಯು ಏರುವಂತಾಗಿದೆ. ಸರಕಾರ ಮಧ್ಯಪ್ರವೇಶಿಸಿ, ದರ ನಿಯಂತ್ರಣ ಮಾಡದೇ ಹೋದರೆ ಮಹಿಳೆಯರನ್ನು ಸೇರಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.