ಕೋಯಿಕ್ಕೋಡ್: ಭಾರತದ ಪ್ರಥಮ ಮಹಿಳಾ ಪೊಲೀಸ್ ಸ್ಟೇಷನ್‌ಗೆ ಶನಿವಾರಕ್ಕೆ 45 ವರ್ಷ ತುಂಬಿದೆ. 1973 ಅ.27 ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಈ ಠಾಣೆ ಉದ್ಘಾಟಿಸಿದ್ದರು.
ಎಂ. ಪದ್ಮಾವತಿ ಈ ಠಾಣೆಯ ಮೊದಲ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಆಗಿದ್ದರು. ಠಾಣೆಯನ್ನು ಉದ್ಘಾಟಿಸಿದ ಇಂದಿರಾ ಗಾಂಧಿ, ತನ್ನ ಪೆನ್ನನ್ನು ಪದ್ಮಾವತಿಗೆ ಉಡುಗೊರೆಯಾಗಿ ನೀಡಿ ಹೋಗಿದ್ದರು. ಅಷ್ಟೇ ಅಲ್ಲ, ಆ ದಿನ ವಾಹನ ದಟ್ಟಣೆಯನ್ನು ನಿಯಂತ್ರಿಸಿದವರೂ ಮಹಿಳಾ ಪೊಲೀಸರೇ ಆಗಿತ್ತು ಎಂಬುದು ಅಚ್ಚರಿಯ ಸಂಗತಿ.
ಸಬ್‌ಇನ್‌ಸ್ಪೆಕ್ಟರ್ ಸೇರಿದಂತೆ 15 ಇತರ ಮಹಿಳಾ ಪೊಲೀಸರು ಕೂಡ ನಿಯೋಜಿತರಾಗಿದ್ದರು.
ನಾಪತ್ತೆಯಾದ ಮೂರು ಮಕ್ಕಳ ಶೋಧ ಇವರ ಮೊದಲ ಪ್ರಕರಣವಾಗಿತ್ತು. ಮೊದಲು ಸೀರೆಯೇ ಮಹಿಳಾ ಪೊಲೀಸರ ಸಮವಸ್ತ್ರವಾಗಿತ್ತು. ನಂತರ ಅದನ್ನು ಪ್ಯಾಂಟ್ ಮತ್ತು ಶರ್ಟ್‌ಗೆ ಬದಲಿಸಲಾಯಿತು. ಈ ಠಾಣೆಯ ನಂತರ ರಾಜ್ಯ ಹಾಗೂ ದೇಶದೆಲ್ಲೆಡೆ ಹಲವು ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಲಾಯಿತು. ಹಾಗೆಂದ ಮಾತ್ರಕ್ಕೆ ಈ ಠಾಣೆಗಳು ಕೇವಲ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಪ್ರಕರಣಗಳನ್ನು ಸೇರಿಕೊಂಡಂತೆ ಎಲ್ಲಾ ರೀತಿಯ ಸಾಮಾನ್ಯ ಪ್ರಕರಣಗಳನ್ನೂ ಇವು ನಿರ್ವಹಿಸುತ್ತವೆ. ಸದ್ಯ ಎಂ. ರೀಟಾ ಈ ಠಾಣೆಯ ಎಸ್‌ಐ ಆಗಿದ್ದಾರೆ.
ದೇಶದಲ್ಲಿ 2015 ರ ವೇಳೆಗೆ 442 ಮಹಿಳಾ ಪೊಲೀಸ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಕೇರಳದಲ್ಲಿ ಒಟ್ಟು 24 ಮಹಿಳಾ ಠಾಣೆಗಳಿವೆ. 2014ರಲ್ಲಿ 6 ಸ್ಟೇಷನ್‌ಗಳನ್ನು ಕೇರಳ ಸರಕಾರ ಸ್ಥಾಪಿಸಿದೆ. ಕರ್ನಾಟಕದಲ್ಲಿ 26 ಠಾಣೆಗಳಿವೆ. ಬೆಂಗಳೂರಲ್ಲಿ 2 ಠಾಣೆಗಳಿವೆ. ದೇಶಾದ್ಯಂತ 1 ಲಕ್ಷಕ್ಕೂ ಹೆಚ್ಚು ಮಹಿಳಾ ಪೊಲೀಸರಿದ್ದಾರೆ. ಇದು ಪುರುಷ ಪೊಲೀಸರ ಸಂಖ್ಯೆಗೆ ಹೋಲಿಸಿದರೆ ಶೇ. 6.11ರಷ್ಟು ಆಗಿದೆ.